ಕೆಡಿಸಿಸಿ ಬ್ಯಾಂಕ್‌ಗೆ ಅಧ್ಯಕ್ಷರಾಗಿ ಹೆಬ್ಬಾರ್ ಪುನರಾಯ್ಕೆ, ಉಪಾಧ್ಯಕ್ಷರಾಗಿ ಕೃಷ್ಣ ದೇಸಾಯಿ

KannadaprabhaNewsNetwork |  
Published : Feb 17, 2026, 02:15 AM IST
 | Kannada Prabha

ಸಾರಾಂಶ

ಜಿಲ್ಲಾ ಮಧ್ಯರ್ತಿ ಬ್ಯಾಂಕ್‌ಗೆ ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ್ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಸಿ

ಜಿಲ್ಲಾ ಮಧ್ಯರ್ತಿ ಬ್ಯಾಂಕ್‌ಗೆ ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ್ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.

ಸೋಮವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ ಅಧ್ಯಕ್ಷರಾಗಿ, ಜೋಯಿಡಾದ ಕೃಷ್ಣ ದೇಸಾಯಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಉಪವಿಭಾಗಾಧಿಕಾರಿ ಚಂದ್ರಶೇಖರ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಮ ಹೆಬ್ಬಾರ್, ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾಗಿರುವುದು ನಮ್ಮ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಚುನಾವಣೆಯ ಕಾಲದಲ್ಲಿ ನಡೆದ ಎಲ್ಲ ಘಟನೆಗಳನ್ನು ಬಿಟ್ಟು, ಎಲ್ಲ ನಿರ್ದೇಶಕರೂ ಒಟ್ಟಾಗಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ನಾವು ಶ್ರಮಿಸಲಿದ್ದೇವೆ. ಜಿಲ್ಲೆಯ ರೈತರು, ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು, ಸಾಲಗಾರರ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಜಿಲ್ಲೆಯ ಘಟ್ಟದ ಮೇಲಿನ ಮೂರು ತಾಲೂಕುಗಳಲ್ಲಿ ರೈತರು ಎಲೆಚುಕ್ಕಿ ರೋಗದಿಂದ ಭಯಭೀತರಾಗಿದ್ದಾರೆ. ಈ ಹಿನ್ನೆಲೆ ಬ್ಯಾಂಕಿನಿಂದ ರೈತರಿಗೆ ಸಹಾಯ, ಸೂಕ್ತ ನಿರ್ದೇಶನ ನೀಡಿ ಕಾಳಜಿ ವಹಿಸಲಿದೆ. ಕೆಡಿಸಿಸಿ ಬ್ಯಾಂಕ್ ಈಗಾಗಲೇ ಉತ್ತಮ ನಿರ್ವಹಣೆಯ ಮೂಲಕ ರಾಜ್ಯದಲ್ಲಿ ಮೂರನೇ ಉತ್ತಮ ಬ್ಯಾಂಕ್ ಎಂದು ಗುರುತಿಸಿಕೊಂಡಿದೆ. ಮುಂದಿನ ದಿನದಲ್ಲಿ ಎರಡನೇ ಸ್ಥಾನಕ್ಕೆ ಏರಿಸುವುದು ನಮ್ಮ ಗುರಿ. ಅನುತ್ಪಾದಕ ಆಸ್ತಿಯ ಪ್ರಮಾಣವನ್ನು ಶೂನ್ಯಕ್ಕಿಳಿಸುವುದು ನಮ್ಮ ಗುರಿ ಆಗಿದೆ ಎಂದರು.

ಮಾರ್ಚ್ ಅಂತ್ಯ ಸಮೀಪಿಸುತ್ತಿದ್ದು, ಕೇವಲ ೪೫ ದಿನಗಳ ಕಾಲಾವಕಾಶವಿದೆ. ಈ ಅಲ್ಪ ಅವಧಿಯಲ್ಲಿ ಬ್ಯಾಂಕಿನ ಅಭಿವೃದ್ಧಿಯ ಮುನ್ನೋಟವನ್ನು ಜನರ ಮುಂದಿಡುವುದು ಮತ್ತು ಠೇವಣಿದಾರರಲ್ಲಿ ವಿಶ್ವಾಸ ಮೂಡಿಸಿ ಸಾಲಗಾರರಿಗೆ ನ್ಯಾಯ ಒದಗಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಹಿಂದೆ ಬ್ಯಾಂಕ್ ಕೇವಲ ನಬಾರ್ಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಿತ್ತು, ಆದರೆ ಈಗ ಆರ್‌ಬಿಐ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಪ್ರತಿಯೊಂದು ಹಂತದಲ್ಲೂ ಕಟ್ಟುನಿಟ್ಟಿನ ನಿಯಮ ಪಾಲಿಸುವುದು ಅನಿವಾರ್ಯವಾಗಿದೆ ಎಂದರು.

ಮಧ್ಯಮಾವಧಿ ಸಾಲದ ಮರುಪಾವತಿಯ ಬಗ್ಗೆ ಪ್ರಸ್ತಾಪಿಸಿದ ಅವರು, ಇದು ಕೇವಲ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಲ್ಲ, ಇದರಲ್ಲಿ ಕೇಂದ್ರ ಸರ್ಕಾರ ಮತ್ತು ನಬಾರ್ಡ್ ಪಾತ್ರವೂ ಇದೆ. ಬಡ್ಡಿ ಸಹಾಯಧನದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಒಮ್ಮತವಿಲ್ಲದಿದ್ದರೆ ರೈತರ ಮೇಲೆ ಬಡ್ಡಿಯ ಹೊರೆ ಹೆಚ್ಚಾಗುವ ಅಪಾಯವಿದೆ. ಈ ಕುರಿತು ಆಡಳಿತ ಮಂಡಳಿಯಲ್ಲಿ ಗಂಭೀರ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಳೆವಿಮೆ ಪರಿಹಾರ ಯಕ್ಷಪ್ರಶ್ನೆ

ಬೆಳೆ ವಿಮೆ ಪರಿಹಾರ ಒಂದು ವಾರದಲ್ಲಿ ಬಿಡುಗಡೆ ಆಗುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾರ್, ಬೆಳೆ ವಿಮೆ ಪರಿಹಾರದ ಬಗ್ಗೆ ನನಗೂ ಅಚ್ಚರಿಯಾಗಿದೆ. ಬೆಳೆ ವಿಮೆ ಪರಿಹಾರ ಮಂಜೂರಿ ಏಕೆ ತಡವಾಗುತ್ತದೆ ಎಂಬುದು ಅರ್ಥವಾಗಿಲ್ಲ. ಪ್ರತಿ ವರ್ಷ ಮಳೆಮಾಪನ ಯಂತ್ರ ಏಕೆ ಹಾಳಾಗುತ್ತದೆ ಎಂಬುದೂ ಅರ್ಥವಾಗಿಲ್ಲ. ಅಲ್ಲದೇ, ಮಳೆ ಮಾಪನ ಯಂತ್ರಗಳ ಅಂಕಿ-ಸಂಖ್ಯೆ ಬೇಕಾಗದೇ ತಡವಾಗಿ ವಿಮೆ ಪರಿಹಾರ ಮಂಜೂರಿ ಹೇಗೆ ಆಗುತ್ತದೆ ಎಂಬುದೂ ಅರ್ಥವಾಗಿಲ್ಲ. ಈ ಬೆಳೆ ವಿಮೆ ಪರಿಹಾರವನ್ನು ತಡೆ ಹಿಡಿಯುವವರು ಯಾರು ಹಾಗೂ ಕೊಡಿಸುವವರು ಯಾರು ಎಂಬುದೂ ಅರ್ಥವಾಗದಂತಾಗಿದೆ. ತಡೆಹಿಡಿಯುವುದು ಮತ್ತು ಕೊನೆಯಲ್ಲಿ ಮಂಜೂರು ಮಾಡುವುದು ಯಕ್ಷಪ್ರಶ್ನೆಯಾಗಿದೆ. ಬೆಳೆ ವಿಮೆ ಆರಂಭವಾಗಿ ಇಷ್ಟು ವರ್ಷಗಳು ಕಳೆದರೂ ಕಳೆದ ಎರಡು ವರ್ಷಗಳಲ್ಲಿ ಮಾತ್ರ ಹೀಗೇಕಾಗುತ್ತಿದೆ? ಅವರೇ ತಡೆಹಿಡಿಯುವುದು, ಅವರೇ ಬೆಲೆ ವಿಮೆ ಮಂಜೂರು ಮಾಡಿಸಿದ್ದೇವೆ ಎನ್ನುವುದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಪೀಳಿಗೆ ಪೋಷಕಾಂಶಗಳ ಕೊರತೆ
ಪುಟ 2ಕ್ಕೆ ಬಾಟಮ್....ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ