ದೊಡ್ಡಬಳ್ಳಾಪುರ: ಜೀವನ್ಮುಕ್ತಿಗೆ ನಾದೋಪಾಸನೆ ಸರಳ ಮಾರ್ಗವಾಗಿದ್ದು, ಅದು ರೋಗ ಹರಣ, ಮುಕ್ತಿ ಸಾಧನ ಎಂದು ಮನೋವಿಜ್ಞಾನ ತಜ್ಞರ ಅಭಿಮತವಾಗಿದೆ ಎಂದು ಸಂಗೀತ ವಿಮರ್ಶಕ ಕೆ.ವಿ.ಎಂ.ಗಿರಿಧರ್ ಅಭಿಪ್ರಾಯಪಟ್ಟರು.
ತ್ಯಾಗರಾಜರ ಕೀರ್ತನೆಗಳು ಮನೋವೈಜ್ಞಾನಿಕ ಭೂಮಿಕೆಯಲ್ಲೂ ಪ್ರಸ್ತುತ ಎನಿಸುತ್ತವೆ. ಆ ಕೀರ್ತನೆಗಳನ್ನು ದಿನಕ್ಕೊಂದು ಕೇಳಿ ಆಸ್ವಾದಿಸುವುದು ದೇಹದಲ್ಲಿ ಧನಾತ್ಮಕ ಮೌಲ್ಯಗಳ ವೃದ್ದಿ ಹಾಗೂ ಶ್ವಾಸ ಪ್ರಕ್ರಿಯೆ ಸರಾಗಗೊಳ್ಳಲು ಪೂರಕವಾಗಿರುತ್ತದೆ ಎಂಬುದನ್ನು ಮನೋವಿಜ್ಞಾನಿಗಳು ಹೇಳುತ್ತಾರೆ. ತ್ಯಾಗರಾಜರಲ್ಲಿ ಆರ್ಜವ ಶಕ್ತಿ ಇತ್ತು. ಹೀಗಾಗಿಯೇ ಅವರು 96 ಕೋಟಿ ಬಾರಿ ರಾಮಸ್ತುತಿ ಮಾಡಿದ್ದರು. ಮಾತು, ಕೃತಿ, ಮನಸ್ಸು ಏಕೀಕೃತ ಭಾವದಲ್ಲಿ ಹೊರಹೊಮ್ಮುವ ಅದ್ಬುತ ಶಕ್ತಿ ಅದು ಎಂದು ಅವರು ವಿಶ್ಲೇಷಿಸಿದರು.
ನಿಂದಾಸ್ತುತಿಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಪುರಂದರದಾಸ, ಕನಕದಾಸರೂ ಅನೇಕ ನಿಂದಾಸ್ತುತಿಗಳನ್ನು ಬರೆದಿದ್ದಾರೆ. ನಿಂದಾ ಎಂದರೆ ನಿಂದಿಸುವುದು, ಸ್ತುತಿ ಎಂದರೆ ಹಾಡಿ ಹೊಗಳುವುದು. ನಿಂದಾಸ್ತುತಿ ಎಂದರೆ ಏಕಕಾಲದಲ್ಲಿ ಸ್ತುತಿ ಮತ್ತು ನಿಂದನೆಗಳನ್ನು ತರುವು ಅಪರೂಪದ ರಚನೆಗಳು ಎಂದ ಅವರು, ದಾಸವರೇಣ್ಯರ ಅನೇಕ ನಿಂದಾಸ್ತುತಿಗಳನ್ನು ಸಹೋದಾರಣವಾಗಿ ನೀಡಿದರು.ಸುಸ್ವರ ವಾರ್ಷಿಕ ಪುರಸ್ಕಾರ:
ಸುಸ್ವರ ಆಯೋಜನಾ ಸಮಿತಿ ಅಧ್ಯಕ್ಷೆ ವಿದುಷಿ ಶಾರದಾ ಶ್ರೀಧರ್ ಮಾತನಾಡಿ, ಸುಸ್ವರ ಸಂಗೀತ ಸಂಸ್ಥೆಗೆ ಅನನ್ಯ ಇತಿಹಾಸವಿದೆ. ದೊಡ್ಡಬಳ್ಳಾಪುರದ ವಿಶಿಷ್ಟ ಸಂಘಟನೆಗಳಲ್ಲಿ ಒಂದಾಗಿರುವ ಈ ಸಂಸ್ಥೆಯ ಚಟುವಟಿಕೆಗಳಲ್ಲಿ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ ಎಂದು ತಿಳಿಸಿದರು.
ದಾಸವರೇಣ್ಯರ ಆರಾಧನಾ ಮಹೋತ್ಸವ:
ಮುದ್ದೇನಹಳ್ಳಿಯ ನಾದ ಗುರುಕುಲಂ ತಂಡದಿಂದ ಗಾಯನ, ಸ್ಥಳೀಯ ಕಲಾವಿದರಿಂದ ಪುರಂದರ ದಾಸರ ಪಿಳ್ಳಾರಿ ಗೀತೆಗಳು ಹಾಗೂ ತ್ಯಾಗರಾಜರ ಪಂಚರತ್ನ ಕೃತಿಗಳ ಸಮೂಹ ಗಾಯನ ನಡೆಯಿತು.
12ಕೆಡಿಬಿಪಿ4- ದೊಡ್ಡಬಳ್ಳಾಪುರದ ಸುಸ್ವರ ಟ್ರಸ್ಟ್ 27ನೇ ವಾರ್ಷಿಕೋತ್ಸವ ಅಂಗವಾಗಿ ವಿದುಷಿ ಶೈಲಜಾಕುಮಾರಿ ಅವರಿಗೆ ವಾರ್ಷಿಕ ಪುರಸ್ಕಾರ ನೀಡಿ ಗೌರವಿಸಲಾಯಿತು.