ಶಿರಸಿ: ಶಿರಸಿ ನಗರಸಭೆ ಪೈಪ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯಲ್ಲಿ ನಗರಸಭೆ ಕಮಿಷನರ್ ಕಾಂತರಾಜು, ಜೂನಿಯರ್ ಎಂಜಿನಿಯರ್ ಸುಫಿಯಾನ್ ಬ್ಯಾರಿ, ಎಇಇ ಪ್ರಶಾಂತ ವೆರ್ಣೇಕರ, ನಗರಸಭೆ ಸದಸ್ಯರಾದ ಗಣಪತಿ ನಾಯ್ಕ, ಕುಮಾರ ಬೋರ್ಕರ್, ಯಶವಂತ ಮರಾಠಿ ಭಾಗಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಸರ್ಕಾರಿ ನೌಕರರು ಮತ್ತು ಮೂವರು ನಗರಸಭೆ ಸದಸ್ಯರು ಸರ್ಕಾರಿ ಮತ್ತು ಸಾರ್ವಜನಿಕ ಸೇವಕರಾಗಿರುವುದರಿಂದ (ಪಬ್ಲಿಕ್ ಸರ್ವಂಟ್) ಅವರ ಮೇಲೆ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು, ಸೇವೆಯಿಂದ ತೆಗೆದು ಹಾಕಲು ಅಧಿಕಾರವಿರುವ ಪ್ರಾಧಿಕಾರ ಯಾರು ಎನ್ನುವ ಬಗ್ಗೆ ದಾಖಲಾತಿಯನ್ನು ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಕೋರಲಾಗಿದೆ. ಅವರಿಂದ ಮಾಹಿತಿ ಸಂಗ್ರಹಿಸಿದ ಆನಂತರ ಸರ್ಕಾರಿ ನೌಕರರ ಮೇಲೆ ಕಾನೂನು ಕ್ರಮ ಜರುಗಿಸಲು ಅನುಮತಿ ಪತ್ರ ಪಡೆದುಕೊಳ್ಳುವುದು ಬಾಕಿ ಇದೆ. ಈ ಪ್ರಕರಣದಲ್ಲಿ ಆರೋಪಿ ಶಿಕಾರಿಪುರದ ಸಯ್ಯದ ಝಕ್ರಿಯಾ ಹಾಗೂ ಉಳಿದವರ ಜತೆ ಸೇರಿ ಅಪರಾಧವೆಸಗಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದರು.ಪ್ರಕರಣದ ಹಿನ್ನೆಲೆ: 1969ನೇ ಸಾಲಿನಲ್ಲಿ ಶಿರಸಿಯ ಕೆಂಗ್ರೆ ನೀರು ಸರಬರಾಜು ಕೇಂದ್ರದಿಂದ ಹುತ್ಗಾರ ಪಂಪ್ ಘಟಕದ ವರೆಗೆ 8 ಕಿಲೋಮೀಟರ್ ಉದ್ದದ ಕಾಸ್ಟ್ ಐರನ್ ಪೈಪ್‌ಗಳನ್ನು ಅಳವಡಿಸಲಾಗಿತ್ತು. ಕಳೆದ ಫೆ. ೨೦ರಿಂದ ಫೆ. ೨೭ರ ವರೆಗೆ ಮಧ್ಯಂತರದಲ್ಲಿ 900 ಮೀ ಉದ್ದದ 116 ಪೈಪ್ ಕಳ್ಳತನ ಮಾಡಲಾಗಿತ್ತು. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಗುಜರಿ ಗುತ್ತಿಗೆದಾರನಾಗಿರುವ ಶಿಕಾರಿಪುರದ ಸಯ್ಯದ ಜಕ್ರಿಯಾ ಕಳ್ಳತನ ಮಾಡಿರುವ ಬಗ್ಗೆ ಸಂಶಯವಿದೆ ಎಂದು ದೂರಿನಲ್ಲಿ ಹೇಳಲಾಗಿತ್ತು. ಸಯ್ಯದ್ ಜಕ್ರಿಯಾನನ್ನು ಹಿಂದಿನ ತನಿಖಾಧಿಕಾರಿ ಸೀತಾರಾಮ ಪಿ. ವಿಚಾರಣೆ ನಡೆಸಿ, ಕಳ್ಳತನದ ಪೈಪುಗಳನ್ನು ಮಾರಾಟ ಮಾಡಿ ಗಳಿಸಿದ್ದ ₹೭.೦೨ ಲಕ್ಷ ವಶಪಡಿಸಿಕೊಂಡಿದ್ದರು. ಆತನ ವಿಚಾರಣೆಯಲ್ಲಿ ನಗರಸಭೆ ಕಮಿಷನರ್ ಕಾಂತರಾಜು, ಜೂನಿಯರ್ ಎಂಜಿನಿಯರ್ ಸುಫಿಯಾನ್ ಬ್ಯಾರಿ, ಎಇಇ ಪ್ರಶಾಂತ ವೆರ್ಣೇಕರ, ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ, ಸದಸ್ಯರಾದ ಕುಮಾರ ಬೋರ್ಕರ್, ಯಶವಂತ ಮರಾಠೆ ಸಹಕಾರ ನೀಡಿರುವುದು ಬಯಲಾಯಿತು. ಎಲ್ಲರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ನಿರೀಕ್ಷಕ ಮಂಜುನಾಥ ಗೌಡ ತನಿಖೆ ಮುಂದುವರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟೂ ೩ ಜೆಸಿಬಿ, ಕ್ರೇನ್ ಮತ್ತು ೨ ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಸ್ಟ್ ಐರನ್ ಪೈಪುಗಳನ್ನು ಪುಡಿ ಮಾಡಿ ಮಾರಾಟ ಮಾಡಿರುವುದು ತಿಳಿದು ಬಂದಿದೆ. ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದು, ವಶಪಡಿಸಿಕೊಂಡಿರುವ ವಾಹನಗಳನ್ನು ನ್ಯಾಯಾಲಯದ ಆದೇಶದಂತೆ ಮಾಲೀಕರಿಗೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಇಲಾಖೆಗಳಿಂದ ದಾಖಲೆಗಳನ್ನು ಸಂಗ್ರಹ ಮಾಡಲಾಗಿದೆ. ಕಳುವಾದ ೧೧೬ ಪೈಪ್‌ಗಳ ಈಗಿನ ಮಾರುಕಟ್ಟೆ ಮೌಲ್ಯ ₹೨೧.೧೮ ಲಕ್ಷ ಎಂದು ವರದಿ ಪಡೆಯಲಾಗಿದೆ.ಆರೋಪಿ ಸಯ್ಯದ ಜಕ್ರಿಯಾ ಖಾತೆಯಿಂದ ನಗರಸಭಾ ಸದಸ್ಯ ಯಶವಂತ ಮರಾಠೆ ಖಾತೆಗೆ ಅಂದಾಜು ₹೧ ಲಕ್ಷ ವರ್ಗಾವಣೆಯಾಗಿರುವ ಬಗ್ಗೆಯೂ ದಾಖಲೆ ಸಂಗ್ರಹಿಸಲಾಗಿದೆ. ಪ್ರಕರಣದ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಹೇಳಿದರು.
ಡಿಎಸ್‌ಪಿ ಗೀತಾ ಪಾಟೀಲ, ಶಿರಸಿ ಸಿಪಿಐ ಶಶಿಕಾಂತ ವರ್ಮಾ, ಸಿದ್ದಾಪುರ ಪಿಐ ಜೆ.ಬಿ. ಸೀತಾರಾಮ, ಶಿರಸಿ ಗ್ರಾಮೀಣ ಠಾಣೆ ಪಿಐ ಮಂಜುನಾಥ ಗೌಡ, ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ, ಯಲ್ಲಾಪುರ ಪಿಐ ರಮೇಶ ಹಾನಾಪುರ ಮತ್ತಿತರರು ಇದ್ದರು.