ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಾಡಾನೆಗಳಿಂದ ಸಮಸ್ಯೆಗಳಿವೆ, ಇಲ್ಲ ಅಂತ ಹೇಳಲ್ಲ. ಮುಂದೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಅರಣ್ಯ ಇಲಾಖೆ ಜವಾಬ್ದಾರಿಯಾಗಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ರೈತರಿಗೆ ಅಭಯ ನೀಡಿದರು.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಂಚಿನ ಹೊಸಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ರೈತರ ಸಭೆಯಲ್ಲಿ ರೈತರು ಹಾಗೂ ಅಧಿಕಾರಿಗಳ ಮಾತು ಆಲಿಸಿದ ಬಳಿಕ ಮಾತನಾಡಿ, ಕಾಡಾನೆ ಸಮಸ್ಯೆಗಳಿಗೆ ಪರಿಹಾರಕ್ಕೆ ರೇಲ್ವೆ ಬ್ಯಾರಿಕೇಡ್ ಒಂದೇ ಇರುವ ಪ್ರಮುಖ ದಾರಿ. ಈ ಹಿಂದೆ ಆದ ವಿಚಾರವನ್ನೇ ಹಿಡಿದುಕೊಂಡು ರೈತರು ಹೋಗಬಾರದು. ಅಧಿಕಾರಿಗಳು ಕೂಡ ತಮ್ಮ ದೋರಣೆ ಬಿಟ್ಟು ಕಾಡಾನೆಗಳ ಹಾವಳಿ ತಡೆಗೆ ಮುಂದಾಗಬೇಕು. ಒಟ್ಟಾರೆ ಕಾಡಾನೆ ಹಾವಳಿ ತಡೆಗಟ್ಟಬೇಕು ಎಂದು ಸಲಹೆ ನೀಡಿದರು.
ರೈತರು ಉಳುವ ಭೂಮಿ ಅರಣ್ಯ ಇಲಾಖೆ ಎಂದು ದಾಖಲೆಗಳು ತೋರುವ ಕಾರಣ ಕಾಡಾನೆ ಮಾಡಿದ ಬೆಳೆ ನಾಶಕ್ಕೆ ಪರಿಹಾರ ಕೊಡಲು ಆಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಿ ಎಂದರೆ ಆಗಲ್ಲ, ಸರ್ಕಾರ ಬಗೆಹರಿಸಬೇಕಾದ ಸಮಸ್ಯೆ ಎಂದು ರೈತರಿಗೆ ಮನವರಿಕೆ ಮಾಡಿಕೊಟ್ಟರು.ರೇಲ್ವೆ ಬ್ಯಾರಿಕೇಡ್ ಅನುದಾನ ಬಂದಿದೆ, ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿ ಆರಂಭವಾದರೆ ಸಮಸ್ಯೆಗೆ ಪರಿಹಾರ ಸಿಗಲಿದೆ ಇನ್ನೂ ರೇಲ್ವೆ ಬ್ಯಾರಿಕೇಡ್ ಅಗತ್ಯವಾಗಿ ಅನುದಾನಕ್ಕಾಗಿ ಅರಣ್ಯ ಸಚಿವರ ಭೇಟಿ ಮಾಡಿ ಮನವಿ ಮಾಡುವೆ ಎಂದರು.
ರೈತರ ಫಸಲು ಕಾಡಾನೆಗಳಿಂದ ನಾಶವಾದ ಪರಿಹಾರ ಹಣ ವಿತರಿಸಲು ಅರಣ್ಯ ಇಲಾಖೆ ಮುಂದಾಗಬೇಕು,ಇರುವ ಅನುದಾನದಲ್ಲಿ ಪರಿಹಾರ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ರೇಲ್ವೆ ಬ್ಯಾರಿಕೇಡ್ ಇಲ್ಲದ ಜಾಗದಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಹಳ್ಳಿಗರ ಯುವಕರ ನೇಮಿಸಿಕೊಂಡು ಕಾವಲು ಕಾಯುವ ಕೆಲಸ ಸದ್ಯಕ್ಕೆ ಮಾಡಿದರೆ ಕಾಡಾನೆಗಳ ಉಪಟಳ ಸ್ವಲ್ಪ ತಗ್ಗಿಸಬಹುದು ಎಂದರು.ಹೊಸಪುರ ಕಡೆಯಿಂದ ಕಾಡಾನೆ ಬರಲು ಕಾಡಿನಲ್ಲಿ ಮೇವು ಇಲ್ಲದಿರುವುದು ಜೊತೆಗೆ ನೀಲಗಿರಿ ಪ್ಲಾಂಟೇಶನ್ ಇರುವ ಕಾರಣ ಆಹಾರ ಹುಡುಕಿ ರೈತರ ಜಮೀನಿನತ್ತ ಬರುತ್ತಿವೆ ಎಂಬ ಮಾತು ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಈ ಸಮಸ್ಯೆಗೆ ಮೊದಲು ಪರಿಹಾರ ಕಂಡು ಹಿಡಿಯಿರಿ. ಕಂದಕ ಮುಚ್ಚಿದ ಕಡೆ ಕಂದಕದ ಹೂಳು ತೆಗೆಯಬೇಕು.ಸೋಲಾರ್ ನಿರ್ವಹಣೆ ಮಾಡುವ ಕೆಲಸ ಅರಣ್ಯ ಇಲಾಖೆ ಅಧಿಕಾರಿಗಳು ತುರ್ತಾಗಿ ಮಾಡುವ ಮೂಲಕ ರೈತರಿಗೆ ನೆರವಾಗಿ ಎಂದರು.
ಶಾಸಕರೊಂದಿಗೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್.ಪ್ರಭಾಕರನ್, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಎಸಿಎಫ್ ಕೆ.ಸುರೇಶ್, ಎಪಿಎಂಸಿ ಅಧ್ಯಕ್ಷ ಆರ್.ಎಸ್.ನಾಗರಾಜು, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ನೀಲಕಂಠಪ್ಪ, ಆರ್‌ಎಫ್‌ಒ ಹನುಮಂತಪ್ಪ ಪಾಟೀಲ್ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ರೈತರಿದ್ದರು.