ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಹೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ

KannadaprabhaNewsNetwork |  
Published : Jun 03, 2026, 03:00 AM IST
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಮಂಗಳವಾರ ಸ್ಥಳೀಯ ಹೆಸ್ಕಾಂ (ಕೆ.ಇ.ಬಿ) ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ಮುದ್ದೇಬಿಹಾಳ ತಾಲೂಕಿನಲ್ಲಿ ಒಂದು ತಿಂಗಳಿನಿಂದ ವಿದ್ಯುತ್ ಸರಬರಾಜು ವ್ಯವಸ್ಥೆ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಲೈನ್ ಟ್ರಿಪ್ ಹಾಗೂ ಟ್ರಾನ್ಸ್‌ಫಾರ್ಮರ್ಸು ಟ್ಟುಹೋದ ಸಮಸ್ಯೆಯಿಂದಾಗಿ ಕಬ್ಬು ಸೇರಿ ಪ್ರಮುಖ ಬೆಳೆಗಳು ಒಣಗುತ್ತಿದ್ದು, ಇಲಾಖೆಯ ಬೇಜವಾಬ್ದಾರಿತನ ಕಾರಣ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಮಂಗಳವಾರ ಸ್ಥಳೀಯ ಹೆಸ್ಕಾಂ (ಕೆ.ಇ.ಬಿ) ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ತಾಲೂಕಿನಲ್ಲಿ ಒಂದು ತಿಂಗಳಿನಿಂದ ವಿದ್ಯುತ್ ಸರಬರಾಜು ವ್ಯವಸ್ಥೆ ತೀವ್ರವಾಗಿ ಅಸ್ತವ್ಯಸ್ತಗೊಂಡಿದ್ದು, ಲೈನ್ ಟ್ರಿಪ್ ಹಾಗೂ ಟ್ರಾನ್ಸ್‌ಫಾರ್ಮರ್ (ಟಿ.ಸಿ) ಸುಟ್ಟುಹೋದ ಸಮಸ್ಯೆಯಿಂದಾಗಿ ಕಬ್ಬು ಸೇರಿ ಪ್ರಮುಖ ಬೆಳೆಗಳು ಒಣಗುತ್ತಿದ್ದು, ಇಲಾಖೆಯ ಬೇಜವಾಬ್ದಾರಿತನ ಕಾರಣ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಮಂಗಳವಾರ ಸ್ಥಳೀಯ ಹೆಸ್ಕಾಂ (ಕೆ.ಇ.ಬಿ) ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಎಸ್. ಪಾಟೀಲ (ನಡಹಳ್ಳಿ) ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ನಿಯಮದಂತೆ ಕೃಷಿಗೆ ೭ ಗಂಟೆಗಳ ಕಾಲ ತ್ರೀಫೇಸ್ ವಿದ್ಯುತ್ ಸಿಗುತ್ತಿಲ್ಲ. ಅಧಿಕಾರಿಗಳು ಹಾಗೂ ಲೈನ್‌ಮನ್‌ಗಳ ನಿರ್ಲಕ್ಷ್ಯದಿಂದಾಗಿ ರೈತರೇ ಸ್ವಂತ ಖರ್ಚಿನಲ್ಲಿ ಟಿ.ಸಿ ಹೊರುವಂತಾಗಿದೆ. ಹಳ್ಳೂರಿನ ರೈತ ಮಲ್ಲಪ್ಪ ಎಂಬುವವರ ಹೊಲದಲ್ಲಿ ಟಿಸಿ ಸುಟ್ಟುಹೋಗಿ ಕಬ್ಬು ಬೆಳೆ ಒಣಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಅವರು ಕಚೇರಿ ಮುಂದೆಯೇ ಕಣ್ಣೀರಿಟ್ಟ ಘಟನೆ ಇಲಾಖೆಯ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಢವಳಗಿ ಹೆಸ್ಕಾಂ ಶಾಖಾಧಿಕಾರಿ ಭೀಮಣ್ಣ ಯಲಗೋಡ ಅವರು ಹತ್ತು ವರ್ಷಗಳಿಂದ ಮುದ್ದೇಬಿಹಾಳ ತಾಲೂಕಿನಲ್ಲೇ ಬೀಡುಬಿಟ್ಟಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕೂಡಲೇ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಮತ್ತು ರೈತರಿಂದ ಹಣ ವಸೂಲಿ ಮಾಡುವ ಲೈನ್‌ಮನ್‌ಗಳನ್ನು ಅಮಾನತು ಮಾಡಬೇಕು ಎಂದು ರೈತರು ಆಗ್ರಹಿಸಿದರು.

ಕೃಷಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ ಕನಿಷ್ಠ ೭ ಗಂಟೆಗಳ ನಿರಂತರ ತ್ರೀಫೇಸ್ ಗುಣಮಟ್ಟದ ವಿದ್ಯುತ್ ನೀಡಬೇಕು.ಸುಟ್ಟುಹೋದ ಟಿಸಿಗಳನ್ನು ಇಲಾಖೆಯ ವೆಚ್ಚದಲ್ಲೇ ೭೨ ಗಂಟೆಗಳಲ್ಲಿ ಉಚಿತವಾಗಿ ಬದಲಾಯಿಸಬೇಕು.ಜೋತುಬಿದ್ದ ತಂತಿಗಳು ಹಾಗೂ ವಾಲಿದ, ಬಿದ್ದ ಕಂಬಗಳನ್ನು ತಕ್ಷಣ ದುರಸ್ತಿ ಮಾಡಬೇಕು. ರೈತರಿಗೆ ಸಿಂಗಲ್ ಫೇಸ್ ವಿದ್ಯುತ್ ಸೌಲಭ್ಯ ಸಮರ್ಪಕವಾಗಿ ನೀಡಬೇಕು ಎಂದು ಆಗ್ರಹಿಸಿದರು.​

​ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಸವನಬಾಗೇವಾಡಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತಕ (ಇಇ) ಎಸ್.ಎಂ. ಬಿರಾದಾರ ಅವರು ರೈತರೊಂದಿಗೆ ಚರ್ಚಿಸಿ ಲಿಖಿತ ಭರವಸೆ ನೀಡಿದರು. ಸದ್ಯ ವರ್ಕ್ ಲೋಡ್ ಹೆಚ್ಚಿದ್ದರೂ ಹಗಲು ೪ ಗಂಟೆ ಹಾಗೂ ರಾತ್ರಿ ೩ ಗಂಟೆ ಸೇರಿ ೭ ಗಂಟೆ ಗುಣಮಟ್ಟದ ವಿದ್ಯುತ್ ನೀಡಲಾಗುವುದು. ಮಾನ್ಸೂನ್ ಒಳಗಾಗಿ ಜೋತು ಬಿದ್ದ ತಂತಿ, ವಾಲಿದ ಕಂಬಗಳನ್ನು ದುರಸ್ತಿ ಮಾಡಲಾಗುವುದು. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಇನ್ಮುಂದೆ ೭೨ ಗಂಟೆಗಳ ಒಳಗಾಗಿ ರೈತರಿಗೆ ೨೫ ಹಾಗೂ ೫೦ ಕೆವಿ ಸಾಮರ್ಥ್ಯದ ಟಿಸಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಅಧಿಕಾರಿಗಳ ಸಕಾರಾತ್ಮಕ ಸ್ಪಂದನೆಯ ನಂತರ ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

​ಈ ಸಂದರ್ಭದಲ್ಲಿ ಮುದ್ದೇಬಿಹಾಳ ಕೆಇಬಿ ಇಇ ಹೆಸ್ಕಾಂ ಅಭಿಯಂತಕರು ಆರ್.ಎನ್. ಹಾದಿಮನಿ, ನಾಲತವಾಡ ಹೆಸ್ಕಾಂ ಶಾಖಾಧಿಕಾರಿ ಪ್ರಭು ಗುರಡ್ಡಿ, ಪಿಎಸ್ಐ ಸಂಜಯ ತಿಪ್ಪಾರಡ್ಡಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಬಸವನಬಾಗೇವಾಡಿ ತಾಲೂಕು ಅಧ್ಯಕ್ಷರಾದ ಸಿದ್ರಾಮಪ್ಪ ಹೊರ್ತಿ, ನಿಡಗುಂದಿ ತಾಲೂಕು ಅಧ್ಯಕ್ಷ ಸೀತಪ್ಪ ಗಣಿ, ಉಪಾಧ್ಯಕ್ಷ ಸಾಬಣ್ಣ ಅಂಗಡಿ, ಹುಣಸಗಿ ತಾಲೂಕು ಅಧ್ಯಕ್ಷ ಮಲ್ಲನಗೌಡ ನಗನೂರು ಸೇರಿದಂತೆ ರೈತ ಸಂಘದ ಪ್ರಮುಖ ಪದಾಧಿಕಾರಿಗಳು ಹಾಗೂ ತಾಲೂಕಿನ ನೂರಾರು ರೈತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಳಕಲ್ಲ ನಗರಕ್ಕಿಲ್ಲ ವಿದ್ಯುತ್‌ ಚಿತಾಗಾರ ಭಾಗ್ಯ!
ಕನ್ನಡ ಜಾಗೃತಿ ಜಾಥಾದೊಂದಿಗೆ ಶಾಲಾ ಪ್ರಾರಂಭೋತ್ಸವ