ಚಿತ್ರದುರ್ಗ: ರಾಜ್ಯದಲ್ಲಿ ಸಂಪೂರ್ಣ ಬರ ಆವರಿಸಿದ್ದು, ಜಾನುವಾರುಗಳಿಗೆ ಮೇವು ಕೊರತೆ ಉಂಟಾಗಿದೆ. ರಾಜ್ಯ ಸರ್ಕಾರ ತಕ್ಷಣವೇ ಮೇವು ಬ್ಯಾಂಕ್ ಹಾಗೂ ಗೋಶಾಲೆ ತೆರೆಯಬೇಕೆಂದು ರೈತ ಸಂಘದ ರಾಜ್ಯ ಅಧ್ಯಕ್ಷ ವಾಸುದೇವ ಮೇಟಿ ಹೇಳಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬರ ಪರಿಹಾರವಾಗಿ ಹೆಕ್ಟೇರ್ ಒಂದಕ್ಕೆ 2 ಸಾವಿರ ರು. ನೀಡುತ್ತಿದೆ. ಈ ಮೊತ್ತ ಯಾವುದಕ್ಕೂ ಸಾಕಾಗುವುದಿಲ್ಲ. ರೈತರನ್ನು ಅತ್ಯಂತ ತುಚ್ಛವಾಗಿ ಕಾಣಲಾಗುತ್ತಿದೆ ಎಂದರು.ರಾಜ್ಯದಲ್ಲಿ ಅಭಿವೃದ್ಧಿ ಕಾಣೆಯಾಗಿದೆ. ನೀರಾವರಿ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವುದೇ ಜಿಲ್ಲೆಗೂ ಭೇಟಿ ನೀಡಿಲ್ಲ. ಕೇವಲ ಬೆಂಗಳೂರಿಗೆ ಸೀಮಿತರಾಗಿದ್ದಾರೆ. ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುವ ಕಡೆ ಗಮನ ನೀಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಡಿ.ಕೆ.ಶಿವಕುಮಾರ್ ಅವರಿಂದ ರಾಜೀನಾಮೆ ಪಡೆದು ನುರಿತ ಸಚಿವರನ್ನು ನೀರಾವರಿ ಸಚಿವರನ್ನಾಗಿ ನೇಮಕ ಮಾಡಬೇಕೆಂದು ಒತ್ತಾಯ ಮಾಡಿದರು.
ಬೇರೆ ಕಾಮಗಾರಿಗಳಿಗೆ ಕೋಟಿಗಟ್ಟಲೇ ಹಣವನ್ನು ನೀಡುವ ಸರ್ಕಾರ ರೈತರಿಗೆ ಕೊಡುವಾಗ ಮಾತ್ರ ಕೈಬಿಗಿ ಹಿಡಿಯುತ್ತದೆ. ಇದು ಸರಿಯಾದ ಕ್ರಮವಲ್ಲ. ನಾವು ಎಲ್ಲರಿಗೂ ಅನ್ನ ನೀಡುವ ಅನ್ನದಾತರ ಬಗ್ಗೆ ಹಗುರವಾದ ನಿರ್ಧಾರ ಸರಿಯಲ್ಲ. ಇದರ ಬಗ್ಗೆ ಆಲೋಚನೆ ಮಾಡಿ ಎಕರೆಗೆ 20 ಸಾವಿರ ರು. ಪರಿಹಾರ ನೀಡಬೇಕು. ಬೆಳೆ ವಿಮೆ ಕೊಡಿಸಬೇಕು. ರೈತರನ್ನು ಗೋಳು ಒಯ್ಯಿಸಿಕೊಳ್ಳಬಾರದೆಂದರು ಗೋಳಿಸಬಾರದೆಂದು ಮುಖ್ಯಮಂತ್ರಿಗಳಿಗೆ ಕಿವಿ ಮಾತು ಹೇಳಿದರು.ರಾಜ್ಯದ ಎಲ್ಲಾ ಬಿಜೆಪಿ ಸಂಸದರು ಪ್ರಧಾನಿ ಬಳಿಗೆ ನಿಯೋಗ ಹೋಗಿ ರಾಜ್ಯದ ನೀರಾವರಿ ಯೋಜನೆಗಳಿಗೆ ನೆರವು ಕೋರಬೇಕು. ದೊಡ್ಡ ನದಿ ಹರಿಯುವ ಪ್ರದೇಶದಲ್ಲಿ ಹೊಸದಾಗಿ ನೀರಾವರಿ ಯೋಜನೆ ರೂಪಿಸಬೇಕು. ನೀರಾವರಿ ವಿಚಾರವಾಗಿ ಪಕ್ಷ ಬೇಧ ಮರೆತು ಕಾರ್ಯನಿರ್ವಹಿಸುವ ಅಗತ್ಯವಿದ್ದು, ರಾಜ್ಯದ ಸಂಸದರು ಈ ನಿಟ್ಟಿನಲ್ಲಿ ಗಂಭಿರ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದರು.
ನರೇಗಾ ಯೋಜನೆಯಲ್ಲಿ ಜನರಿಗೆ ಕೆಲಸಗಳನ್ನು ನೀಡಲು ಕ್ರಮವಹಿಸಬೇಕು. ಈ ಹಿಂದೆ ವಿದ್ಯುತ್ ಪರಿವರ್ತಕಗಳನ್ನು ಉಚಿತವಾಗಿ ನೀಡುತ್ತಿದ್ದರು. ಈಗ ರೈತರೇ ಕೊಂಡುಕೊಳ್ಳಬೇಕು ಎಂದು ಆದೇಶ ಮಾಡಿದ್ದಾರೆ. ಇದನ್ನು ವಾಪಾಸ್ ಪಡೆಯಬೇಕು. ಈ ಹಿಂದೆ ಸರ್ಕಾರವೇ ಎಲ್ಲವನ್ನು ಉಚಿತವಾಗಿ ನೀಡುತ್ತಿತ್ತು. ಆದರೆ ಹೊಸದಾಗಿ ಕಾನೂನು ತಂದು ಹಣವನ್ನು ಭರ್ತಿ ಮಾಡಿ ಎನ್ನುತ್ತಿದೆ. ಇದು ಸರಿಯಾದ ಕ್ರಮವಲ್ಲ. ಕೂಡಲೇ ಈ ಕಾನೂನ್ನು ವಾಪಾಸ್ಸು ಪಡೆಯುವಂತೆ ಸರ್ಕಾರವನ್ನು ಆಗ್ರಹಿಸಿದರು.ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್, ಪ್ರಕಾಶ್, ಸಂಗಣ್ಣ, ಎಸ್.ಕೆ.ಪೂಜಾರ್, ಬಸವರಾಜ್, ಭೀಮಣ್ಣ, ಮರುಳಸಿದ್ದಪ್ಪ, ಹನುಮಂತ ಕೆಂಚನಗೌಡ ಇದ್ದರು.