ದೇಗುಲ ಕಳಸ ಪ್ರತಿಷ್ಠಾಪನೆ, ಉತ್ಸವ
ದೇವರು ಮತ್ತು ರೈತರೇ ಇಲ್ಲದಿದ್ದರೆ ಯಾರೂ ಸಹ ಜೀವಂತವಾಗಿ ಇರಲು ಸಾಧ್ಯವೇ ಇಲ್ಲ. ಸದ್ಯದ ಸ್ಥಿತಿಯಲ್ಲಿ ರೈತರೇ ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಮೂಲ ಬೇರಾಗಿದ್ದಾರೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಮಾಯಸಂದ್ರ ಹೋಬಳಿಯ ಬ್ಯಾಲಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಉಡಸಲಮ್ಮ ಮೂಲ ದೇವರ ನೂತನ ದೇವಾಲಯ ಪ್ರವೇಶ ಸ್ಥಿರ ಬಿಂಬ ಪ್ರತಿಷ್ಠಾಪನಾ ಮತ್ತು ವಿಮಾನ ಗೋಪುರ ಕಳಸ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಬಿಷೇಕ ಮಹೋತ್ಸವದ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ ಆಶೀರ್ವಚನ ನೀಡಿದರು.ಯಾವುದೇ ಮರಗಳು ಗಟ್ಟಿಯಾಗಿ ನಿಲ್ಲಲು ಹಾಗೂ ಸದೃಢವಾಗಿ ಬೆಳೆಯಲು ಬೇರುಗಳೇ ಮುಖ್ಯ ಆಧಾರ. ಆದರೆ ಮರದ ಬೇರಿನ ಸೇವೆಯನ್ನು ಯಾರೂ ಸಹ ನೆನೆಪಿಸಿಕೊಳ್ಳುವುದಿಲ್ಲ. ಅದರಂತೆ ರೈತರ ಬದುಕು ದೇಶದ ಅಭಿವೃದ್ದಿಗೆ, ಆರ್ಥಿಕತೆ ಮುಂದುವರಿಯಲು ಕೈಗಾರಿಕೆಗಳು ನಡೆಯಲು ಸಹಕಾರಿಯಾಗಿದೆ. ರೈತರು ಉತ್ಪಾದಿಸುವ ವಸ್ತುಗಳ ಮೇಲೆ ನಿಂತಿದೆ. ಆದರೂ ಸಹ ರೈತರನ್ನು ನಿರ್ಲಕ್ಷಿಸಲಾಗುತ್ತಿದೆ. ರೈತರು ತಮ್ಮ ನಿತ್ಯ ಕಾಯಕದ ಜತೆಗೆ ದೇವರ ಪೂಜೆ, ಧಾರ್ಮಿಕ ಕಾರ್ಯವನ್ನು ಮರೆಯುವುದಿಲ್ಲ. ಆದ್ದರಿಂದಲೇ ಹಳ್ಳಿಗಳಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿದೆ ಎಂದು ಹೇಳಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಈ ಭಾಗದಲ್ಲಿ ಎಲ್ಲ ಕೆರೆ ಕಟ್ಟೆಗಳನ್ನು ಹೇಮಾವತಿ ನೀರು ಹರಿಸಿ ತುಂಬಿಸಲಾಗಿದೆ. ಕೆರೆ ಕಟ್ಟೆ ತುಂಬಿದರೆ ರೈತರು ಸಂತೋಷವಾಗಿ ದೇವರ ಕಾರ್ಯ ಮಾಡುತ್ತಾರೆ. ಭಕ್ತರು ಸೇರಿ ಬ್ಯಾಲಹಳ್ಳಿ ಗ್ರಾಮದಲ್ಲಿ ಉತ್ತಮವಾದ ದೇವಾಲಯ ನಿರ್ಮಾಣ ಮಾಡಿದ್ದಾರೆ. ದೇವಾಲಯ ಆವರಣದಲ್ಲಿ ಸಮುದಾಯ ಭವನ ಅವಶ್ಯಕತೆ ಇದೆ. ಸಮುದಾಯ ಭವನ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.