
ಕನ್ನಡಪ್ರಭ ವಾರ್ತೆ ಚಿಂಚೋಳಿ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರ ಉಪಚುನಾವಣೆ ಮತ್ತು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿರುವುದಾಗಿ ಬಿಜೆಪಿ ನಾಯಕರು ಸುಳ್ಳು ಹೇಳಿದ್ದರು. ಆದರೆ, ವಿಜಯಪುರದ ಸಿದ್ದಸಿರಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವದ ಈ ಘಟಕದಲ್ಲಿ ಒಂದು ಕೆಜಿ ಸಕ್ಕರೆಯೂ ಉತ್ಪಾದನೆಯಾಗುತ್ತಿಲ್ಲ. ಸಕ್ಕರೆ ಉತ್ಪಾದಿಸದ ಕಾರ್ಖಾನೆ ನಾಯಿ ಮೊಲೆಯಲ್ಲಿ ಹಾಲು ಇದ್ದಂತೆ ಎಂದು ಟೀಕಿಸಿದರು.
ಚಿಂಚೋಳಿಯಲ್ಲಿ 2,190 ಹೆಕ್ಟೇರ್ ಹಾಗೂ ಕಾಳಗಿಯಲ್ಲಿ 1,500 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಕಬ್ಬು ಖರೀದಿಸದಂತೆ ಕೇಂದ್ರ ಸರ್ಕಾರದ ಆದೇಶವಿದ್ದು, ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಬದಲು ಮಾಜಿ ಸಂಸದರು ಹಾಗೂ ಶಾಸಕರು ಕೇಂದ್ರದ ಮೇಲೆ ಒತ್ತಡ ಹೇರಿ ಆದೇಶ ಮಾರ್ಪಾಡು ಮಾಡಿಸಬೇಕು ಎಂದು ಒತ್ತಾಯಿಸಿದರು.ರೈತರು ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ಗಮನಕ್ಕೆ ತರಲಾಗಿದ್ದು, ಕಬ್ಬು ಸಾಗಾಟ ಮತ್ತು ಖರೀದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ್ ಮಲ್ಲಿ, ಅನಿಲ್ ಕುಮಾರ್ ಜಮಾದಾರ್, ಶರಣು ಪಾಟೀಲ್ ಮೋತಕಪಳ್ಳಿ, ಜಗನ್ನಾಥ್ ಕಟ್ಟಿ, ಆನಂದ ಟೈಗರ್, ಲಕ್ಷ್ಮಣ ಆವಂಟಿ, ಜಗನ್ನಾಥ್ ಗುತ್ತೇದಾರ್, ನಾಗೇಶ್ ಗುಣಾಜಿ, ಸುದರ್ಶನರೆಡ್ಡಿ, ಮಹ್ಮದ್ ಹಾದಿ, ಸಂತೋಷ್ ಗುತ್ತೇದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.