ಮುಂಡಗೋಡ: ಭಾರೀ ಮಳೆಯಿಂದಾಗಿ ಸಾಕಷ್ಟು ಪ್ರಮಾಣದ ಬೆಳೆ ಹಾನಿಯಾಗಿದ್ದು, ಹಲವು ಮನೆಗಳು ಕುಸಿದಿವೆ. ಈ ಬಗ್ಗೆ ಪರಿಹಾರ ನೀಡಬೇಕು ಹಾಗೂ ಗುಂಡಿ ಬಿದ್ದು ಹಾಳಾದ ರಸ್ತೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯವರು ಮುಂಡಗೋಡ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದ್ದು, ಬೆಳೆ ಹಾನಿಯಿಂದಾದ ನಷ್ಟಕ್ಕೆ ಸರ್ಕಾರದಿಂದ ಸಮೀಕ್ಷೆ ಮಾಡಿ ಪರಿಹಾರವನ್ನು ಕೂಡಲೇ ನೀಡಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಕೆ ಬೆಳೆಗೆ ಕೊಳೆ ರೋಗ ಬಂದು ಅಡಿಕೆಗಳು ಕೊಳೆತು ಉದುರುತ್ತಿವೆ. ಅಡಕೆ ಬೆಳೆಗಾರರಿಗೆ ಒಂದು ಎಕರೆಗೆ ₹೫೦ ಸಾವಿರ ಬೆಳೆ ಪರಿಹಾರ ನೀಡಬೇಕು. ಗೋವಿನಜೋಳ ಬೆಳೆ ಕೂಡ ಹಾಳಾಗಿದ್ದು, ಗೋವಿನಜೋಳ ಬೆಳೆದ ರೈತರಿಗೆ ಒಂದು ಎಕರೆಗೆ ₹೨೫೦೦೦ ಸಾವಿರ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಭಾರೀ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ಮನೆಗಳು ಬಿದ್ದು ಹೋಗಿವೆ. ಬಿದ್ದು ಹೋಗಿರುವ ಎಲ್ಲ ಮನೆಗಳಿಗೆ ತಾರತಮ್ಯ ಮಾಡದೆ ಕೂಡಲೇ ಪರಿಹಾರ ನೀಡಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ರಸ್ತೆಗಳು ತಗ್ಗು ಬಿದ್ದಿದೆ. ಇದರಿಂದಾಗಿ ದ್ವಿಚಕ್ರ ವಾಹನಗಳಿಗೆ ಹಾಗೂ ಕಾರು ಮುಂತಾದ ವಾಹನಗಳ ಅಪಘಾತಗಳು ಹೆಚ್ಚುತ್ತಿವೆ. ರಸ್ತೆ ಸರಿಪಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಆದೇಶಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಉಪಾಧ್ಯಕ್ಷ ಭೀಮಸಿ ವಾಲ್ಮೀಕಿ, ಗೋವಿಂದ ಬೆಂಡ್ಲಗಟ್ಟಿ, ಎಸ್.ಎಸ್. ಪಾಟೀಲ್, ಮಾರ್ಟಿನ್ ಬಳ್ಳಾರಿ, ಖೇಮಣ್ಣ ಲಮಾಣಿ, ರೈತ ಮುಖಂಡ ನಾಗರಾಜ ಬೆಣ್ಣಿ ಮುಂತಾದವರಿದ್ದರು.