ಶಾಲೆ, ಕಾಲೇಜು ಖಾಲಿ ಮಾಡಲು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಪತ್ನಿಯಿಂದ ಡಿಡಿಪಿಐಗೆ ಪತ್ರ..!

KannadaprabhaNewsNetwork |  
Published : Mar 27, 2025, 01:02 AM IST
26ಕೆಎಂಎನ್ ಡಿ24,25 | Kannada Prabha

ಸಾರಾಂಶ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ಕಾಲದಲ್ಲಿ ಸ್ವಂತ ಕಟ್ಟಡದಲ್ಲಿ ವಿದ್ಯಾಭ್ಯಾಸಕ್ಕೆ ಆಶ್ರಯ ನೀಡಿದ್ದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಈಗ ಚುನಾವಣೆ ಸೋಲಿನ ನಂತರ ತಮ್ಮ ಕಟ್ಟಡದಲ್ಲಿದ್ದ ಶಾಲೆ, ಕಾಲೇಜನ್ನು ಖಾಲಿ ಮಾಡಿಸುತ್ತಿರುವುದು ಸಾರ್ವಜನಿಕರ ವಲಯದಲ್ಲಿ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬಿ.ಎಸ್. ಸುನೀಲ್

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ಕಾಲದಲ್ಲಿ ಸ್ವಂತ ಕಟ್ಟಡದಲ್ಲಿ ವಿದ್ಯಾಭ್ಯಾಸಕ್ಕೆ ಆಶ್ರಯ ನೀಡಿದ್ದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಈಗ ಚುನಾವಣೆ ಸೋಲಿನ ನಂತರ ತಮ್ಮ ಕಟ್ಟಡದಲ್ಲಿದ್ದ ಶಾಲೆ, ಕಾಲೇಜನ್ನು ಖಾಲಿ ಮಾಡಿಸುತ್ತಿರುವುದು ಸಾರ್ವಜನಿಕರ ವಲಯದಲ್ಲಿ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಸರ್ಕಾರಿ ಪ್ರೌಢಶಾಲೆ (ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ), ಪದವಿ ಪೂರ್ವ ಕಾಲೇಜಿಗೆ ಸರ್ಕಾರಿ ಜಾಗದ ಲಭ್ಯತೆ ಇಲ್ಲದ ಕಾರಣ 2001- 2002 ನೇ ಸಾಲಿನಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಮ್ಮದೇ ಜಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿದ್ದರು.

ಅಂದು 39 ವಿದ್ಯಾರ್ಥಿಗಳಿಂದ ಕೆ.ಎಂ.ದೊಡ್ಡಿ ಕಾಲೋನಿ ಬಳಿ ಸರ್ಕಾರಿ ಪ್ರೌಢಶಾಲೆ ಆರಂಭವಾಯಿತು. ನಂತರ ಪಿಯು ಕಾಲೇಜು, ಪದವಿ ಕಾಲೇಜು ಕೂಡಾ ಸೇರ್ಪಡೆಯಾಯಿತು. ಅಂದು ಡಿ.ಸಿ.ತಮ್ಮಣ್ಣ ಕಾಲೇಜು ಎಂದೇ ಜನಜನಿತವಾಯಿತು.

ಪ್ರಸ್ತುತ ಪ್ರೌಢಶಾಲೆಯಲ್ಲಿ 195 ವಿದ್ಯಾರ್ಥಿಗಳಿದ್ದಾರೆ. ಪಿಯು ಕಾಲೇಜಿನಲ್ಲಿ 244 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪದವಿ ಕಾಲೇಜಿಗೆ ಕೆ.ಎಂ.ದೊಡ್ಡಿ ಸಮೀಪದ ಮಣಿಗೆರೆಯಲ್ಲಿ ಸ್ವಂತ ಕಟ್ಟಡ ನಿರ್ಮಿಸಿದ್ದಾರೆ. 2024ರಲ್ಲಿ ಸ್ಥಳಾಂತರಿಸಲಾಗಿದೆ.

ಜನವರಿಯಲ್ಲಿ ಡಿಡಿಪಿಐಗೆ ಪತ್ನಿಯಿಂದ ಪತ್ರ:

ಡಿ.ಸಿ.ತಮ್ಮಣ್ಣ ಪತ್ನಿ ಪ್ರಮಿಳಾ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಗೆ 2025ರ ಜನವರಿ 6 ರಂದು ಬರೆದಿರುವ ಪತ್ರದಲ್ಲಿ ಕಳೆದ ಎರಡು ವರ್ಷಗಳ ಹಿಂದೆಯೇ ಶಾಲಾ, ಕಾಲೇಜನ್ನು ಖಾಲಿ ಮಾಡಲು ಮೌಖಿಕವಾಗಿ ತಿಳಿಸಿದ್ದೆವು. ಆದರೆ, ಕ್ರಮ ಕೈಗೊಂಡಿಲ್ಲ. ಪ್ರಸಕ್ತ ನನಗೆ 75 ವರ್ಷವಾಗಿದೆ. ನನ್ನ ಆಸ್ತಿಯನ್ನು ಮಕ್ಕಳಿಗೆ ವ್ಯವಸ್ಥೆ ಮಾಡಬೇಕಿದೆ. ಆದ್ದರಿಂದ ಮಾರ್ಚ್ ಒಳಗೆ ಬೇರೆಡೆಗೆ ವರ್ಗಾಹಿಸುವಂತೆ ಕೋರಿದ್ದಾರೆ. ಪರಿಣಾಮ ಶಿಕ್ಷಣ ಇಲಾಖೆ ಈಗ ಇಕ್ಕಟ್ಟಿಗೆ ಸಿಲುಕಿದೆ. ಮಾತ್ರವಲ್ಲ, ಡಿ.ಸಿ.ತಮ್ಮಣ್ಣನವರ ಈ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೂ ಕಾರಣವಾಗುತ್ತಿದೆ.

ಸ್ವಂತ ಕಟ್ಟಡದಿಂದ ಏಕಾಏಕಿ ಖಾಲಿ ಮಾಡುವಂತೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣರ ಪತ್ನಿ ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಪರಿಣಾಮ ಪ್ರಸ್ತುತ ಆ ಶಾಲೆ ಮತ್ತು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗು ಪಾಲಕರಲ್ಲಿಯೂ ಆತಂಕ ಶುರುವಾಗಿದೆ.

ಶಾಲೆ- ಕಾಲೇಜನ್ನು ಖಾಲಿ ಮಾಡಿಸಿದರೆ ನಾವು ಮತ್ತೆ ಯಾವ ಶಾಲೆ, ಕಾಲೇಜಿಗೆ ಹೋಗಬೇಕು ಎಂದು ಚಿಂತೆಗೆ ಬಿದ್ದಿದ್ದಾರೆ. ಸರ್ಕಾರಿ ಶಾಲೆ, ಕಾಲೇಜಿನಲ್ಲಿ ಶುಲ್ಕ ಕಡಿಮೆ ಇದೆ. ಈಗ ಖಾಸಗಿ ಶಾಲೆ ಕಾಲೇಜಿಗೆ ಹೋದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ಚಿಂತೆ ಪಾಲಕರನ್ನು ಕಾಡಲಾರಂಭಿಸಿದೆ. ಈ ಸಮಸ್ಯೆಗೆ ಶಿಕ್ಷಣ ಇಲಾಖೆ ಯಾವ ರೀತಿ ಪರಿಹಾರ ಕಲ್ಪಿಸಲಿದೆ ಎಂಬುದನ್ನು ಕಾದುನೋಡಬೇಕಿದೆ. ಮಾರ್ಚ್ ತಿಂಗಳ ಒಳಗೆ ಶಾಲೆ, ಕಾಲೇಜು ಖಾಲಿ ಮಾಡುವಂತೆ ಜನವರಿಯಲ್ಲಿ ಪತ್ರ ಬರೆದಿದ್ದಾರೆ. ಇಂದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಸರ್ಕಾರಿ ಜಾಗ, ಕಟ್ಟಡ ನಿರ್ಮಾಣ ಆಗುವ ತನಕ ಅವಕಾಶ ನೀಡುವಂತೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರಲ್ಲಿ ಮನವಿ ಮಾಡುತ್ತೇವೆ.

- ಎಚ್.ಶಿವರಾಮೇಗೌಡ, ಡಿಡಿಪಿಐ, ಮಂಡ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!