ಕನ್ನಡಪ್ರಭ ವಾರ್ತೆ ಮದ್ದೂರು
ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ರಾಜ್ಯ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಪಟ್ಟಣದ ತಾಲೂಕು ಕಚೇರಿ ಮುಂದೆ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರೋಧಿ ನೀತಿಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.
ಈ ವೇಳೆ ಅಧ್ಯಕ್ಷ ವಿ.ಸಿ. ಉಮೇಶ್ ಮಾತನಾಡಿ, ೨೦೨೨- ೨೩ನೇ ಸಾಲಿನ ಕಬ್ಬು ಅರೆದಿರುವ ಹಂಗಾಮಿನಲ್ಲಿ ಅಂದಿನ ರಾಜ್ಯ ಸರ್ಕಾರ ಟನ್‌ಗೆ ೧೫೦ ರು. ಕಬ್ಬು ಬೆಳೆಗಾರರಿಗೆ ಪಾವತಿಸುವಂತೆ ಘೋಷಿಸಿದ್ದು, ಈ ಹಣವನ್ನು ಕೂಡಲೇ ಪಾವತಿ ಮಾಡಲು ರಾಜ್ಯ ಸರ್ಕಾರ ಶೀಘ್ರ ಕ್ರಮವಹಿಸಬೇಕು. ಪ್ರಸ್ತುತ ಸಾಲಿನಲ್ಲಿ ಒಂದು ತಿಂಗಳಲ್ಲಿ ಭತ್ತದ ಬೆಳೆ ಕಟಾವಿಗೆ ಬರುತ್ತಿದ್ದು, ಭತ್ತಕ್ಕೆ ಕ್ವಿಂಟಲ್‌ಗೆ ಕನಿಷ್ಠ ೩,೫೦೦ ರು. ಬೆಲೆ ನಿಗದಿಗೊಳಿಸಬೇಕು, ನವೆಂಬರ್ ತಿಂಗಳಲ್ಲೇ ಖರೀದಿ ಕೇಂದ್ರಗಳನ್ನು ತೆರೆದು ಭತ್ತ, ರಾಗಿ ಖರೀದಿಸಬೇಕು ಎಂದು ಒತ್ತಾಯಿಸಿದರು.ರಾಜ್ಯ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ಭತ್ತ ಹಾಗೂ ರಾಗಿ ಖರೀದಿ ಕೇಂದ್ರಗಳನ್ನು ಶಾಶ್ವತ ಖರೀದಿ ಕೇಂದ್ರಗಳಾಗಿ ವರ್ಷ ಪೂರ್ತಿ ಖರೀದಿ ಮಾಡುವಂತೆ ಆದೇಶ ಮಾಡಬೇಕು. ಕೇಂದ್ರ ಸರ್ಕಾರ ಡಾ. ಸ್ವಾಮಿನಾಥನ್ ವರದಿಯನ್ನು ಜಾರಿಗೆ ತಂದು ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಹಿರಿಯ ಮುಖಂಡ ಲಿಂಗಪ್ಪಾಜಿ ಮಾತನಾಡಿ, ಬ್ಯಾಂಕುಗಳಲ್ಲಿ ಒತ್ತೆ ಇಟ್ಟಿರುವ ಚಿನ್ನಾಭರಣಗಳನ್ನು ನವೀಕರಿಸಲು ಅಸಲು ಮತ್ತು ಬಡ್ಡಿ ಪಾವತಿಸುವಂತೆ ರೂಪಿಸಿರುವ ನೀತಿಯನ್ನು ಕೈಬಿಟ್ಟು ಹಿಂದಿನಂತೆ ಬಡ್ಡಿ ಪಡೆದು ಸಾಲ ನವೀಕರಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಕೂಡಲೇ ರಾಜ್ಯ ಸರ್ಕಾರ ನಿರ್ದೇಶನ ನೀಡಬೇಕು. ಬೆಂಗಳೂರು ಕುಡಿಯುವ ನೀರಿನ ಆರನೇ ಹಂತದ ಯೋಜನೆಯನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿದರು.ಮುಖಂಡ ಜಿ.ಎ.ಶಂಕರ್ ಮಾತನಾಡಿ, ೫ ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಸಾಮಾನ್ಯ ಸಭೆ ಕರೆಯಬಾರದು ಎಂದು ಒತ್ತಡ ಹೇರಲಾಗಿದೆ. ನಗರಸಭೆಯಿಂದ ೫ ಗ್ರಾಮಗಳನ್ನು ಕೈಬಿಡಬೇಕು ಎಂದು ಚಳವಳಿ ಮಾಡಿದ್ದು, ಸರ್ಕಾರದ ಗಮನಕ್ಕೆ ಹಾಗೂ ನ್ಯಾಯಾಲಯದ ಮೊರೆಗೆ ಹೋಗಿದ್ದೇವೆ. ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕರ ಕೆಲಸ ಮಾಡುವಂತೆ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಪರಶುರಾಮ್ ಸತ್ತಗೇರಿ ಮಾತನಾಡಿ, ತಾಲೂಕು ಕಚೇರಿಯಲ್ಲಿರುವ ಪೌತಿ ಖಾತೆಗಳನ್ನು ಪ್ರತಿನಿತ್ಯ ಇಷ್ಟೇ ಮಾಡಬೇಕೆಂದು ಆರ್‌ಐ, ವಿ.ಎ.ಗಳಿಗೆ ನಿಗದಿಪಡಿಸಲಾಗಿದೆ. ಇತರೆ ಖಾತೆ ಬದಲಾವಣೆಗಳು, ರೈತರ ಯಾವುದೇ ಸಮಸ್ಯೆಗಳನ್ನು ಅರ್ಜಿ ನೀಡಿದ ೧೫ ದಿನದೊಳಗೆ ಪರಿಹರಿಸಿಕೊಡಬೇಕು, ಅವರನ್ನು ಅಲೆದಾಡಿಸಬಾರದು ಎಂದು ನಿರ್ದೇಶನ ನೀಡಿದ್ದೇನೆ. ಯಾವುದಾದರೂ ಸಮಸ್ಯೆ ಇದ್ದರೆ ನೇರವಾಗಿ ಬಂದು ನಮ್ಮನ್ನು ಸಂಪರ್ಕಿಸಿದರೆ ಆ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿಕೊಡುತ್ತೇವೆ ಎಂದರು.ತಾಪ ಇಒ ರಾಮಲಿಂಗಯ್ಯ ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ಸಾಮಾನ್ಯ ಸಭೆಗಳನ್ನು ಕರೆಯುವಂತಿಲ್ಲ. ಯಾವುದೇ ಪಂಚಾಯಿತಿ ಮಟ್ಟದಲ್ಲಿ ಅವ್ಯವಹಾರ ನಡೆದಿದ್ದರೆ ಅಂತಹ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳ ಮೇಲೆ ದೂರು ನೀಡಿದರೆ ತನಿಖೆ ಮಾಡಿ ಪರಿಶೀಲಿಸಿ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
ಪ್ರತಿಭಟನೆಯಲ್ಲಿ ರೈತ ಸಂಘದ ಗೌರವಾಧ್ಯಕ್ಷ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ವಿನೋದ್ ಬಾಬು, ಖಜಾಂಚಿ ಅಣ್ಣೂರು ಬೋರೇಗೌಡ, ರಮ್ಯ, ರಾಜಮಣಿ, ಲಕ್ಷ್ಮೀ, ರವಿಕುಮಾರ್, ರಾಧಾ, ಗೊಲ್ಲರದೊಡ್ಡಿ ಅಶೋಕ್, ದೇವರಾಜು, ರಾಜೇಶ, ರಾಮಣ್ಣ, ನರಸಿಂಹಯ್ಯ, ಜವರೇಗೌಡ, ದಯಾನಂದ, ಶಿವಶಂಕರ್, ವೀರಪ್ಪ ಅರಸು, ಶ್ರೀಕಂಠಯ್ಯ, ವೆಂಕಟೇಶ್, ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.