ಕಬ್ಬಿನ ದರ ಮುಚ್ಚಳಿಕೆ ಪತ್ರ ನೀಡಲು ರೈತರ ಆಗ್ರಹ

KannadaprabhaNewsNetwork |  
Published : Nov 18, 2025, 02:15 AM IST
ಜಮಖಂಡಿ ನಗರದ ತಾಲೂಕ ಕಚೇರಿ ಎದುರು ರೈತರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಕಬ್ಬಿಗೆ ಸರ್ಕಾರ ನಿಗದಿ ಪಡಿಸಿರುವ ₹3300 ಕೊಡಲು ಓಪ್ಪಿರುವ ಸಕ್ಕರೆ ಕಾರ್ಖಾನೆಗಳು, ಮುಚ್ಚಳಿಕೆ ಪತ್ರ ನೀಡದೇ ಕಾರ್ಖಾನೆ ಪ್ರಾರಂಭಿಸಿದ್ದನ್ನು ಪ್ರಶ್ನಿಸಿ ಸೋಮವಾರ ರೈತರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಕಬ್ಬಿಗೆ ಸರ್ಕಾರ ನಿಗದಿ ಪಡಿಸಿರುವ ₹3300 ಕೊಡಲು ಓಪ್ಪಿರುವ ಸಕ್ಕರೆ ಕಾರ್ಖಾನೆಗಳು, ಮುಚ್ಚಳಿಕೆ ಪತ್ರ ನೀಡದೇ ಕಾರ್ಖಾನೆ ಪ್ರಾರಂಭಿಸಿದ್ದನ್ನು ಪ್ರಶ್ನಿಸಿ ಸೋಮವಾರ ರೈತರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಾಲೂಕಿನ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ಹಾಗೂ ಜಮಖಂಡಿ ಶುಗರ್ಸ್ ನವರು ಸರ್ಕಾರ ನಿಗದಿಪಡಿಸಿದ ದರವನ್ನು ಅಧಿಕೃತ ಮುಚ್ಚಳಿಕೆ ಪತ್ರದ ಮೂಲಕ ರೈತರಿಗೆ ತಿಳಿಸದೇ ಕಾರ್ಖಾನೆ ಪ್ರಾರಂಭಿಸಲು ಮುಂದಾಗಿದ್ದಾರೆ. ಬಾಕಿ ಉಳಿಸಿಕೊಂಡಿರುವ ಬಿಲ್‌ ಬಗ್ಗೆಯೂ ಚಕಾರ ಎತ್ತಿಲ್ಲ. ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಕಾರ್ಖಾನೆಯ ಮಾಲೀಕರಿಗೆ ಸೂಕ್ತ ನಿರ್ದೇಶನ ನೀಡಬೇಕು. ಸರ್ಕಾರದ ಅದೇಶ ಪಾಲಿಸುವಂತೆ ತಾಕೀತು ಮಾಡಬೇಕೆಂದು ರೈತರು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿ, ಖುದ್ದಾಗಿ ಮುಖ್ಯಮಂತ್ರಿಗಳೇ ತಿಳಿಸಿರುವಂತೆ ಬಾಗಲಕೋಟೆ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳು ಪ್ರತಿಟನ್‌ ಕಬ್ಬಿಗೆ ₹3300 ದರ ಕೊಡಲು ಎಲ್ಲ ಕಾರ್ಖಾನೆ ಮಾಲೀಕರು ಒಪ್ಪಿಕೊಂಡಿದ್ದಾರೆ. ಇನ್ನರೆಡು ದಿನಗಳಲ್ಲಿ ನಿರಾಣಿ ಹಾಗೂ ಜಮಖಂಡಿ ಸಕ್ಕರೆ ಕಾರ್ಖಾನೆಯವರು ಅಧಿಕೃತ ದರ ನಿಗದಿ ಕುರಿತು ಘೋಷಣೆ ಮಾಡಲಿದ್ದಾರೆ. ರೈತರು ವಿಚಲಿತರಾಗದೇ ತಮ್ಮ ಕಾರ್ಯಗಳಲ್ಲಿ ತೊಡಗಬೇಕು ಎಂದು ತಿಳಿಸಿದರು.

ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ. ರೈತರ ಸಮಸ್ಯೆಗೆ ಸ್ಪಂದಿಸುತ್ತಿದೆ. ಬಾಕಿ ಬಿಲ್‌ ಪಾವತಿಗೆ ಎಲ್ಲ ಕಾರ್ಖಾನೆಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ ಅನೀಲ ಬಡಿಗೇರ, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ಅನೀಲ ಕುಂಬಾರ ಸ್ಥಳದಲ್ಲಿದ್ದರು. ರೈತ ಮುಖಂಡರಾದ ರಾಜು ನದಾಫ್‌, ಶ್ರೀಶೈಲ ಭೂಮಾರ, ಡಾ.ಅಜಯ ಕುಲಕರ್ಣಿ, ಸಿದ್ದುಗೌಡ ಪಾಟಿಲ, ಸದಾಶಿವ ಕಲೂತಿ, ಸುರೇಶ ಹಂಚಿನಾಳ, ಗೂಡುಸಾಬ, ಕಲ್ಲಪ್ಪ ದೇಸಾಯಿ, ದಾನಗೌಡ ಶ್ರೀಶೈಲ ಮೈಗೂರ ಸೇರಿದಂತೆ ಅನೇಕರು ಇದ್ದರು.

PREV

Recommended Stories

ಬೆಳೆಹಾನಿ ಪರಿಹಾರಕ್ಕೆ ಶೀಘ್ರ ಕ್ರಮಕೈಗೊಳ್ಳಿ
ಕುವಲೆಕಾಡು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ