ಯಳಂದೂರಿನ ಕೆಸ್ತೂರಿನಲ್ಲಿ ಸಿಬ್ಬಂದಿಯೊಂದಿಗೆ ವಾಗ್ವಾದ
ಕನ್ನಡಪ್ರಭ ವಾರ್ತೆ ಯಳಂದೂರುತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಬುಧವಾರ ವಿದ್ಯುತ್ ಬಿಲ್ ಕಟ್ಟುವಂತೆ ಮನೆಮನೆಗೆ ತೆರಳಿದ್ದ ಸೆಸ್ಕಾಂ ಸಿಬ್ಬಂದಿಗೆ ಇಲ್ಲಿನ ರೈತರು ಬಿಲ್ ಪಾವತಿಸುವುದಿಲ್ಲ ಎಂದು ವಾಗ್ವಾದ ನಡೆಸಿ ವಾಪಸ್ಸು ಕಳುಹಿಸಿರುವ ಘಟನೆ ನಡೆದಿದೆ.ಸೆಸ್ಕಾಂ ಎಎ, ಜೆಇ, ಲೈನ್‌ಮನ್‌ಗಳು ಕಳೆದ 3 ವರ್ಷಗಳಿಂದ ಇಲ್ಲಿನ ರೈತರು ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ಬಿಲ್ ಕಟ್ಟುವಂತೆ ಮನೆಮನೆಗಳಿಗೆ ತೆರಳಿದ್ದರು. ಈ ವೇಳೆ ರೈತರು ತಾವು ಬಿಲ್ ಕಟ್ಟುವುದಿಲ್ಲವೆಂದು ವಾಗ್ವಾದ ನಡೆಸಿದ್ದಾರೆ. ಗೃಹಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಆದರೆ ನಮ್ಮ ಮನೆಗಳಲ್ಲಿ 200 ಯೂನಿಟ್ ವಿದ್ಯುತ್ ಬಳಕೆಯಾಗುತ್ತಲೇ ಇಲ್ಲ. ಇದನ್ನು ಪ್ರಶ್ನಿಸಿದರೆ ಕಳೆದ ಒಂದು ವರ್ಷದ ಬಳಕೆಯ ಆಧಾರದ ಮೇಲೆ ಇಲಾಖೆ ಎಷ್ಟು ಉಚಿತ ಎಂದು ನಿರ್ಧರಿಸುವ ನಿಯಮವಿದೆ. ಎಂದು ಇವರು ಉತ್ತರ ನೀಡುತ್ತಾರೆ. ಆದರೆ ನಮ್ಮ ಮನೆಗಳಿಗೆ ಗೃಹಜ್ಯೋತಿ ಪ್ರಾರಂಭವಾದ ದಿನದಿಂದ ಇರುವ ಯೂನಿಟ್‌ನಷ್ಟೇ ಬಿಲ್ ಬರುತ್ತಿದೆ. ಇದನ್ನು ಕಾಲಕ್ಕೆ ತಕ್ಕಂತೆ ಪರಿಷ್ಕರಣೆಯೂ ಮಾಡಿಲ್ಲ. ಅಲ್ಲದೆ ಈ ಯೋಜನೆ ಬರುವುದಕ್ಕಿಂತಲೂ ಮುಂಚೆ ಇದ್ದ ಬಾಕಿ ಬಿಲ್ ನಾವು ಪಾವತಿ ಮಾಡುವುದಿಲ್ಲ ಎಂದು ಹೇಳಿದ್ದೆವು. ಈ ಹಿಂದೆ ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಇದನ್ನು ಹೊರತುಪಡಿಸಿ ಹೊಸ ಬಿಲ್ ಕಟ್ಟಿಸಿಕೊಳ್ಳಿ ಎಂದು ಆದೇಶಿಸಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಆ ಬಾಕಿಯನ್ನೂ ಈಗ ನೀಡಿರುವ ಬಿಲ್‌ನಲ್ಲಿ ಸೇರಿಸಲಾಗಿದೆ. ಇದಕ್ಕೆ ಬಡ್ಡಿಯನ್ನು ಹಾಕಲಾಗಿದೆ. ನಾವು ಇದನ್ನು ಕಟ್ಟುವುದಿಲ್ಲ ಎಂದು ಗ್ರಾಮಸ್ಥರು ಬಿಲ್ ಕಟ್ಟಲು ವಿರೋಧಿಸಿದರು.ರೈತರ ಬೆಳೆಗಳಿಗೆ ವಿದ್ಯುತ್ ನೀಡುತ್ತಿಲ್ಲ:
ಈ ವರ್ಷ ಮಳೆ ಕೈಕೊಟ್ಟಿದೆ. ದಿನಕ್ಕೆ ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್ ನೀಡಬೇಕೆಂಬ ನಿಯಮವಿದೆ. ಆದರೆ 3 ಗಂಟೆಗಳು ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ರೈತರ ಬೆಳೆಗಳು ಒಣಗುತ್ತಿವೆ. ಕಬಿನಿ ಕಾಲುವೆಯಲ್ಲಿ ನೀರೂ ಕೂಡ ಬರುತ್ತಿಲ್ಲ. ಈ ಬಾರಿ ನೀರು ಬಿಟ್ಟರೆ ರೈತರು ಬದುಕುತ್ತಾರೆ. ಇಲ್ಲವಾದಲ್ಲಿ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಪರಿಸ್ಥಿತಿ ಇದೆ ಎಂದು ರೈತರಾದ ನಾಗೇಶ್, ಕೆ.ಎಸ್. ಅಂಬಿಕಾಪತಿ, ನಾಗರಾಜು, ನಾಗರಾಜಪ್ಪ, ಕಿಟ್ಟಿ, ಮಣಿಕಂಠ, ಡಿ. ನಾಗರಾಜು ಆರೋಪಿಸಿದರು. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸೆಸ್ಕಾಂ ನೌಕರರು ಪೊಲೀಸರೊಂದಿಗೆ ಬಂದು ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳುತ್ತೇವೆ. ಆತ್ಮಹತ್ಯೆ ಮಾಡಿಕೊಂಡರೆ ಮಾಡಿಕೊಳ್ಳಿ ಎಂದು ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಈ ರೀತಿ ದಬ್ಬಾಳಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.---ಗೃಹಜ್ಯೋತಿಗೆ ಸರಾಸರಿ ವಾರ್ಷಿಕ ಬಳಕೆಯಾಗುವ ವಿದ್ಯುತ್‌ನ ಆಧಾರದ ಮೇಲೆ ಇಂತಿಷ್ಟು ಯೂನಿಟ್ ಅಂತ ನಿಗಧಿಯಾಗುತ್ತದೆ. ಆ ಆಧಾರದ ಮೇಲೆ ಸಂಪೂರ್ಣ 200 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗುವುದಿಲ್ಲ. ಇದನ್ನು ನಾವು ಕೆಸ್ತೂರು ಗ್ರಾಮಸ್ಥರಿಗೆ ಮನವರಿಕೆ ಮಾಡಿದ್ದೇವೆ. ವಿದ್ಯುತ್ ಬಿಲ್ ಕಟ್ಟಿ ಎಂದು ನಮ್ಮ ಸಿಬ್ಬಂದಿಯೊಂದಿಗೆ ತೆರಳಿ ಅರಿವು ಮೂಡಿಸಲಾಗಿದೆ. ಅವರು ಬಿಲ್ ಕಟ್ಟಿಲ್ಲ. ಅವರಿಗೆ ಇನ್ನಷ್ಟು ದಿನದ ಗಡುವು ನೀಡಲಾಗಿದೆ.
---08ವೈಎಲ್‌ಡಿ01ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಬುಧವಾರ ವಿದ್ಯುತ್ ಬಿಲ್ ಕಟ್ಟುವಂತೆ ಸೆಸ್ಕ್ ಸಿಬ್ಬಂಧಿ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಗ್ರಾಮದ ರೈತರು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ವಾಗ್ವಾದ ನಡೆಸಿದರು.