ಕನ್ನಡಪ್ರಭ ವಾರ್ತೆ ಮಾನ್ವಿ
ತಾಲೂಕಿನ ರಾಯಚೂರು-ಸಿಂಧನೂರು ಮುಖ್ಯ ರಸ್ತೆಯ 85ನೇ ಮೈಲ್ ಕಾಲುವೆ ಬಳಿ ಸೇರಿದ ನೂರಾರು ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಮುನಿರಾಬಾದ್ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಹನುಮಂತಪ್ಪ ದಾಸರ್ ಅವರಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಟಿಎಲ್ಬಿಸಿ ಉಪಕಾಲುವೆಗಳಾದ 76, 82, 85, 89, 90, 91 ಮತ್ತು 92ರ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ಪೂರೈಸಬೇಕು. ಕಾಲುವೆಗಳಿಗೆ ಅಳವಡಿಸಿರುವ ಭಾರಿ ಗಾತ್ರದ ಅನಧಿಕೃತ ಪೈಪ್ ಗಳನ್ನು ತೆರವುಗೊಳಿಸಬೇಕು. ಕಾಲುವೆಗಳಲ್ಲಿನ ಹೂಳು ಮತ್ತು ರಸ್ತೆ ಮೇಲೆ ಜಂಗಲ್ ಕಟ್ಟಿಂಗ್ ಮಾಡಿಸಬೇಕು. ನೀರು ನಿರ್ವಹಣೆಗೆ ಅಗತ್ಯವಿರುವ ಎಂಜಿನಿಯರ್‌ಗಳನ್ನು ನೇಮಕ ಮಾಡಬೇಕು. ತುಂಗಭದ್ರಾ ಮುಖ್ಯ ಕಾಲುವೆಯ ಎಲ್ಲಾ ವಿಭಾಗಗಳಲ್ಲಿ ಸುಮಾರು 1.5 ಲಕ್ಷ ಎಕರೆಯಷ್ಟು ಅನಧಿಕೃತ ನೀರಾವರಿ ಮಾಡಿಕೊಂಡಿರುವ ಜಮೀನು ಮಾಲೀಕರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ವಿವಿಧ ಪಕ್ಷಗಳ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಭಾಗವಹಿಸಿದ್ದರು.