ಪ್ರಸಕ್ತ ವರ್ಷ ಮುಂಗಾರು ಹಂಗಾಮಿನ ಆರಂಭದಲ್ಲಿ ಮಳೆ ಕೊರತೆ ಎದ್ದು ಕಾಣುತ್ತಿದೆ. ಮುಂಗಾರಿನ ಕೃಷಿ ಚಟುವಟಿಕೆ ಕಾಣುತ್ತಿಲ್ಲ. ಮುಂಗಾರು ಬಿತ್ತನೆಗೆ ರೈತರು ಮಳೆರಾಯನ ಆಗಮನ ನೋಡುತ್ತಿದ್ದಾರೆ.
ಎಸ್.ಜಿ. ತೆಗ್ಗಿನಮನಿ
ನರಗುಂದ: ಪ್ರಸಕ್ತ ವರ್ಷ ಮುಂಗಾರು ಹಂಗಾಮಿನ ಆರಂಭದಲ್ಲಿ ಮಳೆ ಕೊರತೆ ಎದ್ದು ಕಾಣುತ್ತಿದೆ. ಮುಂಗಾರಿನ ಕೃಷಿ ಚಟುವಟಿಕೆ ಕಾಣುತ್ತಿಲ್ಲ. ನೆಪಕ್ಕೆ ಎಂಬಂತೆ ಅಲ್ಲೊಂದು, ಇಲ್ಲೊಂದು ಕೃಷಿ ಚಟುವಟಿಕೆ ನಡೆದರೂ ಬಿತ್ತನೆಗೆ ಪೂರಕ ವಾತಾವರಣ ಇಲ್ಲ. ವಾಡಿಕೆ ಮಳೆಗಿಂತ ಶೇ. 80 ಕೊರತೆ ಎದ್ದು ಕಾಣುತ್ತದೆ. ಮುಂಗಾರು ಬಿತ್ತನೆಗೆ ರೈತರು ಮಳೆರಾಯನ ಆಗಮನ ನೋಡುತ್ತಿದ್ದಾರೆ.
ಮುಂಗಾರು ಅವಧಿಯಲ್ಲಿ ತಾಲೂಕಿನ ರೈತರು ಹೆಸರು ಕಾಳು, ಮೆಕ್ಕೆಜೋಳ ಬೆಳೆಯುತ್ತಾರೆ. ಆದರೆ ಬೀಜ ಬಿತ್ತನೆಗೆ ಅಗತ್ಯವಿರುವ ಮಳೆ ಸುರಿಯುತ್ತಿಲ್ಲ. ಸುತ್ತಲಿನ ಬಹುತೇಕ ತಾಲೂಕುಗಳಲ್ಲಿ ಮಳೆ ಸುರಿದಿದೆ. ಆದರೆ ನರಗುಂದ ತಾಲೂಕಿನಲ್ಲಿ ಮಳೆಯಾಗಿಲ್ಲ. ಮೂರು ದಿನಗಳಿಂದ ಅಲ್ಲಲ್ಲಿ ತುಂತುರು ಮಳೆಯಾಗುತ್ತಿದ್ದು, ರೈತರಿಗೆ ಸಮಾಧಾನ ತಂದಿಲ್ಲ.
ಬಿತ್ತನೆಗೆ ಬೇಕಾದ ಮಳೆ ಸುರಿಯದೇ ಇರುವುದು ರೈತರನ್ನು ಚಿಂತೆಗೀಡು ಮಾಡಿದೆ. ಕಳೆದ ವರ್ಷ ಹಿಂಗಾರು, ಮುಂಗಾರು ಸಹಿತ ಬೆಳೆ ಹಾನಿಯಾಯಿತು. ಕಳಪೆ ಬೀಜ, ಅಸಮರ್ಪಕ ಮಳೆ ಹೀಗೆ ವಿವಿಧ ಕಾರಣಗಳಿಂದ ರೈತರು ಬರೀ ಖರ್ಚು ಮಾಡಿದ್ದೇ ಆಯಿತು. ಈ ಸಲ ಮುಂಗಾರು ಆರಂಭದಲ್ಲಿ ಉತ್ತಮ ಮಳೆ ಸುರಿದೀತು ಎಂಬ ಆಶಾಭಾವನೆಯಲ್ಲಿರುವ ರೈತರಿಗೆ ವರುಣದೇವ ಕೃಪೆ ತೋರಬೇಕಿದೆ.
ಬಿತ್ತನೆ ಗುರಿ: ತಾಲೂಕಿನಲ್ಲಿ 2026-27ನೇ ಸಾಲಿನಲ್ಲಿ 40,035 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. 15,623 ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆ ಗುರಿ, 19,420 ಹೆಕ್ಟೇರ್ ಹೆಸರುಕಾಳು ಬಿತ್ತನೆ ಗುರಿ, 3250 ಹೆಕ್ಟೇರ್ ಹತ್ತಿ ಬೀಜ ಬಿತ್ತನೆ ಗುರಿ, 600 ಹೆಕ್ಟೇರ್ ಜಮೀನಿನಲ್ಲಿ ಇತರ ಬೆಳೆ ಬೆಳೆಯುವ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಹೆಸರು ಬೀಜ ದಾಸ್ತಾನು: ಕೃಷಿ ಇಲಾಖೆ ಮುಂಗಾರು ಬಿತ್ತನೆಗೆ ಹೆಸರು ಬೀಜ ಒದಗಿಸಲು ಎಲ್ಲ ಸಿದ್ಧತೆ ನಡೆಸಿದೆ. ನರಗುಂದ ಹಾಗೂ ಕೊಣ್ಣೂರ ರೈತ ಸಂಪರ್ಕ ಕೇಂದ್ರಗಳಲ್ಲಿ 60 ಕ್ವಿಂಟಲ್ ಹೆಸರುಕಾಳು ಬೀಜದ ದಾಸ್ತಾನು ಮಾಡಿಕೊಂಡಿದೆ. ಸಾಮಾನ್ಯ ವರ್ಗದ ರೈತರಿಗೆ 5 ಕೆಜಿ 1 ಪ್ಯಾಕೆಟ್‌ಗೆ ₹510, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 5 ಕೆಜಿ 1 ಪ್ಯಾಕೆಟ್‌ಗೆ ₹447.50 ಸಿಗಲಿದೆ.
ಮುಂಗಾರು ಬಿತ್ತನೆಗೆ ಬೇಕಾದ ಹೆಸರುಕಾಳು ಹಾಗೂ ಮೆಕ್ಕೆಜೋಳ ಬೀಜಗಳು ಸಮರ್ಪಕವಾಗಿ ಸಿಗಲಿದೆ. ರೈತರು ಪ್ರಸಕ್ತ ವರ್ಷದಲ್ಲಿ ಯೂರಿಯಾ ಗೊಬ್ಬರ ಬಳಕೆ ಕಡಿಮೆ ಮಾಡುವ ಜತೆಗೆ ಸಾವಯವ ಗೊಬ್ಬರ ಬಳಕೆ ಮಾಡಬೇಕು. ಇದು ಭೂಮಿಯ ಫಲವತ್ತತೆಯನ್ನು ರಕ್ಷಿಸಲಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ಬೆಳವಟಿಗಿ ಹೇಳಿದರು.
ತಾಲೂಕಿನಲ್ಲಿ ಸ್ವಲ್ಪಮಟ್ಟಿಗೆ ಮಳೆಯಾಗಿದೆ. ಬಿತ್ತಿದರೆ ಹುಟ್ಟುವ ಹಸಿ ಇಲ್ಲ. ಮಳೆ ಆಗಬಹುದೆಂಬ ನಂಬಿಗೆಯ ಮೇಲೆ ಹೆಸರು ಬೀಜ ಬಿತ್ತುತ್ತಿದ್ದೇವೆ. ಈ ದಿನ 10 ಎಕರೆ ಹೆಸರು ಬೀಜ ಬಿತ್ತಿದ್ದೇವೆ. ಮಳೆ ಆಗದೇ ಇದ್ದರೆ, ಬಿತ್ತಿದ ಬೀಜ ಭೂಮಿತಾಯಿ ಪಾಲಾಗುತ್ತದೆ ಎಂದು ರೈತ ನಜೀರಸಾಬ ಮಕ್ತುಮಸಾಬ ನಾಯ್ಕರ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.