ಕಬ್ಬು ಬಾಕಿ ಹಣ ಪಾವತಿಗೆ ರೈತರ ಆಗ್ರಹ

KannadaprabhaNewsNetwork |  
Published : Feb 17, 2026, 02:15 AM IST
ಶಿಗ್ಗಾಂವಿ ತಾಲೂಕು ಕೋಣನಕೇರಿ ವಿಐಎನ್‌ಪಿ ಕಾರ್ಖಾನೆಗೆ ಕಬ್ಬು ಬೆಳೆಗಾರರು ಸೋಮವಾರ ತೆರಳಿ ಬಾಕಿ ಮೊತ್ತ ಪಾವತಿಸುವಂತೆ ಆಗ್ರಹಿಸಿದರು. | Kannada Prabha

ಸಾರಾಂಶ

ಶಿಗ್ಗಾಂವಿ ತಾಲೂಕು ಕೋಣನಕೇರಿ ವಿಐಎನ್‌ಪಿ ಕಾರ್ಖಾನೆಗೆ ಕಬ್ಬು ಪೂರೈಸಿ ಮೂರು ತಿಂಗಳಾದರೂ ಹಣ ಪಾವತಿಸದ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ಸೋಮವಾರ ಕಾರ್ಖಾನೆಗೆ ತೆರಳಿ ಬಾಕಿ ಮೊತ್ತ ಪಾವತಿಸುವಂತೆ ಆಗ್ರಹಿಸಿದರು.

ಹಾವೇರಿ: ಶಿಗ್ಗಾಂವಿ ತಾಲೂಕು ಕೋಣನಕೇರಿ ವಿಐಎನ್‌ಪಿ ಕಾರ್ಖಾನೆಗೆ ಕಬ್ಬು ಪೂರೈಸಿ ಮೂರು ತಿಂಗಳಾದರೂ ಹಣ ಪಾವತಿಸದ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ಸೋಮವಾರ ಕಾರ್ಖಾನೆಗೆ ತೆರಳಿ ಬಾಕಿ ಮೊತ್ತ ಪಾವತಿಸುವಂತೆ ಆಗ್ರಹಿಸಿದರು. ಈಗಾಗಲೇ ಕಬ್ಬು ಪೂರೈಸಿ ಮೂರು ತಿಂಗಳು ಗತಿಸಿದರೂ ರೈತರ ಹಣ ಪಾವತಿಸಿಲ್ಲ, ಈ ಕುರಿತು ಹಲವು ಬಾರಿ ಮನವಿ ಮಾಡಿಕೊಂಡಾಗಲೂ ಪಾವತಿಸುವುದಾಗಿ ಹೇಳಿ ದಿನ ದೂಡಲಾಗುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಕೋಣನಕೇರಿ ವಿಐಎನ್‌ಪಿ ಸಕ್ಕರೆ ಕಾರ್ಖಾನೆಯಲ್ಲಿ ಸುಮಾರು 1500 ರೈತರ ಹಾಗೂ ಸಂಗೂರ ಜಿಎಂ ಶುಗರ್ಸ್‌ನವರು ಸುಮಾರು 3000ಕ್ಕೂ ಹೆಚ್ಚು ರೈತರಿಗೆ ಹಣ ಪಾವತಿಸುವುದು ಬಾಕಿ ಇದೆ. ರೈತರು ಸಾಲಸೋಲ ಮಾಡಿ ಬೆಳೆದ ಕಬ್ಬು ಸಾಗಿಸಿದ್ದಾರೆ. ಈ ವರ್ಷ ಮೆಕ್ಕೆಜೋಳದ ಬೆಲೆಯೂ ಸಹ ಪಾತಾಳಕ್ಕೆ ಕುಸಿದಿದೆ. ಕಾರ್ಖಾನೆಗಳಿಗೆ ಕಬ್ಬು ಸಾಗಿಸಿ 14 ದಿನಗಳ ಒಳಗಾಗಿ ಹಣ ಪಾವತಿಸಬೇಕೆಂಬ ಆದೇಶವಿದೆ. ತಪ್ಪಿದಲ್ಲಿ ಬಡ್ಡಿ ನೀಡಬೇಕೆಂಬ ನಿರ್ದೇಶನವಿದೆ. ಆದಾಗ್ಯೂ ಸಹ ಕಾರ್ಖಾನೆಯವರು ರೈತರ ಹಣ ಪಾವತಿಗೆ ಮುಂದಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಇದೇ ವೇಳೆ ಸಕ್ಕರೆ ಕಾರ್ಖಾನೆಯ ಆಡಳಿತ ಕಚೇರಿಯಲ್ಲಿ ಸಭೆ ನಡೆಸಿದ ಕಾರ್ಖಾನೆಯ ಅಧಿಕಾರಿಗಳಾದ ಲಕ್ಷ್ಮಣ ಎಮ್ಮಿಯವರ, ಎಚ್.ಆರ್.ವಿಭಾಗದ ಮಂಜುನಾಥ, ಶೀಘ್ರವೇ ಬಾಕಿ ಹಣ ಪಾವತಿಸುವುದಾಗಿ ಭರವಸೆ ನೀಡಿದರು. ವಿಐಎನ್‌ಪಿ ಸಕ್ಕರೆ ಕಾರ್ಖಾನೆಯ ಎಂಡಿ ವಿವೇಕ ಹೆಬ್ಬಾರ ದೂರವಾಣಿ ಮೂಲಕ ಮಾತನಾಡಿ, ಎಥೇನಾಲ್ ಹೊರಹೋಗಿಲ್ಲ, ಸಕ್ಕರೆ ದರ ಕಡಿಮೆ ಆಗಿದೆ ಈ ಕಾರಣದಿಂದ ಈ ಬಾರಿ ಹಣ ಪಾವತಿ ವ್ಯತ್ಯಯವಾಗಿದ್ದು, ಈ ತಿಂಗಳಾಂತ್ಯದ ಒಳಗಾಗಿ ಹಣ ಪಾವತಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಭುವನೇಶ್ವರ ಶಿಡ್ಲಾಪುರ ತಿಳಿಸಿದರು. ಸಕ್ಕರೆ ಕಾರ್ಖಾನೆಗಳು ಸರ್ಕಾರಕ್ಕೆ ತಪ್ಪು ಮಾಹಿತಿ ಕೊಟ್ಟಿವೆ, ರೈತರಿಗೆ ಹಣ ಹಾಕಿದ್ದೇವೆ ಎಂದು ಸುಳ್ಳುಲೆಕ್ಕಪತ್ರವನ್ನು ಕೊಟ್ಟಿದ್ದಾರೆ. ಈ ಬಗ್ಗೆ ಎಲ್ಲಾ ಹಂತದ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮಕ್ಕೆ ಮುಂದಾಗಿಲ್ಲ. ಇದೀಗ ವಿಐಎನ್‌ಪಿ ಕಾರ್ಖಾನೆಯವರು 15 ದಿನ ಕಾಲಾವಕಾಶ ಕೇಳಿದ್ದು, ಫೆಬ್ರವರಿ ಅಂತ್ಯದೊಳಗೆ ಹಂತ ಹಂತವಾಗಿ ಎಲ್ಲಾ ಬಿಲ್ಲುಗಳನ್ನು ಹಾಕುವ ಭರವಸೆ ನೀಡಿದ್ದಾರೆ. ಸರಿಯಾದ ಸಮಯಕ್ಕೆ ಹಣ ಹಾಕದೆ ಇದ್ದಲ್ಲಿ ಕಾರ್ಖಾನೆಯಿಂದ ಹೊರ ಹೋಗುವ ಸಕ್ಕರೆ, ಮೊಲೈಸಿಸ್, ಎಥೆನಾಲ್, ಸಿಎನ್‌ಜಿ ಬಯೋಗ್ಯಾಸ್, ಪ್ರೆಸ್ ಮಡ್‌ ಹೊರಗೆ ಹೋಗದ ಹಾಗೆ ಗೇಟ್‌ಗೆ ಬೀಗ ಹಾಕಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಈ ವೇಳೆ ರೈತ ಸಂಘ ಹಾಗೂ ಕಬ್ಬು ಬೆಳೆಗಾರ ಸಂಘದ ತಾಲೂಕ ಅಧ್ಯಕ್ಷರಾದ ಬಸಲಿಂಗಪ್ಪ ನರಗುಂದ, ಈರಣ್ಣ ಸಮಗೊಂಡರ, ಬಾಹುಬಲಿ ಸೊಗಲಿ, ಮುತ್ತಪ್ಪ ವೀರಾಪುರ, ಶಂಬಣ್ಣ ತರೂರ, ಕಿರಣ್ ಗಾಣಿಗೇರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿಮ್ಸ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಕ್ರಮ ಅನಿವಾರ್ಯ: ತಂಗಡಗಿ ಎಚ್ಚರಿಕೆ
ಸೇವಾಲಾಲರ ಆದರ್ಶ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು-ಮಾಜಿ ಸಚಿವ ಬಿ.ಸಿ. ಪಾಟೀಲ