ಜೈಲಿನೆದುರು ವಿನೂತನವಾಗಿ ಪ್ರತಿಭಟಿಸಿ ರೈತ

KannadaprabhaNewsNetwork |  
Published : Feb 18, 2026, 01:45 AM IST
ರೈತರಿಗೆ ಸರಿಯಾಗಿ ಪರಿಹಾರ ನೀಡದೆ ಸತಾಯಿಸಿದ ಅಧಿಕಾರಿಯೋರ್ವರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತಕ್ಕೆ ಸಿಕ್ಕು ಜೈಲುಪಾಲಾದ ಬಳಿಕ ಜೈಲಿನೆದುರು ಸೋಪು, ಸೊಳ್ಳೆಬತ್ತಿಗಳೊಂದಿಗೆ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ರೈತರೋರ್ವರು ಸರ್ಕಾರಕ್ಕೆ ಹಣ ಉಳಿಸಿದ ಅಧಿಕಾರಿ ಆರೋಗ್ಯವಾಗಿರಲಿ ಎಂದು ವ್ಯಂಗ್ಯಭರಿತವಾಗಿ ಹಾರೈಸಿದರು. | Kannada Prabha

ಸಾರಾಂಶ

ಲಂಚ ಪಡೆಯುವಾಗ ಸಿಕ್ಕಿ ಬಿದ್ದು ಜೈಲು ಸೇರಿರುವ ಭೂಸ್ವಾಧೀನ ಅಧಿಕಾರಿಯೋರ್ವರಿಗೆ ಅವರಿಂದ ಅನ್ಯಾಯಕ್ಕೆ ಒಳಗಾಗಿ ರೈತರೋರ್ವರು ಜೈಲಿನ ಎದುರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ಘಟನೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲಂಚ ಪಡೆಯುವಾಗ ಸಿಕ್ಕಿ ಬಿದ್ದು ಜೈಲು ಸೇರಿರುವ ಭೂಸ್ವಾಧೀನ ಅಧಿಕಾರಿಯೋರ್ವರಿಗೆ ಅವರಿಂದ ಅನ್ಯಾಯಕ್ಕೆ ಒಳಗಾಗಿ ರೈತರೋರ್ವರು ಜೈಲಿನ ಎದುರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ಘಟನೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ಭೂ ಸ್ವಾಧೀನ ಅಧಿಕಾರಿ ಸಿದ್ಧಲಿಂಗರೆಡ್ಡಿಯವರು ಇತ್ತೀಚೆಗೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಸೇರಿದ್ದರು. ಇವರು ಅಧಿಕಾರದಲ್ಲಿ ಇರುವ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡುವ ಸಂದರ್ಭದಲ್ಲಿ ವಿಶುಕುಮಾರ್ ಎಂಬ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ನೋಟೀಸ್ ನೀಡಿದ್ದರು. ಈ ಜಮೀನಿನಲ್ಲಿ ಇದ್ದ ಶ್ರೀಗಂಧದ ಮರಕ್ಕೆ ಕೇವಲ 420 ರು. ನಿಗದಿಪಡಿಸಿದ್ದರು. ಇದರ ವಿರುದ್ಧ ರೈತನ ಮನವಿ ಮತ್ತು ಪ್ರತಿಭಟನೆಗೆ ಬೆಲೆ ನೀಡಿರಲಿಲ್ಲ. ಇದರಿಂದ ರೈತ ತೀವ್ರವಾಗಿ ನೊಂದಿದ್ದರು.

ಈ ನಡುವೆ ಸಿದ್ದಲಿಂಗ ರೆಡ್ಡಿ ಲಂಚ ಸ್ವೀಕರಿಸುವಾಗ ಜೈಲು ಪಾಲಾದ ಘಟನೆ ನಡೆದಿತ್ತು. ಇವರ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸುವ ಮೂಲಕ ಅವರ ಮಾನ ಹರಾಜು ಹಾಕಲು ನಿರ್ಧರಿಸಿದ ರೈತ ವಿಶುಕುಮಾರ್ ಅವರು ಸೊಳ್ಳೆ ಬತ್ತಿ, ಬಾಳೆ ಹಣ್ಣು ಬ್ರೆಡ್, ಮೈಸೂರು ಸ್ಯಾಂಡಲ್ ಸೋಪ್ ಇನ್ನಿತರ ವಸ್ತುಗಳೊಂದಿಗೆ ಜೈಲಿಗೆ ಆಗಮಿಸಿದರು. ಬಳಿಕ ಜೈಲಿನ ಎದುರು ವಿನೂತನವಾಗಿ ಪ್ರತಿಭಟನೆ ನಡೆಸಿದರು. ಸರ್ಕಾರಕ್ಕೆ ಹಣ ಉಳಿಸುವ ಕಾರಣಕ್ಕೆ ರೈತರಿಗೆ ಕಡಿಮೆ ಹಣ ನೀಡಿದ್ದಾರೆ ಎಂದು ವ್ಯಂಗ್ಯವಾಡಿದ ವಿಶುಕುಮಾರ್, ಇಂತಹ ಒಳ್ಳೆಯ ಅಧಿಕಾರಿ ಇನ್ನಷ್ಟು ಕಾಲ ಆರೋಗ್ಯವಾಗಿ ಸರ್ಕಾರದ ಮತ್ತು ಜನರ ಸೇವೆ ಮಾಡಬೇಕಾದ ಅಗತ್ಯವಿದೆ. ಹೀಗಾಗಿ ಅವರು ಆರೋಗ್ಯವಾಗಿರಲು ಸೋಪು, ಬ್ರೆಡ್, ಸೊಳ್ಳೆ ಕಡಿತದಿಂದ ಪಾರಾಗಲು ಸೊಳ್ಳೆ ಬತ್ತಿ ಇನ್ನಿತರ ವಸ್ತುಗಳನ್ನು ಕೊಡಲು ಬಂದಿದ್ದೇನೆ. ಇಂತಹ ಅಧಿಕಾರಿಗಳು ಈ ದೇಶಕ್ಕೆ ಬೇಕು, ಅವರು ಆರೋಗ್ಯವಾಗಿರಲಿ ಎಂದು ಹಾರೈಸುವುದಕ್ಕಾಗಿ ಬಂದಿದ್ದೇನೆ ಎಂದು ವ್ಯಂಗ್ಯ ಭರಿತ ಮಾತುಗಳನ್ನು ಆಡುವ ಮೂಲಕ ತಮ್ಮ ಪ್ರತಿಭಟನೆ ಮಾಡಿದರು. ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಲಿಕೆ ವಾರ್ಡ್ ರಚನೆ ಅವೈಜ್ಞಾನಿಕ: ಪಾಲಿಕೆ ಸದಸ್ಯರ ಬೇಸರ
ಫೆ.24ರಿಂದ ಕೋಟೆ ಶ್ರೀ ಮಾರಿಕಾಂಬ ಜಾತ್ರೆ: ಎಸ್.ಕೆ. ಮರಿಯಪ್ಪ ಮಾಹಿತಿ