ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೃಷ್ಣಾ ಮೇಲ್ದಂಡೆ ಯೋಜನೆಯ 5.24 ಮೀಟರ್ ವರೆಗೆ ಮುಳುಗಡೆಯಾಗುವ ಜಮೀನುಗಳನ್ನು ಭೂ ಸ್ವಾಧೀನ ಮಾಡಿಕೊಂಡು ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಭೂಸ್ವಾಧೀನ ಕೈ ಬಿಡಬೇಕು ಎಂದು ಆಗ್ರಹಿಸಿ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ರೈತರು ದಿಢೀರ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಇಲ್ಲಿನ ಯುಕೆಪಿ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಕಚೇರಿ ಎದುರು ಶುಕ್ರವಾರ ಬೆಳಗ್ಗೆ ಯುಕೆಪಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಸುನೀಲಕುಮಾರ ಪ್ರಥಮ ಸಭೆ ಮಾಹಿತಿ ತಿಳಿಯುತ್ತಿದ್ದಂತೆ ಆಗಮಿಸಿದ ರೈತರು ಘೇರಾವ ಹಾಕಿದರು. ಕೃಷ್ಣಾ ಮೇಲ್ದಂಡೆ ಯೋಜನಾ ಸಂತ್ರಸ್ತರ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಉಚ್ಛ ನ್ಯಾಯಾಲಯವು ಛಾಟಿ ಬೀಸಿದರು ನಾಚಿಕೆ ಇಲ್ಲದಂತೆ ಸರ್ಕಾರ ವರ್ತಿಸುತ್ತಿದೆ ಎಂದು ಕಿಡಿಕಾರಿದರು.
ನ್ಯಾಯವಾದಿ ಶಿವಾನಂದ ಟವಳಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡು ದಶಕಗಳೇ ಗತಿಸಿದರು ಸರಿಯಾದ ನ್ಯಾಯ ಸರ್ಕಾರ ಒದಗಿಸುತ್ತಿಲ್ಲ. ಮುಖ್ಯವಾಗಿ 5.24 ಮೀಟರ್ ವರೆಗೆ ಮುಳಗಡೆಯಾಗುತ್ತದೆ ಅಂತ 4(1), 9(1) ನೋಟಿಫಿಕೇಶನ್ ನೀಡಿದೆ. ಆದರೇ ಇದು ವರೆಗೂ ಪರಿಹಾರ ನೀಡಿಲ್ಲ. ಉತಾರದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ ಅಂತ ನಮೂದು ಆಗಿದೆ. ಇದರಿಂದ ಜಮೀನಿನ ಮೇಲೆ ಸಾಲ ಪಡೆಯಲು ಆಗುತ್ತಿಲ್ಲ. ವಹಿವಾಟು ನಡೆಯುತ್ತಿಲ್ಲ. ಇದರಿಂದ ರೈತರು ರೋಸಿ ಹೋಗಿದ್ದಾರೆ. ಪರಿಹಾರ ಧನ ನೀಡಲು ಕಾಂಗ್ರೆಸ್ ಸರ್ಕಾರ ಮೀನಾಮೇಷ ಎನಿಸುತ್ತಿದೆ ಎಂದು ಹರಿಹಾಯ್ದರು.ಮುಖಂಡ ಪ್ರಕಾಶ ಅಂತರಗೊಂಡ ಮಾತನಾಡಿ, ಬಾಗಲಕೋಟೆ-ವಿಜಯಪುರ ಜಿಲ್ಲೆಯ ರೈತರು ನೀರಾವರಿಗಾಗಿ ಭೂಮಿ ತ್ಯಾಗ ಮಾಡಿದ್ದಾರೆ. ಇದೀಗ ಸರ್ಕಾರ 5.22 ಮೀಟರ್ ವರೆಗೆ ಮಾತ್ರ ಪರಿಹಾರ ನೀಡುತ್ತೇವೆ ಅಂತ ಹೇಳುತ್ತಿದೆ. ಇದರಿಂದ ರೈತರಿಗೆ ಅನ್ಯಾಯ ವಾಗುತ್ತದೆ. ಅನೇಕ ರೈತರ ಭೂಮಿ ಅರ್ಧಕ್ಕೆ ಪರಿಹಾರ ಸಿಕ್ಕಂತಾಗುತ್ತದೆ. ಪೂರ್ಣ ಪ್ರಮಾಣದಲ್ಲಿ ಭೂಸ್ವಾಧೀನಮಾಡಿಕೊಂಡು ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡಬೇಕು. ಉತಾರದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಅಂತ ಇರುವುದನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ವೆಂಕಪ್ಪ ಗಿಡ್ಡಪ್ಪನವರ, ಅಶೋಕ ಲಾಗಲೂಟಿ, ನಾಗೇಶ ಸೋರಗಾಂವಿ, ಮಲ್ಲಪ್ಪ ಕೌಜಲಗಿ, ಸಂಗಪ್ಪ ಕೆರಕಲಮಟ್ಟಿ ಇದ್ದರು. ಅಲ್ಲದೆ ಕಾತರಕಿ, ಅಂಬ ಲಝೇರಿ, ಕೆರಕಲಮಟ್ಟಿ, ಮಲ್ಲಾಪುರ, ಕೋರ್ತಿ, ಬೆಣ್ಣೂರ, ಟಕ್ಕಳಕಿ, ಗೋವಿನದಿನ್ನಿ, ಗಲಗಲಿ ಸೇರಿದಂತೆ ವಿವಿಧ ಗ್ರಾಮಸ್ಥರು ಭಾಗವಹಿಸಿದ್ದರು.