ಶಿರಹಟ್ಟಿ ತಾಲೂಕಿನಲ್ಲಿ ವಾರದಿಂದ ಸುರಿಯುವ ಮಳೆಗೆ ಕೃಷಿಕರು ಕಂಗಾಲು

KannadaprabhaNewsNetwork |  
Published : May 27, 2025, 12:57 AM IST
ಪೋಟೊ-೨೬ ಎಸ್.ಎಚ್.ಟಿ. ೧ಕೆ-ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ರೈತರ ಹೊಲದಲ್ಲಿ ನಿಂತಿರುವ ಮಳೆ ನೀರು. | Kannada Prabha

ಸಾರಾಂಶ

ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಕಾಡುತ್ತಿರುವ ಮೋಡ ಕವಿದ ವಾತಾವರಣ ಹಾಗೂ ಸುರಿಯುತ್ತಿರುವ ಜಿಟಿಜಿಟಿ ಮಳೆ ಸೋಮವಾರವು ಮುಂದುವರೆದಿದ್ದು, ಮುಂಗಾರಿ ಬಿತ್ತನೆಗೆ ವರುಣದೇವ ಬಿಡುವು ಕೊಡಬೇಕು, ಸೂರ್ಯದೇವ ದರ್ಶನ ತೋರಬೇಕು ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ.

ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ:ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಕಾಡುತ್ತಿರುವ ಮೋಡ ಕವಿದ ವಾತಾವರಣ ಹಾಗೂ ಸುರಿಯುತ್ತಿರುವ ಜಿಟಿಜಿಟಿ ಮಳೆ ಸೋಮವಾರವು ಮುಂದುವರೆದಿದ್ದು, ಮುಂಗಾರಿ ಬಿತ್ತನೆಗೆ ವರುಣದೇವ ಬಿಡುವು ಕೊಡಬೇಕು, ಸೂರ್ಯದೇವ ದರ್ಶನ ತೋರಬೇಕು ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ.

ಶಿರಹಟ್ಟಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ಇಡೀ ದಿನ ಬಿಟ್ಟು ಬಿಡದೆ ಮಳೆ ಸುರಿದಿದ್ದು, ಸೋಮವಾರ ಬೆಳಗ್ಗೆಯಿಂದಲೇ ಮಳೆ ಆರಂಭವಾಗಿದೆ. ಹಗಲು ರಾತ್ರಿ ಬಿಟ್ಟು ಬಿಡದೇ ಬೀಸುತ್ತಿರುವ ತಂಗಾಳಿ ಮತ್ತು ಮಳೆಗೆ ರೈತಾಪಿ ವರ್ಗ ಆದಿಯಾಗಿ ಸಾರ್ವಜನಿಕರು ಎಂದಿನಂತೆ ಕೆಲಸಕ್ಕೆ ತೆರಳಲು ತೊಂದರೆಯಾಯಿತು.

ಭಾನುವಾರ ಮಧ್ಯಾಹ್ನ ಗ್ರಾಮೀಣ ಭಾಗದಲ್ಲಿ ಸುರಿದ ಮಳೆಗೆ ಚರಂಡಿಗಳು ತುಂಬಿ ರಸ್ತೆ ಮೇಲೆಲ್ಲ ನೀರು ಹರಿದಿದ್ದು, ರೈತರ ಹೊಲಗಳಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿ ಅಲ್ಲಿ ನೀರು ನಿಂತಿದ್ದು, ತೇವಾಂಶ ಹೆಚ್ಚಾಗಿ ಹೊಲದಲ್ಲಿ ಕೆಲಸ ಕಾರ್ಯ ಮಾಡಲು ಬರದೇ ಇರುವುದು ರೈತರಲ್ಲಿ ನಿರಾಸೆ ಮೂಡಿಸಿದೆ.ಮಳೆಗಾಗಿ ಕಾದು ಕಾದು ದೇವರ ಮೇಲೆ ನಂಬಿಕೆಯಿಟ್ಟು ಪೂಜೆಗಿಳಿಯುತ್ತಿದ್ದ ರೈತರು ಈ ಬಾರಿ ಪೂರ್ವ ಮುಂಗಾರಿಗೂ ಮೊದಲೇ ಮಳೆ ಸುರಿಯುತ್ತಿದ್ದು, ಬಿತ್ತನೆಗೆ ಸ್ವಲ್ಪ ಹಿನ್ನಡೆಯಾಗುತ್ತಿದೆ. ದಿನವೂ ತಾಸಿಗೊಮ್ಮೆ, ಅರ್ಧಗಂಟೆಗೊಮ್ಮೆ ಬಿಟ್ಟು ಬಿಡದೇ ಮಳೆ ಸುರಿಯುತ್ತಿರುವುದರಿಂದ ರೈತರ ಕೆಲಸಕ್ಕೆ ಮತ್ತು ಬಿತ್ತನೆಗೆ ಹಿನ್ನಡೆಯಾಗುತ್ತಿದೆ ಎನ್ನುವ ಮಾತುಗಳು ರೈತರಿಂದ ಕೇಳಿಬರುತ್ತಿವೆ. ಪೂರ್ವ ಮುಂಗಾರು ಉತ್ತಮವಾಗಿ ಪ್ರಾರಂಭಗೊಂಡಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಮಳೆ ಇನ್ನೂ ಕೂಡ ಉತ್ತಮವಾಗುವ ನಿರೀಕ್ಷೆಯಿದೆ. ಪ್ರಸಕ್ತ ಸಾಲಿಗೆ ಮುಂಗಾರು ಹಂಗಾಮಿಗೆ ಬಿತ್ತನೆಗೆ ರೈತರು ಹೊಲವನ್ನು ಸಿದ್ಧಪಡಿಸಿದ್ದು ಅವಧಿಗೂ ಮುಂಚೆಯೇ ವ್ಯಾಪಕ ಮಳೆ ಆಗಿರುವುದರಿಂದ ಬಿತ್ತನೆ ವಿಳಂಬವಾಗುವ ಸಾಧ್ಯತೆ ಇದೆ.ಮಳೆ ರಭಸಕ್ಕೆ ರೈತ ಸಂಪರ್ಕ ರಸ್ತೆಗಳು ಸಂಪೂರ್ಣ ಕೊಚ್ಚಿಹೋಗಿದ್ದು, ಎಲ್ಲೆಡೆ ಕೆಸರು ಹೊಂಡ ನಿರ್ಮಾಣವಾಗಿದೆ. ತಗ್ಗು ಪ್ರದೇಶದ ಹೊಲಗಳಲ್ಲಿ ನೀರಿನ ಹೊಂಡವೇ ನಿರ್ಮಾಣವಾಗಿದ್ದು, ಹೊಲದ ತುಂಬೆಲ್ಲ ಮಳೆ ನೀರು ನಿಂತಿದ್ದು, ಹಳ್ಳ ಹರಿದಂತೆ ಹರಿಯುತ್ತಿದೆ.ರೈತರ ಹೇಳಿಕೆ: ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಖರೀದಿಸಿದ ಹೆಸರು, ಶೇಂಗಾ, ಸೂರ್ಯಕಾಂತಿ ಬೀಜಗಳನ್ನು ಮನೆಯಲ್ಲಿ ಹಾಗೆ ಇಟ್ಟಿದ್ದು, ಮಳೆ ಪ್ರಮಾಣ ಹೆಚ್ಚಾಗಿ ಭೂಮಿಯಲ್ಲಿ ಹೆಚ್ಚಿನ ತೇವಾಂಶ ಕಾಣಿಸಿಕೊಂಡಿದ್ದು, ಹೊಲದಲ್ಲಿ ಹೆಜ್ಜೆ ಇಡಲಾರದಷ್ಟು ಮಳೆ ಸುರಿಯುತ್ತಿದ್ದು, ಸದ್ಯ ಒಂದು ವಾರವರೆಗೆ ಮಳೆ ಬಿಡುವು ಕೊಟ್ಟರೆ ಬಿತ್ತನೆಕಾರ್ಯ ಕೈಗೊಳ್ಳಬಹುದು ಎಂದು ಮಲಕಾಜಪ್ಪ ಅಂಗಡಿ ಹೇಳುತ್ತಾರೆ. ಆಶ್ವಿನಿ, ಭರಣಿ, ಕೃತಿಕಾ, ರೋಹಿಣಿ ಮಳೆ ಈ ಬಾರಿ ಆಗಿದ್ದು, ಹೆಸರು, ಅಲಸಂದಿ, ಎಳ್ಳು ಸೇರಿದಂತೆ ಮುಂಗಾರಿನಲ್ಲಿ ಬಿತ್ತನೆಯಾಗಬೇಕಿದ್ದ ಬೆಳೆಗೆ ಹದವಾದ ಮಳೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಸದ್ಯ ಆಗುತ್ತಿರುವ ಮಳೆ ಸ್ವಲ್ಪ ಬಿಡುವು ಕೊಟ್ಟರೆ ಬಿತ್ತನೆ ಮಾಡಲು ಅನುಕೂಲವಾಗಲಿದೆ. ಆದರೆ ನಿತ್ಯ ಹಗಲು ರಾತ್ರಿ ಎನ್ನದೇ ಸುರಿಯುತ್ತಿದ್ದು, ರೈತರು ಏನು ಮಾಡಬೇಕು ಎಂಬ ಚಿಂತೆಯಲ್ಲಿ ಕಾಲಕಳೆಯುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!