ಕನ್ನಡಪ್ರಭ ವಾರ್ತೆ ಮಾಗಡಿ
ಬ್ರಹ್ಮರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷ ತೋಮಾಲೆ ಸೇವೆ, ಚಿನ್ನದ ಕಿರೀಟ, ಚಿನ್ನದ ಪಾದುಕೆಯೊಂದಿಗೆ ಶ್ರೀರಂಗನಾಥ ಸ್ವಾಮಿ ಮೂಲ ಮೂರ್ತಿ ಕಂಗೊಳಿಸುತ್ತಿತ್ತು. ಬೆಳಗ್ಗೆಯಿಂದಲೇ ದೇವರ ದರ್ಶನಕ್ಕೆ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ಕೃಪೆಗೆ ಪಾತ್ರರಾದರು, ವಿಶೇಷವಾಗಿ ದೇವಾಲಯದ ವತಿಯಿಂದ ಭಕ್ತರಿಗೆ ವಿಶೇಷ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಬ್ರಹ್ಮರಥೋತ್ಸವದ ಅಂಗವಾಗಿ ಶ್ರೀ ರಂಗನಾಥ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತಲಿನ ಅರವಂಟಿಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ತೇರಿನಲ್ಲಿ ಕೂರಿಸಿ ತೇರನ್ನು ಎಳೆಯಲಾಯಿತು.ಗರುಡನಿಂದ ರಥ ಪ್ರದಕ್ಷಿಣೆ:
ಸಾವಿರಾರು ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಎಸೆದು ಇಷ್ಟಾರ್ಥ ಕೋರಿಕೊಂಡರು. ಮಧ್ಯಾಹ್ನ 12:30 ರ ಸಮಯದಲ್ಲಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಯಿತು, ಪೊಲೀಸರು ಬಿಗಿ ಬಂದೋಬಸ್ತ್ ನಲ್ಲಿ ಯಾವುದೇ ವಿಘ್ನವಿಲ್ಲದೆ ರಥೋತ್ಸವ ಅದ್ಧೂರಿಯಾಗಿ ನಡೆಯಿತು.
ಶಾಸಕ ಬಾಲಕೃಷ್ಣ ಮಾತನಾಡಿ, ತಾಂತ್ರಿಕ ಸಮಸ್ಯೆಯಿಂದ ದೇವಸ್ಥಾನ ಅಭಿವೃದ್ಧಿಗೆ ಹಣ ಬಿಡುಗಡೆ ವಿಳಂಭವಾಗಿದ್ದು ₹5 ಕೋಟಿ ವೆಚ್ಚದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಲಾಗುತ್ತದೆ. ಇನ್ನೂ ₹ 5 ಕೋಟಿ ಅನುದಾನ ಬೇಕು ಎಂದು ದೇವಸ್ಥಾನದವರು ಮನವಿ ಮಾಡಿದ್ದು, ಹೆಚ್ಚುವರಿ ಹಣವನ್ನು ಕೂಡ ಸರ್ಕಾರದಿಂದ ತಂದು ದೇವಾಲಯ ಸಂಪೂರ್ಣ ಅಭಿವೃದ್ಧಿಪಡಿಸಿ ಭಕ್ತರಿಗೆ ಅನುಕೂಲ ಮಾಡಿಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ರಂಗನಾಥನ ಕೃಪೆಯಿಂದ ತಾಲೂಕಿನಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಲೆಂದು ಹಾರೈಸಿದರು.