ಕನ್ನಡಪ್ರಭ ವಾರ್ತೆ ಮಂಡ್ಯ
ರೈತರು ಹಾಗೂ ಜನತೆಗೆ ಸ್ಪಂದಿಸುವ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಸಹಕಾರ ಕ್ಷೇತ್ರಗಳ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕೆಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.ತಾಲೂಕಿನ ಗೆಜ್ಜಲಗೆರೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರ ಚುನಾವಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿರೋಧ ಪಕ್ಷಗಳು ತಿಳಿದುಕೊಂಡ ರೀತಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಕುಗ್ಗಿಲ್ಲ. ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿರುವ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಅರಿತಿರುವ ಮದ್ದೂರು ಕ್ಷೇತ್ರದ ಜನರು ಪಕ್ಷವನ್ನು ಬಲಿಷ್ಠವಾಗಿ ಕಟ್ಟಿದ್ದಾರೆ. ಇದು ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಹೆಚ್ಚಿನ ಸಹಕಾರ ದೊರೆಯಲಿದೆ ಎಂದು ತಿಳಿಸಿದರು.ಸದಾ ರೈತರ ಪರವಾಗಿ ಹಾಗೂ ಹಿತಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವುದು ಜೆಡಿಎಸ್ ಮತ್ತು ಬಿಜೆಪಿ ಮಾತ್ರ. ಇದನ್ನರಿತು ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸಹಕಾರ ಕ್ಷೇತ್ರದ ಒಳಿತಿಗಾಗಿ ಸಹಕಾರ
ನೀಡುವಂತೆ ಕೋರಿದರು.ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ಜಿಲ್ಲೆಗೆ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಹಾಗೂ ರೈತ ಹಾಗೂ ಜನಪರ ಕೆಲಸ ಮಾಡಿರುವುದು ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ಮಾಜಿ ಪ್ರಧಾನ ಮಂತ್ರಿ ದೇವೇಗೌಡ ಅವರು ಜಿಲ್ಲೆಯ ರೈತರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಾಲಮನ್ನಾ, ಮೈಷುಗರ್ ಕಾರ್ಖಾನೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದರು. ಪ್ರಧಾನಿಗಳಾದ ನರೇಂದ್ರ ಮೋದಿ ಅವರು, ರೈತರಿಗೆ ಅನುಕೂಲ ಕಲ್ಪಿಸಲೆಂದು 2 ಸಾವಿರ, ಬೆಳೆ ವಿಮೆ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದ್ದಾರೆ. ಹೀಗಾಗಿ ರೈತರ ಅಭಿವೃದ್ಧಿಗೆ ಮೈತ್ರಿ ಪಕ್ಷ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ನಮ್ಮ ಮುಖಂಡರು ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಮಾತನಾಡಿ, ನವೆಂಬರ್ 2 ರಂದು ನಡೆಯಲಿರುವ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ಮದ್ದೂರು ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರಕ್ಕೆ ಎನ್.ಡಿ.ಎ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜಿ.ಬಿ ಕೃಷ್ಣ (ಡಾಬಾ ಕಿಟ್ಟಿ) ಹಾಗೂ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಚುನಾವಣೆಯಲ್ಲಿ ನಿರ್ದೇಶಕರ ಸ್ಥಾನಕ್ಕೆ ಮಂಡ್ಯ ವಿಭಾಗದ (ಮಂಡ್ಯ, ಮದ್ದೂರು, ಮಳವಳ್ಳಿ) ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರಕ್ಕೆ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿ.ಎಂ. ವಿಶ್ವನಾಥ್ ಇಬ್ಬರನ್ನು ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲು ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕೆಂದು ವಿನಂತಿ ಮಾಡಿದರು.
ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಕೆ.ಸತೀಶ್, ಮುಖಂಡ ಕೂಳಗೆರೆ ಶೇಖರ್ ಇತರರಿದ್ದರು.