ಸತ್ಯ ಶುದ್ಧ ಕಾಯಕದಿಂದ ಜೀವನದಲ್ಲಿ ಯಶಸ್ಸು ಸಾಧ್ಯ: ರಂಭಾಪುರಿ ಶ್ರೀ

KannadaprabhaNewsNetwork |  
Published : Feb 05, 2025, 12:30 AM IST
1ಎಚ್‌ಬಿಎಚ್1ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಉತ್ಸವ ವಿವಿಧ ವಾಧ್ಯಗೋಷ್ಠಿಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.  | Kannada Prabha

ಸಾರಾಂಶ

ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ಮಹಾದೇವತಾತನ ರಥೋತ್ಸವದ ಹಿನ್ನೆಲೆಯಲ್ಲಿ ಜದ್ಗುರುಗಳ 34ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ ಮತ್ತು ಅಡ್ಡಪಲ್ಲಕ್ಕಿ ಮಹೋತ್ಸವ ಜನಜಾಗೃತಿ ಧರ್ಮಸಭೆ ನಡೆಯಿತು.

ಹಗರಿಬೊಮ್ಮನಹಳ್ಳಿ: ಅನಾರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಡಿಗಲ್ಲಿಡುವ ಜನರ ಸಂಖ್ಯೆ ಹೆಚ್ಚಾಗುತ್ತಿದ್ದು, ಮನುಷ್ಯ ಜಾಗೃತಗೊಂಡು ಆದರ್ಶ ಸಂಸ್ಕೃತಿ ಉಳಿವಿಗಾಗಿ ಶ್ರಮಿಸಬೇಕಾಗಿದೆ ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ಮಹಾದೇವತಾತನ ರಥೋತ್ಸವದ ಹಿನ್ನೆಲೆಯಲ್ಲಿ ನಡೆದ ಜದ್ಗುರುಗಳ 34ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ ಮತ್ತು ಅಡ್ಡಪಲ್ಲಕ್ಕಿ ಮಹೋತ್ಸವ ಜನಜಾಗೃತಿ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಎಲ್ಲ ಧರ್ಮಗಳ ಗುರಿ ಮಾನವ ಕಲ್ಯಾಣವಾಗಿದೆ. ಧರ್ಮ, ಭಾಷೆ ಮತ್ತು ಪ್ರಾಂತ್ಯದ ಹೆಸರಿನಲ್ಲಿ ಸಂಘರ್ಷ ಒಳಿತಲ್ಲ. ಮಾನವ ಧರ್ಮಕ್ಕೆ ಒಳಿತಾಗಲಿ ಎಂಬುದು ಪೀಠದ ಧ್ಯೇಯವಾಗಿದೆ. ಹಂಪಸಾಗರದಲ್ಲಿ ಭಕ್ತಿ ಸಾಗರವನ್ನು ಹರಿಸುವ ಪೂರ್ವಜರ ಸಂಕಲ್ಪವನ್ನು ಅಭಿನವ ಶಿವಲಿಂಗರುದ್ರಮುನಿ ಶಿವಾಚಾರ್ಯರು ಸಾಕಾರಗೊಳಿಸಿದ್ದಾರೆ. ಮಾನವ ಧರ್ಮದ ಆದರ್ಶ ಮೌಲ್ಯಗಳನ್ನು ಅರಿತು ಬಾಳಬೇಕು. ಮನುಷ್ಯನಲ್ಲಿ ಆತ್ಮ ಬಲ ಬೆಳೆಯಲು ಆಧ್ಯಾತ್ಮದ ಹಸಿವು ಬೇಕು. ಅಸ್ಪೃಶ್ಯತೆ ಅಳಿವು, ಮಹಿಳೆಯ ಉದ್ದಾರವನ್ನು ರಂಭಾಪುರಿ ಧರ್ಮಪೀಠ ಎತ್ತಿ ಹಿಡಿದಿದೆ. ವೈಚಾರಿಕತೆ, ವೈಜ್ಞಾನಿಕತೆ ಇರಲಿ. ಆದರೆ, ನಾಸ್ತಿಕತೆ ಬಿತ್ತಬೇಡಿ ಎಂದರು.

ಸಹನೆ ನಿನ್ನದಾದರೆ ಸಕಲವೂ ನಿನ್ನದೆ, ವಿನಯ ನಿನ್ನದಾದರೆ ವಿಜಯವೂ ನಿನ್ನದೆ. ಸತ್ಯ ಶುದ್ಧ ಕಾಯಕ ಜೀವನದ ಶ್ರೇಯಸ್ಸಿಗೆ ಕಾರಣ. ಜೀವನಾಧಾರಕ್ಕೆ ಅನ್ನ-ನೀರು, ಗಾಳಿ ಅವಶ್ಯಕವಾಗಿರುವಂತೆ ಜೀವನದ ಉನ್ನತಿ, ಶ್ರೇಯಸ್ಸಿಗೆ ನಿರಂತರ ಪ್ರಯತ್ನ ಮತ್ತು ಸಾಧನೆ ಮುಖ್ಯವಾಗಿದೆ. ಉತ್ತಮ ಚಿಂತನೆಗಳು ನಮ್ಮ ಬದುಕಿನ ಜೊತೆಗೆ ಪರರ ಬದುಕಿಗೂ ಬೆಳಕಾಗಬಲ್ಲವು. ಉಚ್ಛ, ನೀಚ ಸಂಸ್ಕೃತಿಯನ್ನು ಕಿತ್ತುಹಾಕಿ ಸಂಸ್ಕಾರ, ಸದ್ವಿಚಾರಗಳನ್ನು ಬಿತ್ತಬೇಕು. ಕೆಲವರು ಸಾಮಾಜಿಕ ವ್ಯವಸ್ಥೆಯಲ್ಲಿ ಧರ್ಮ-ಧರ್ಮಗಳ ಮಧ್ಯೆ, ಜಾತಿ-ಜಾತಿಗಳ ನಡುವೆ ಸಂಘರ್ಷವನ್ನುಂಟು ಮಾಡುತ್ತಿರುವುದು ವಿಷಾದನೀಯ. ನಿರ್ಮಲ ಮನಸ್ಸಿನಿಂದ ಕಾಯಕ ಮಾಡಿದರೆ ಜನಕಲ್ಯಾಣದ ಜೊತೆಗೆ ಲೋಕ ಕಲ್ಯಾಣವಾಗುವುದು. ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಮೌಲ್ಯಾಧಾರಿತ ವಿಚಾರಧಾರೆಗಳು ಸಕಲರ ಶ್ರೇಯಸ್ಸಿಗೆ ಕಾರಣವಾಗಿವೆ. 33 ವರ್ಷ ಪೂರ್ಣಗೊಂಡು 34ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ ಹಂಪಸಾಗರದಲ್ಲಿ ಜರುಗುತ್ತಿರುವುದು ಸಂತೋಷದ ಸಂಗತಿ ಎಂದರು.

ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ನೇತೃತ್ವ ವಹಿಸಿ ಮಾತನಾಡಿ, ಹಂಪಸಾಗರ ಮತ್ತು ಸುತ್ತಲಿನ ಗ್ರಾಮಸ್ಥರ ಸಹಕಾರದಿಂದಾಗಿ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ, ವರ್ಧಂತಿ ಮಹೋತ್ಸವ ಐತಿಹಾಸಿಕ ಕ್ಷಣಗಳನ್ನು ದಾಖಲಿಸಿದೆ. ಸಮಾಜದಲ್ಲಿ ಸಾಹಿತ್ಯ ಸಂಸ್ಕೃತಿ ಸಮೃದ್ದಿಯಾಗಬೇಕು ಎಂದರು.

ಶಾಸಕ ಕೆ. ನೇಮರಾಜ ನಾಯ್ಕ ಉದ್ಘಾಟಿಸಿ ಮತನಾಡಿ, ಸಮಾಜದ ಕಲುಷಿತ ವಾತಾವರಣ ಶುದ್ದೀಕರಿಸಲು, ಮಠಮಾನ್ಯಗಳು ಉದಾತ್ತ ಸೇವೆಯನ್ನು ಮಾಡುತ್ತಿವೆ ಎಂದರು.

ಈ ಸಂದರ್ಭದಲ್ಲಿ ಗುರುಶಾಂತ ಶಿವಾಚಾರ್ಯರು, ಶಾಂತಲಿಂಗ ಶಿವಾಚಾರ್ಯರು, ವೀರೇಶ್ವರ ಸ್ವಾಮೀಜಿ, ಶಿವಯೋಗಿ ಶಿವಾಚಾರ್ಯ, ಕೂಡಿಗಿ ಡಾ. ಪ್ರಶಾಂತ ಸಾಗರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಇದೇವೇಳೆ ಉತ್ತಂಗಿ ಎಚ್.ಎಂ. ಚನ್ನಯ್ಯ ಸ್ವಾಮಿ ಬರೆದ ಜಗದ್ಗುರು ರೇಣುಕಾಚಾರ್ಯರ ಮಹಿಮೆಗಳು ಹಾಗೂ ಬೋಧಾಮೃತಿ ಕೃತಿ ಬಿಡುಗಡೆಗೊಂಡಿತು. ಅಂತರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ದೆಯಲ್ಲಿ ಚಿನ್ನದ ಪದಕ ಗಳಿಸಿದ ಬನ್ನಿಗೋಳ ಮಾರುತೇಶ ಅವರನ್ನು ರಂಭಾಪುರಿ ಶ್ರೀಗಳು ಸನ್ಮಾನಿಸಿದರು.

ಇದಕ್ಕೂ ಮುನ್ನ ವಿವಿಧ ವಾಧ್ಯಗೋಷ್ಠಿಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೂರಾರು ಮಹಿಳೆಯರು ಕಳಸಕುಂಭಗಳೊಂದಿಗೆ ಅಡ್ಡಪಲ್ಲಕ್ಕಿಯಲ್ಲಿ ರಂಭಾಪುರಿ ಶ್ರೀಗಳ ಮೆರವಣಿಗೆ ಮಾಡಿದರು. ಮಾರ್ಗದುದ್ದಕ್ಕೂ ಭಕ್ತರು ಹೂ ಎರಚಿ, ನೈವೈದ್ಯ ಸಮರ್ಪಿಸಿ ಭಕ್ತಿಭಾವ ಮೆರೆದರು.

ಉಪ್ಪಾರಗಟ್ಟಿ, ಏಣಿಗಿ ಬಸಾಪುರ ಗ್ರಾಮದ ಸಮಾಳ ನಂದಿಕೋಲು ವಿವಿಧ ವಾಧ್ಯಗೋಷ್ಠಿಗಳು ಅಡ್ಡಪಲ್ಲಕ್ಕಿ ಉತ್ಸವಕ್ಕೆ ಮೆರಗು ತಂದಿದ್ದವು. ಈ ಸಂದರ್ಭದಲ್ಲಿ ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ, ರೋಣ ಶಾಸಕ ಜಿ.ಎಸ್. ಪಾಟೀಲ ಮುಖಂಡರಾದ ಬದಾಮಿ ಮೃತ್ಯುಂಜಯ, ಪೊಲೀಸ್ ರಾಮನಾಯ್ಕ, ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ, ಬ್ಯಾಟಿ ನಾಗರಾಜ, ವಿನಾಯಕ ಇದ್ದರು. ಕಾರ್ಯಕ್ರಮವನ್ನು ಎಚ್. ಶಾಂತ ಆನಂದ ಶಿವಮೊಗ್ಗ, ಕರೆಂಗಿ ಸುಭಾಷ್ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!