ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ (ಆರ್ ಐಡಿಎಫ್) ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಗೋದಾಮು, ಲೋಕಾರ್ಪಣೆಗೊಳ್ಳುವ ಮೊದಲೇ ಕುಸಿಯುವ ಹಂತಕ್ಕೆ ತಲುಪಿದೆ.
ಶಿವಕುಮಾರ ಕುಷ್ಟಗಿ
ಗದಗ: ನಗರದ ಎಪಿಎಂಸಿ ಕಚೇರಿ ಸಮೀಪದ ರೈತ ಸಂಪರ್ಕ ಕೇಂದ್ರದ ಹಿಂದುಗಡೆ ನಿರ್ಮಾಣವಾಗಿರುವ ನೂತನ ಗೋದಾಮು ಸಾರ್ವಜನಿಕರ ತೆರಿಗೆ ಹಣ ಹೇಗೆ ಲೂಟಿಯಾಗಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ.
ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ (ಆರ್ ಐಡಿಎಫ್) ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಗೋದಾಮು, ಲೋಕಾರ್ಪಣೆಗೊಳ್ಳುವ ಮೊದಲೇ ಕುಸಿಯುವ ಹಂತಕ್ಕೆ ತಲುಪಿದೆ.
₹25 ಲಕ್ಷದ ಕಾಮಗಾರಿ: 2023- 24ನೇ ಸಾಲಿನಲ್ಲಿ ಒಟ್ಟು ₹25 ಲಕ್ಷ ವೆಚ್ಚದಲ್ಲಿ ಈ ರೈತ ಗೋದಾಮು ನಿರ್ಮಾಣವಾಗಿತ್ತು. ಕೃಷಿಕರು ಬೆಳೆದ ಬೆಳೆ ಹಾಗೂ ಕೃಷಿ ಸಾಮಗ್ರಿಗಳನ್ನು ಸುರಕ್ಷಿತವಾಗಿ ದಾಸ್ತಾನು ಮಾಡಲು ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಸರ್ಕಾರ ಈ ಯೋಜನೆ ರೂಪಿಸಿತ್ತು.
ಆದರೆ, ಕಳಪೆ ಕಾಮಗಾರಿಯ ಪರಮಾವಧಿ ಎಂಬಂತೆ ಗೋದಾಮಿನ ಚಾವಣಿ (ಸ್ಲ್ಯಾಬ್) ಈಗಾಗಲೇ ಒಂದು ಕಡೆ ಕೆಳಗೆ ವಾಲಿ ನಿಂತಿದೆ. ಕೇವಲ ಇದೊಂದೇ ಸಮಸ್ಯೆಯಲ್ಲ, ಗೋದಾಮು ಒಳಗಡೆ ಪ್ರವೇಶವಾದರೆ ಸಾಕು, ಪ್ರತಿ ಹಂತದಲ್ಲಿಯೂ ಕಳಪೆ ಕಾಮಗಾರಿಯ ದರ್ಶನವಾಗುತ್ತದೆ. ಇದನ್ನೆಲ್ಲ ಮುಚ್ಚಿಡಲು ಹೊರಗಡೆ ಮಾತ್ರ ಆಕರ್ಷಕ ಬಣ್ಣ ಬಳಿದು ಹೊಳೆಯುವಂತೆ ಮಾಡುವ ಪ್ರಯತ್ನವನ್ನು ಅಧಿಕಾರಿಗಳು ನಡೆಸಿದ್ದಾರೆ.
ರಸ್ತೆಯೇ ಇಲ್ಲದ ಗೋದಾಮು: ಎಪಿಎಂಸಿ ರಸ್ತೆಯ ರೈತ ಸಂಪರ್ಕ ಕೇಂದ್ರ ಮತ್ತು ಎಪಿಎಂಸಿ ವಾಣಿಜ್ಯ ಮಳಿಗೆಗಳ ಮಧ್ಯದ ಅತ್ಯಂತ ಇಕ್ಕಟ್ಟಾದ ಜಾಗದಲ್ಲಿ ಈ ಗೋದಾಮು ನಿರ್ಮಾಣ ಮಾಡಲಾಗಿದೆ. ಅಚ್ಚರಿಯ ಸಂಗತಿಯೆಂದರೆ ಈ ಗೋದಾಮಿಗೆ ಹೋಗಲು ಕನಿಷ್ಠ ಸಂಪರ್ಕ ರಸ್ತೆಯೇ ಇಲ್ಲ. ರಸ್ತೆಯೇ ಇಲ್ಲದ ಜಾಗದಲ್ಲಿ ಅದೇಗೆ ಬೃಹತ್ ವಸ್ತುಗಳನ್ನು ಸಾಗಾಟ ಮಾಡಲು ಸಾಧ್ಯ? ಇಷ್ಟು ಇಕ್ಕಟ್ಟಾದ ಜಾಗದಲ್ಲಿ ಗೋದಾಮು ನಿರ್ಮಾಣ ಮಾಡಲು ಅನುಮತಿ ನೀಡಿದವರಾರು? ಇತ್ಯಾದಿ ಅನುಮಾನಗಳಿಗೆ ಅಧಿಕಾರಿಗಳು ಉತ್ತರಿಸಬೇಕಿದೆ.
ಸಮಗ್ರ ತನಿಖೆಯಾಗಲಿ: ಈ ಕಾಮಗಾರಿಗೆ ಸಂಬಂಧಿಸಿದ ಎಲ್ಲ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಇದನ್ನು ಕೃಷಿ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆಯೂ ತರಾತುರಿಯಲ್ಲಿ ನಡೆಯುತ್ತಿವೆ.
ಅಧಿಕಾರಿಗಳೂ ಶಾಮೀಲು
ಈ ಕಾಮಗಾರಿಯ ನಿರ್ಮಾಣದ ಅಧಿಕೃತ ಹೊಣೆಯನ್ನು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್ ಐಡಿಎಲ್) ಸಂಸ್ಥೆ ಹೊತ್ತುಕೊಂಡಿತ್ತು. ಆದರೆ, ವಾಸ್ತವದಲ್ಲಿ ಕೆಆರ್‌ಐಡಿಎಲ್ ಅಧಿಕಾರಿಗಳು ಕೇವಲ ಹೆಸರಿಗಷ್ಟೇ ಇದ್ದು, ಇಡೀ ಕಾಮಗಾರಿಯನ್ನು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರೇ ನಿರ್ವಹಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪರಿಶೀಲಿಸಿ ಕ್ರಮ: ರೈತ ಸಂಪರ್ಕ ಕೇಂದ್ರದ ನೂತನ ಗೋದಾಮು ನಿರ್ಮಾಣ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಕಳಪೆ ಕಾಮಗಾರಿ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆಆರ್ ಐಡಿಎಲ್ ಅಧಿಕಾರಿ ಪರ್ವೇಜ್ ಧಾರವಾಡ ತಿಳಿಸಿದರು.ರೈತ ಸಂಪರ್ಕ ಕೇಂದ್ರದ ನೂತನ ಗೋದಾಮು ಇನ್ನೂ ಕೃಷಿ ಇಲಾಖೆಗೆ ಹಸ್ತಾಂತರ ಆಗಿಲ್ಲ. ಹಸ್ತಾಂತರ ಮಾಡಿಕೊಳ್ಳುವಾಗ ಪರಿಶೀಲಿಸಿ, ಸರಿಯಾಗಿದ್ದರೆ ಮಾತ್ರ ಹಸ್ತಾಂತರ ಮಾಡಿಕೊಳ್ಳಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.