ಶಿಕ್ಷಕರಿಗೆ ಆನ್‌ಲೈನ್‌ ಹಾಜರಾತಿ ಧರ್ಮಸಂಕಟ !

KannadaprabhaNewsNetwork |  
Published : Jun 03, 2026, 02:45 AM IST
ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ವಾಹನ ದಾಟಿಸಲು ಹರಸಾಹಸ ಮಾಡುತ್ತಿರುವ ಶಿಕ್ಷಕ. | Kannada Prabha

ಸಾರಾಂಶ

ದೇವರಹಿಪ್ಪರಗಿ: ಶಿಕ್ಷಕರು ಶಾಲೆಗೆ ಚಕ್ಕರ್ ಹಾಕುವುದನ್ನು ತಪ್ಪಿಸಲು ಶಿಕ್ಷಣ ಇಲಾಖೆ ಸರ್ಕಾರಿ ಶಾಲಾ ಶಿಕ್ಷಕರಿಗಾಗಿ ಕರ್ನಾಟಕ ಹಾಜರಾತಿ ನಿರ್ವಹಣೆ ವ್ಯವಸ್ಥೆ ಎಂಬ ವಿನೂತನ ಹಾಜರಾತಿ ವ್ಯವಸ್ಥೆಯನ್ನು ಈ ಶೈಕ್ಷಣಿಕ ವರ್ಷಾರಂಭದಿಂದ ಜಾರಿಗೆ ತಂದಿದ್ದು, ಪ್ರಕೃತಿ ವಿಕೋಪ, ಮಳೆ, ಟ್ರಾಫಿಕ್ ಜಾಮ್, ಸರಿಯಾದ ಬಸ್ ವ್ಯವಸ್ಥೆ, ಉತ್ತಮ ರಸ್ತೆ ಇಲ್ಲದಿರುವುದು, ಹಳ್ಳ-ಕೊಳ್ಳಗಳನ್ನು ದಾಟಿ ಹೋಗುವುದು, ನೆಟ್‌ವರ್ಕ್ ಬಾರದಿರುವ ಪ್ರದೇಶಗಳು, ರಾತ್ರಿ ವಿದ್ಯುತ್ ಇಲ್ಲದಿರುವ ಸಂದರ್ಭ ಸೇರಿ ಶಿಕ್ಷಕರು ಸ್ವಲ್ಪ ತಡಮಾಡಿ ಶಾಲೆಗೆ ಹೋದರೆ ಗೈರುಹಾಜರಿ ಭೀತಿ ಎದುರಿಸುವಂತಾಗಿದೆ‌.

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಶಿಕ್ಷಕರು ಶಾಲೆಗೆ ಚಕ್ಕರ್ ಹಾಕುವುದನ್ನು ತಪ್ಪಿಸಲು ಶಿಕ್ಷಣ ಇಲಾಖೆ ಸರ್ಕಾರಿ ಶಾಲಾ ಶಿಕ್ಷಕರಿಗಾಗಿ ಕರ್ನಾಟಕ ಹಾಜರಾತಿ ನಿರ್ವಹಣೆ ವ್ಯವಸ್ಥೆ ಎಂಬ ವಿನೂತನ ಹಾಜರಾತಿ ವ್ಯವಸ್ಥೆಯನ್ನು ಈ ಶೈಕ್ಷಣಿಕ ವರ್ಷಾರಂಭದಿಂದ ಜಾರಿಗೆ ತಂದಿದೆ.

ಶಿಕ್ಷಕರು ಅನಧಿಕೃತವಾಗಿ ಗೈರಾಗುವುದನ್ನು ತಪ್ಪಿಸಲು ಇದು ಪರಿಣಾಮಕಾರಿ ಆನ್‌ಲೈನ್ ವ್ಯವಸ್ಥೆಯಾಗಿದೆ. ಜೊತೆಗೆ ಶೈಕ್ಷಣಿಕ ಸುಧಾರಣೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ‌. ಆದರೆ ಪ್ರಕೃತಿ ವಿಕೋಪ, ಮಳೆ, ಟ್ರಾಫಿಕ್ ಜಾಮ್, ಸರಿಯಾದ ಬಸ್ ವ್ಯವಸ್ಥೆ, ಉತ್ತಮ ರಸ್ತೆ ಇಲ್ಲದಿರುವುದು, ಹಳ್ಳ-ಕೊಳ್ಳಗಳನ್ನು ದಾಟಿ ಹೋಗುವುದು, ನೆಟ್‌ವರ್ಕ್ ಬಾರದಿರುವ ಪ್ರದೇಶಗಳು, ರಾತ್ರಿ ವಿದ್ಯುತ್ ಇಲ್ಲದಿರುವ ಸಂದರ್ಭ ಸೇರಿ ಶಿಕ್ಷಕರು ಸ್ವಲ್ಪ ತಡಮಾಡಿ ಶಾಲೆಗೆ ಹೋದರೆ ಗೈರುಹಾಜರಿ ಭೀತಿ ಎದುರಿಸುವಂತಾಗಿದೆ‌.

ಇದಕ್ಕೆ ಉದಾಹರಣೆಯಾಗಿ ಸೋಮವಾರ ರಾತ್ರಿ ಸುರಿದ ಮಳೆಗೆ ತಾಲೂಕಿನ ಇಬ್ರಾಹಿಂಪುರ ಗ್ರಾಮಕ್ಕೆ ಕೊಕಟನೂರ ಮಾರ್ಗವಾಗಿ ಬೈಕ್ ಮೇಲೆ ಹೋಗುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ತುಂಬಿ ಹರಿಯುತ್ತಿದ್ದ ಹಳ್ಳ ಎದುರಾಗಿ ಪರದಾಡಿದ ಪ್ರಸಂಗ ನಡೆಯಿತು. ಈ ವೇಳೆ ಸುತ್ತಲಿನ ಗ್ರಾಮಸ್ಥರು ಬಂದು ತುಂಬಿ ಹರಿಯುವ ಹಳ್ಳದಲ್ಲಿ ಆ ಶಿಕ್ಷಕರ ಬೈಕ್‌ ದಾಟಿಸಿಕೊಡಲು ಸಹಾಯ ಮಾಡಿದ್ದಾರೆ. ಬೇಗ ಶಾಲೆಗೆ ಹೋಗಬೇಕು ಎಂಬ ಒತ್ತಡ ಒಂದೆಡೆಯಾದರೆ ತುಂಬಿ ಹರಿಯುವ ಹಳ್ಳದಲ್ಲಿ ಹೇಗೆ ದಾಟುವುದು ಎಂಬ ಚಿಂತೆ ಇನ್ನೊಂದೆಡೆ ಶಿಕ್ಷಕರದ್ದು. ತಡವಾದರೆ ಗೈರುಹಾಜರಾಗುವ ಚಿಂತೆ. ಹಳ್ಳ ದಾಟಲು ಹೋದರೆ ಏನಾಗುವುದೋ ಎಂಬ ಆತಂಕ. ಇದು ಒಂದು ಉದಾಹರಣೆ ಮಾತ್ರ. ಇಂತಹ ಅನೇಕ ಸಮಸ್ಯೆಗಳು ಶಿಕ್ಷಕರಿಗೆ ಎದುರಾಗುತ್ತವೆ.

ತಾಲೂಕಿನ ಅನೇಕ ಗ್ರಾಮಗಳಿಗೆ ಶಾಲಾ ಸಮಯಕ್ಕೆ ಅನುಗುಣವಾಗಿ ವಾಹನ ಸೌಕರ್ಯ ಇಲ್ಲ. ಅನೇಕ ತೋಟದ ವಸ್ತಿ ಶಾಲೆಗಳ ರಸ್ತೆಗಳ ಸ್ಥಿತಿಯಂತೂ ಹೇಳತೀರದಾಗಿದೆ. ಮಳೆಗಾಲದಲ್ಲಂತೂ ಪಾದರಕ್ಷೆ ಕೈಯಲ್ಲಿ ಹಿಡಿದು ನಡೆಯುವ ಪರಿಸ್ಥಿತಿ ಇದೆ‌. ಇಲಾಖೆ ಜಾರಿಗೆ ತಂದಿರುವ ಈ ಯೋಜನೆ ಉತ್ತಮವಾಗಿದ್ದರೂ ಆಕಸ್ಮಿಕ ಘಟನೆ, ಪ್ರಕೃತಿ ವಿಕೋಪಗಳು, ಬಸ್ ಕೊರತೆ, ಮೂಲ ಸೌಲಭ್ಯಗಳ ಸಮಸ್ಯೆಗಳಿಂದಾಗಿ ಸಮಸ್ಯೆ ಎದುರಾದರೆ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡದೇ ವಿನಾಯಿತಿ ನೀಡುವ ವ್ಯವಸ್ಥೆಯಾಗಬೇಕು. ಶಿಕ್ಷಕರನ್ನು ಶಿಕ್ಷಿಸುವ ವ್ಯವಸ್ಥೆಯಾಗಿರದೇ ತಮ್ಮದಲ್ಲದ ಅವರ ಕಷ್ಟಗಳಿಗೂ ಸ್ಪಂದಿಸುವ ವ್ಯವಸ್ಥೆ ಜಾರಿಯಾಗಬೇಕು. ಈ ಹಾಜರಾತಿ ವ್ಯವಸ್ಥೆಯಲ್ಲಿ ಸ್ವಲ್ಪ ಮಾರ್ಪಾಡು ಮಾಡಿ ಶಿಕ್ಷಕರನ್ನು ಪ್ರೋತ್ಸಾಹಿಸಿ ಸರ್ಕಾರಿ ಶಾಲೆಗಳನ್ನು ಬೆಳೆಸುವ ಪ್ರಯತ್ನವಾಗಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೆಡಿಟ್‌ಗಾಗಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಪ್ರಚಾರ ಜೋರು!
ನಿಂಗಾಪೂರದಲ್ಲಿ ದಿಢೀರ ಭೂಕುಸಿತ: ಗ್ರಾಮಸ್ಥರಲ್ಲಿ ಆತಂಕ