ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಗಂಗಾಧರೇಶ್ವರಸ್ವಾಮಿ, ಸಾರಂಗಪಾಣಿ, ಪಟ್ಟಲದಮ್ಮನ, ಕೋಟೆ ಆಂಜನೇಯಸ್ವಾಮಿ, ಹೊರವಲಯದ ಶಕ್ತಿ ದೇವತೆ ದಂಡಿನ ಮಾರಮ್ಮನ, ಪುರಾತನ ಮಾರೇಹಳ್ಳಿಯ ಲಕ್ಷ್ಮಿನರಸಿಂಹಸ್ವಾಮಿ ಹಾಗೂ ತಾಲೂಕಿನ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ಎಲ್ಲೆಡೆ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದ್ದವು. ಭಕ್ತರು ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು.
ಮಹಿಳೆಯರು ಹಾಗೂ ಮಕ್ಕಳು ಹೊಸ ಬಟ್ಟೆ ತೊಟ್ಟು ಮನೆ ಮನೆಗಳಿಗೆ ತೆರಳಿ ಎಳ್ಳು, ಬೆಲ್ಲ, ಕೊಬ್ಬರಿ, ಕಬ್ಬು ಬೀರಿ ಹಬ್ಬವನ್ನು ಸಡಗರದಿಂದ ಆಚರಿಸಿದರು. ರೈತರು ತಮ್ಮ ರಾಸುಗಳ ಕೊಂಬುಗಳಿಗೆ ಬಣ್ಣ ಬಳೆದು ಹೂವು ಮತ್ತು ಬಲೂನ್ ಸೇರಿದಂತೆ ವಿವಿಧ ಬಗೆಯ ಅಲಂಕಾರಿಕ ವಸ್ತುಗಳಿಂದ ಶೃಂಗಾರ ಮಾಡಿ ಸೂರ್ಯ ಮುಳುಗುವ ವೇಳೆ ಸಂಪ್ರದಾಯದಂತೆ ಸಂಕ್ರಮಣನಿಗೆ ಪೂಜೆ ಸಲ್ಲಿಸಿ ನಂತರ ಪೊಂಗಲ್ ಎರಚಿ ರಾಸುಗಳನ್ನು ರೈತರು ಬೆಂಕಿಯಲ್ಲಿ ಕಿಚಾಯಿಸಿದರು.ಬೆಂಕಿಯಲ್ಲಿ ರಾಸುಗಳು ಹಾರುವ ದೃಶ್ಯಗಳನ್ನು ಕಂಡು ಯುವಜನತೆ ತಮ್ಮ ಮೊಬೈಲ್‌ಗಳಲ್ಲಿ ಫೋಟೋ ಸೆರೆ ಹಿಡಿದು ಸಂಭ್ರಮಿಸಿದರು. ಪಟ್ಟಣದ ಪೇಟೆ ಒಕ್ಕಲಗೇರಿಯ ಟೋಲ್ ಗೇಟ್, ಕನಕಪುರ ರಸ್ತೆ, ಸುಲ್ತಾನ್ ರಸ್ತೆ, ಕೊಳ್ಳೇಗಾಲ ರಸ್ತೆ, ಮೈಸೂರು ರಸ್ತೆ ಸೇರಿದಂತೆ ವಿವಿಧೆಡೆ ಹಾಗೂ ತಾಲೂಕಿನ ಎಲ್ಲ ಗ್ರಾಮಗಳ ಪ್ರಮುಖ ರಸ್ತೆಗಳಲ್ಲಿ ರೈತರು ತಮ್ಮ ರಾಸುಗಳನ್ನು ಕಿಚ್ಚು ಹಾಯಿಸುವ ಮೂಲಕ ಹಬ್ಬ ಆಚರಿಸಿದರು.
ಶ್ರೀರಂಗಪಟ್ಟಣ: ರಾಸುಗಳಿಗೆ ಕಿಚ್ಚು ಹಾಯಿಸಿ ಪೂಜೆ ಸಲ್ಲಿಸಿದ ರೈತರುಮಕರ ಸಂಕ್ರಾಂತಿ ನಿಮಿತ್ತ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರೈತರು ತಮ್ಮ ರಾಸುಗಳಿಗೆ ಕಿಚ್ಚು ಹಾಯಿಸಿ ಪೂಜೆ ಸಲ್ಲಿಸಿದರು.ಗ್ರಾಮಗಳ ಪ್ರಮುಖ ಬೀದಿಗಳು ಹೆದ್ದಾರಿ ಸೇರಿದಂತೆ ತಮ್ಮ ತಮ್ಮ ಮನೆಗಳ ಹಾಗೂ ಪ್ರಮುಖ ವೃತ್ತಗಳಲ್ಲಿ ಸೇರಿದ್ದ ರೈತರು ತಮ್ಮ ಮನೆಗಳಲ್ಲಿ ಸಾಕಿದ್ದ ಹಸು, ಕರು, ಎಮ್ಮೆ, ಕುರಿ ಸೇರಿದಂತೆ ಇತರೆ ಪ್ರಾಣಿಗಳ ಮೈ ತೊಳೆದು ಶೃಂಗಾರ ಮಾಡಿ ಅವುಗಳಿಗೆ ಯಾವುದೇ ಕಾಯಿಲೆಗಳು ತಗುಲದಂತೆ ದೇವರಲ್ಲಿ ಮನವಿ ಮಾಡಿ ಬೆಂಕಿಯಲ್ಲಿ ಕಿಚ್ಚು ಹಾಯಿಸಿ, ಪೂಜೆ ಸಲ್ಲಿಸಿ ನಂತರ ವಿಶೇಷವಾಗಿ ಮನೆಯಲ್ಲಿ ತಯಾರಿಸಿದ್ದ ಸಂಕ್ರಾಂತಿ ಹಬ್ಬದ ಅಡುಗೆ ತಿನ್ನಿಸಿದರು.ಶ್ರೀರಂಗಪಟ್ಟಣ, ಗಂಜಾಂ, ತಾಲೂಕಿನ ಬಾಬುರಾಯನ ಕೊಪ್ಪಲು, ಚಿನ್ನಾಯಕನಹಳ್ಳಿ, ಮೇಳಾಪುರ, ಬೆಳಗೊಳ, ಹುಲಿಕೆರೆ, ಅಗ್ರಹಾರ ಸೇರಿದಂತೆ ತಾಲೂಕಿನಾದ್ಯಂತ ಮಕರ ಸಂಕ್ರಾತಿ ಅಂಗವಾಗಿ ಬೆಂಕಿಯಲ್ಲಿ ಕಿಚ್ಚು ಹಾಯಿಸುವುದು ಕಂಡು ಬಂತು.