ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ತೇಲಿ ಹೈಟೆಕ್ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮಕ್ಕೆ ಭಾನುವಾರ ಆಗಮಿಸಿದ್ದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು, ಸಕ್ಕರೆ ದಾಸ್ತಾನು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ ಆದಷ್ಟು ಬೇಗ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಿ ಉತ್ಪಾದನೆ ಹೆಚ್ಚಿಸುವ ಮೂಲಕ ಸಕ್ಕರೆ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಸಕ್ಕರೆ ಬೆಲೆ ಸ್ವಲ್ಪ ಹೆಚ್ಚಾದಾಗ ಅದರ ಲಾಭ ಕಬ್ಬು ಬೆಳೆಗಾರರಿಗೆ ದೊರೆಯುತ್ತದೆ. ರೈತರ ಹಿತದೃಷ್ಟಿಯಿಂದ ಸಕ್ಕರೆ ಉದ್ಯಮ ಹಾಗೂ ಕಬ್ಬು ಬೆಳೆಗಾರರ ಹಿತ ಕಾಪಾಡುವುದು ಮುಖ್ಯ. ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆ ಹೆಚ್ಚಿಸುವ ಮೂಲಕ ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕು ಎಂದು ಹೇಳಿದರು.ಜನರು ಒಂದು ನೀರಿನ ಬಾಟಲಿಗೆ ₹ 20 ನೀಡಿ ಖರೀದಿಸುತ್ತಾರೆ. ಅದೇ ರೀತಿ ಸಕ್ಕರೆಗೆ ಸ್ವಲ್ಪ ಹೆಚ್ಚಿನ ಹಣ ನೀಡುವುದರಿಂದ ದೊಡ್ಡ ಹೊರೆ ಆಗುವುದಿಲ್ಲ. ಇದರಿಂದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ಸಚಿವ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.
ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮದ ನಡುಗಡ್ಡೆಯ ಗುಹೇಶ್ವರ ಗಡ್ಡಿ ಸೇತುವೆ ನಿರ್ಮಾಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವಿಷಯವನ್ನು ಈಗಾಗಲೇ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಸೇತುವೆ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸುವಂತೆ ಹಣಕಾಸು ಇಲಾಖೆಗೆ ಮನವಿ ಮಾಡಲಾಗಿದೆ. ಕಂಕನವಾಡಿ ಸೇತುವೆ ಯೋಜನೆಯೊಂದಿಗೆ ಅಥಣಿ ಪಟ್ಟಣದ ಪ್ರದೇಶದ ಸೇತುವೆ ಕಾಮಗಾರಿಯನ್ನೂ ಪ್ರಸ್ತಾಪಿಸಲಾಗಿದೆ. ಎರಡೂ ಕಾಮಗಾರಿಗಳಿಗೆ ಅಗತ್ಯವಿರುವ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಅನುಮೋದನೆ ದೊರೆತ ಕೂಡಲೇ ಆದಷ್ಟು ಬೇಗ ಎರಡೂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಆನಂದ ನ್ಯಾಮಗೌಡ, ವಿಧಾನ ಪರಿಷತ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ, ಉಪಾಧ್ಯಕ್ಷ ಮಾಮೂನ ರಸೀದ ಪಾರ್ಥನಳ್ಳಿ, ಸದಸ್ಯ ಧರೆಪ್ಪ ತೇಲಿ, ಶ್ರೀಶೈಲ ದಳವಾಯಿ, ನಗರಸಭೆ ಮಾಜಿ ಅಧ್ಯಕ್ಷ ಪರಮಾನಂದ ಗವರೋಜಿ, ಇಲಾಹಿ ಕಂಗನೋಳ್ಳಿ, ನರಸಪ್ಪ ತೇಲಿ, ಶ್ರೀಶೈಲ ತೇಲಿ, ವಕೀಲ ಎನ್.ಎಸ್.ದೇವರವರ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.