ರಾತ್ರಿ ವಿದ್ಯುತ್‌ ಪೂರೈಕೆಗೆ ರೈತರ ಆಗ್ರಹ

KannadaprabhaNewsNetwork | Published : Feb 5, 2025 12:30 AM

ಸಾರಾಂಶ

ಕಳೆದ ಕೆಲ ತಿಂಗಳಿನಿಂದ ಅಲ್ಲಲ್ಲಿ ಚಿರತೆ ಓಡಾಟ ನಡೆಸುತ್ತಿದ್ದು, ಅರಣ್ಯ ಇಲಾಖೆ ಚಿರತೆ ಹಿಡಿಯಲು ಪ್ರಯತ್ನ ನಡೆಸುತ್ತಿದೆ.

ಗಜೇಂದ್ರಗಡ: ರಾಜೂರು ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಚಿರತೆ ಓಡಾಟ ಹೆಚ್ಚಾಗಿದ್ದು, ಈ ಭಾಗದ ಗ್ರಾಮಗಳಲ್ಲಿ ರಾತ್ರಿ ವೇಳೆ ಜಮೀನುಗಳಲ್ಲಿ ಹೆಸ್ಕಾಂ ವಿದ್ಯುತ್ ಪೂರೈಕೆಗೆ ಮುಂದಾಗಬೇಕು, ಇಲ್ಲದಿದ್ದರೆ ಹೆಸ್ಕಾಂ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಹೇಳಿದರು.

ಸಮೀಪದ ರಾಜೂರು ಗ್ರಾಮದ ಚಂದಪ್ಪ ಹಿರೇಮನಿ ಅವರ ಜಮೀನಿನಲ್ಲಿ ಸೋಮವಾರ ಸಂಜೆ ಚಿರತೆ ಓಡಾಟ ನಡೆಸಿದ ಹಿನ್ನೆಲೆ ಆತಂಕಗೊಂಡ ಗ್ರಾಮದ ಸುತ್ತಲಿನ ಜಮೀನುಗಳ ರೈತರು ಮಂಗಳವಾರ ಕೆಲಕಾಲ ಪ್ರತಿಭಟಿಸಿ ಮಾತನಾಡಿದರು.

ಕಳೆದ ಕೆಲ ತಿಂಗಳಿನಿಂದ ಅಲ್ಲಲ್ಲಿ ಚಿರತೆ ಓಡಾಟ ನಡೆಸುತ್ತಿದ್ದು, ಅರಣ್ಯ ಇಲಾಖೆ ಚಿರತೆ ಹಿಡಿಯಲು ಪ್ರಯತ್ನ ನಡೆಸುತ್ತಿದೆ. ಆದರೆ ಜಮೀನುಗಳಲ್ಲಿ ಮನೆ ಮಾಡಿಕೊಂಡಿರುವ ನಮಗೆ ಚಿರತೆ ಭಯ ಮತ್ತಷ್ಟು ಆತಂಕಕ್ಕೆ ದೂಡಿದೆ.ಬೆಳಗ್ಗೆಯಿಂದ ಸುತ್ತಲಿನ ಜಮೀನುಗಳಲ್ಲಿ ಜನರ ಓಡಾಟ ಇರುವದರಿಂದ ಸಂಜೆವರೆಗೆ ಕಾಲ ದೂಡುತ್ತಿದ್ದೇವೆ. ರಾತ್ರಿಯಾದರೆ ವಿದ್ಯುತ್ ಸರಬರಾಜು ನಿಲ್ಲಿಸುವ ಹೆಸ್ಕಾಂನಿಂದ ಜಮೀನುಗಳಲ್ಲಿ ಕತ್ತಲು ಆವರಿಸುತ್ತಿದೆ. ಏನಾದರೂ ತರಲು ಹೊರಟರೆ ಮಕ್ಕಳು ಹೊರಗೆ ಹೋಗಬೇಡಿ ಎನ್ನುತ್ತಾರೆ ಅವರು ಹೋಗುತ್ತೇವೆ ಎಂದರೆ ನಾವು ಬೇಡ ಎನ್ನುವ ಸ್ಥಿತಿ ಚಿರತೆ ಹಾಗೂ ಹೆಸ್ಕಾಂನಿಂದ ಆಗುತ್ತಿದೆ. ಇತ್ತ ಚಿರತೆ ಹಿಡಿಯಲು ಆಗಮಿಸುವ ಅರಣ್ಯ ಅಧಿಕಾರಿಗಳು ಸಹ ಕತ್ತಲಲ್ಲಿಯೇ ಚಿರತೆ ಶೋಧ ಮಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಚಿರತೆ ಹಿಡಿಯಲು ಆಗಮಿಸುವ ಅಧಿಕಾರಿಗಳ ಸ್ಥಿತಿಯೇ ಹೀಗಾಗಿದೆ. ನಮ್ಮ ಗೋಳು ಕೇಳುವವರಿಲ್ಲದಂತಾಗಿದೆ. ಈ ಕುರಿತು ಶಾಸಕ ಜಿ.ಎಸ್.ಪಾಟೀಲ ಅವರ ನಿವಾಸಕ್ಕೆ ೧೫ಕ್ಕೂ ಅಧಿಕ ರೈತರು ತೆರಳಿ ಮನವಿ ಪತ್ರ ನೀಡಿದಾಗ ಹೆಸ್ಕಾಂ ಮೇಲಾಧಿಕಾರಿಗಳಿಗೆ ರೈತರಿಗೆ ವಿದ್ಯುತ್ ಪೂರೈಸಿ ಎಂದು ಸೂಚಿಸಿದ್ದಾರೆ. ಆದರೆ ಅವರ ಮಾತಿಗೂ ಸಹ ಸ್ಪಂದಿಸದ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆ ವೇಳೆ ಟ್ರಿಪ್ ಆಗುತ್ತದೆ ಎನ್ನುವ ಕಾರಣ ನೀಡಿ ಜಾರಿಕೊಳ್ಳುತ್ತಿದ್ದಾರೆ. ಪರೀಕ್ಷಾ ಸಮಯ ಇರುವದರಿಂದ ವಿದ್ಯಾರ್ಥಿಗಳು ಓದಲು ಸಹ ಆಗದ ದುಸ್ಥಿತಿ ನಿರ್ಮಾಣವಾಗಿದೆ. ಚಿರತೆ ದಾಳಿಯಿಂದ ಏನಾದರೂ ಅವಘಡಗಳು ಸಂಭವಿಸಿದರೆ ಅದಕ್ಕೆ ಹೆಸ್ಕಾಂ ನೇರ ಕಾರಣವಾಗಲಿದೆ. ಹೀಗಾಗಿ ಹೆಸ್ಕಾಂ ಅಧಿಕಾರಿಗಳು ರಾಜೂರು ಸೇರಿದಂತೆ ಸುತ್ತಲಿನ ಗ್ರಾಮಗಳ ಜಮೀನುಗಳಿಗೆ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಗೆ ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗಜೇಂದ್ರಗಡ ಹೆಸ್ಕಾಂ ಕಚೇರಿ ಎದುರು ಉಗ್ರ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.

ಈ ವೇಳೆ ಚಂದಪ್ಪ ಹಿರೇಮನಿ, ಕಳಕಪ್ಪ ಹೂಗಾರ, ಮುದಿಯಪ್ಪ ಜೋಗಿನ, ಯಲ್ಪಪ್ಪ ಬುಮ್ಮದ, ಕನಕಪ್ಪ ಹಲಗಿ, ಮಲ್ಲಪ್ಪ ಮಾಟಿನ, ಕನಕಪ್ಪ ಬುಮ್ಮದ, ನಾಗಪ್ಪ ಬಾಣದ, ಮುತ್ತಪ್ಪ ಕಾತ್ರಾಳ ಸೇರಿದಂತೆ ಇತರರು ಇದ್ದರು.

Share this article