ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿಯನ್ನು ಮರೆತು ಭ್ರಷ್ಟಾಚಾರದಲ್ಲೇ ಮುಳುಗಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ ಎಂದು ಮಾಜಿ ಸಚಿವ ಹರ್ತಾಳು ಹಾಲಪ್ಪ ಹರಿಹಾಯ್ದರು.
ಕನ್ನಡ ಪ್ರಭ ವಾರ್ತೆ ಬ್ಯಾಕೋಡು
ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿಯನ್ನು ಮರೆತು ಭ್ರಷ್ಟಾಚಾರದಲ್ಲೇ ಮುಳುಗಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ ಎಂದು ಮಾಜಿ ಸಚಿವ ಹರ್ತಾಳು ಹಾಲಪ್ಪ ಹರಿಹಾಯ್ದರು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ವೈಫಲ್ಯದಿಂದ ಕರೂರು-ಬಾರಂಗಿ ಹೋಬಳಿಯ ಜನತೆಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಬಿಜೆಪಿ ಕುದುರೂರು ಮಹಾಶಕ್ತಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಜನಜಾಗೃತಿ ಪ್ರತಿಭಟನಾ ಪಾದಯಾತ್ರೆಯ ನಂತರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಲಂಚಾವತಾರ ತಾಂಡವವಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ನಾನು ಶಾಸಕನಾಗಿದ್ದಾಗಲೂ ಇದೇ ಕಾನೂನುಗಳಿದ್ದವು. ಆದರೆ, ಇಂದು ಕಲ್ಲು, ಮರಳು, ಜಲ್ಲಿಗಳೇ ಸ್ಥಳೀಯ ಶಾಸಕರು ಮತ್ತು ಪೊಲೀಸರ ಆದಾಯದ ಮೂಲಗಳಾಗಿವೆ. ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರ ಒಂದು ರೂಪಾಯಿ ಲಂಚ ಪಡೆದಿಲ್ಲವೆಂದಾದರೆ ಸಿಗಂದೂರು ಚೌಡೇಶ್ವರಿ ಸಾಕ್ಷಿಯಾಗಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ರೈತರ ಭೂಮಿಗೆ ಕುತ್ತು ತರುತ್ತಿರುವ ಪಂಪ್ಡ್ ಸ್ಟೋರೇಜ್ ಯೋಜನೆ:
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಶರಾವತಿ ಸೇತುವೆಗೆ ಅನುದಾನ ನೀಡಿದ್ದರೂ, ರಾಜ್ಯ ಸರ್ಕಾರ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸಲು ವಿಫಲವಾಗಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹಾಗೂ ಬೆಂಗಳೂರು-ತುಮಕೂರಿಗೆ ಹೈಟೆನ್ಷನ್ ಲೈನ್ ಕೊಂಡೊಯ್ಯುವ ನೆಪದಲ್ಲಿ ನೂರಾರು ಎಕರೆ ರೈತರ ಭೂಮಿಯನ್ನು ನಾಶಪಡಿಸಲು ಹೊರಟಿರುವುದು ಶಾಸಕರ ರೈತ ವಿರೋಧಿ ನೀತಿಗೆ ಸಾಕ್ಷಿ ಎಂದು ಕಿಡಿಕಾರಿದರು.
ಸಭೆಯಲ್ಲಿ ಮಾತನಾಡಿದ ಕೇಂದ್ರ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ, ಕಾಂಗ್ರೆಸ್ ಸರ್ಕಾರ ಬಲಗೈಯಲ್ಲಿ ಗ್ಯಾರಂಟಿ ಕೊಟ್ಟು ಎಡಗೈಯಲ್ಲಿ ಕಸಿದುಕೊಳ್ಳುತ್ತಿದೆ. ಅಭಿವೃದ್ಧಿ ಶೂನ್ಯವಾಗಿರುವ ಈ ಸರ್ಕಾರ ವಿಧಾನಸಭೆಯನ್ನೇ ಅಡವಿಟ್ಟರೂ ಒಂದು ಬಿಡಿಗಾಸು ಸಿಗದಷ್ಟು ಆರ್ಥಿಕವಾಗಿ ದಿವಾಳಿಯಾಗಿದೆ. ಇದು ರೈತರ ಅಥವಾ ಬಹುಸಂಖ್ಯಾತರ ಸರ್ಕಾರವಲ್ಲ, ಕೇವಲ ಒಂದು ವರ್ಗದ ಓಲೈಕೆಯಲ್ಲಿ ಮಗ್ನವಾಗಿರುವ ''''''''ಮುಲ್ಲಾ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುಧೀಂದ್ರ ಹೊಸಕೊಪ್ಪ, ತಾಲೂಕು ಅಧ್ಯಕ್ಷ ದೇವೇಂದ್ರಪ್ಪ. ಕೆ.ಎಸ್. ಪ್ರಶಾಂತ್, ಪ್ರಮುಖರಾದ ದೇವೇಂದ್ರಪ್ಪ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಹಕ್ರೆ ಮಲ್ಲಿಕಾರ್ಜುನ್. ನಾಗರಾಜ್ ಬೊಬ್ಬಿಗೆ ಸೇರಿದಂತೆ ಸಾವಿರಾರು ರೈತರು ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರೈತರ ಹಕ್ಕುಪತ್ರಕ್ಕೆ ಹಣ ವಸೂಲಿ
ತಾಲೂಕಿನಲ್ಲಿ ಹೇಳುವವರು ಕೇಳುವವರು ಇಲ್ಲದಂತೆ ಆಗಿದೆ. ವಿರೋಧ ಪಕ್ಷದವರು ಸುಮ್ಮನೆ ಕೂತಿರಬೇಕು. ಇವರು ಮಾಡಿದ್ದೆ ಸರಿ ಎನ್ನುವಂತಾಗಿದೆ. ಕಳೆದ ಮೂರು ವರ್ಷಗಳಲ್ಲಿ ಬಗರ್ ಹುಕುಂ 57, 94ಸಿಸಿ ಅಡಿಯಲ್ಲಿ ಯಾವುದೇ ಹಕ್ಕು ಪತ್ರ ನೀಡಿಲ್ಲ. ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಮೂಲಕ ಕೆಲಸ ಮಾಡಲಾಗುತ್ತಿದೆ. ಶಾಸಕರ ಆಪ್ತರಿಗೆ ಮಾತ್ರ ಹಕ್ಕು ಪತ್ರ ಸಿಗುತ್ತಿದೆ. ರೈತರಿಗೆ ಹಕ್ಕು ಪತ್ರ ನೀಡಲು ಕಚೇರಿಗಳಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.