ಕೊಳ್ಳೇಗಾಲದಲ್ಲಿ ಜಿಲ್ಲಾಧಿಕಾರಿ ಸಲಹೆ ನಂತರ ರೈತರ 14 ದಿನಗಳ ಧರಣಿ ಅಂತ್ಯ

KannadaprabhaNewsNetwork | Published : Sep 3, 2024 1:39 AM

ಸಾರಾಂಶ

ಕೊಳ್ಳೇಗಾಲದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ 14 ದಿನಗಳಿಂದ ಗುಂಡಾಲ್ ಜಲಾಶಯ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಮಿತಿಯ ಸದಸ್ಯರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಸೋಮವಾರ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಉಪವಿಭಾಗಾಧಿಕಾರಿ ಮಧ್ಯಪ್ರವೇಶಿಸಿದ ಹಿನ್ನೆಲೆ ಕೈಬಿಟ್ಟರು.

ಡಿಸಿ ಸೂಚನೆ ಹಿನ್ನೆಲೆ ಧರಣಿ ಕೈಬಿಟ್ಟ ರೈತ ಮುಖಂಡರು ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನಾಲೆ ಹೂಳುತೆಗೆಸಿ, ಅತಿಕ್ರಮ ತೆರವಿಗೆ ಕ್ರಮವಹಿಸಿ ಎಂಬಿತ್ಯಾದಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕಳೆದ 14 ದಿನಗಳಿಂದ ಗುಂಡಾಲ್ ಜಲಾಶಯ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಮಿತಿಯ ಸದಸ್ಯರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಸೋಮವಾರ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಉಪವಿಭಾಗಾಧಿಕಾರಿ ಮಧ್ಯಪ್ರವೇಶಿಸಿದ ಹಿನ್ನೆಲೆ ಕೈಬಿಟ್ಟರು. ಧರಣಿಯಲ್ಲಿ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಿಫಲವಾದ ಸರ್ಕಾರ, ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನಾಕಾರರು ಕಿಡಿಕಾರಿದರಲ್ಲದೆ, ಆಕ್ರೋಶ ವ್ಯಕ್ತಪಡಿಸಿದರು. ಕಬಿನಿ ಅಧಿಕಾರಿಗಳ ಬೇಜವಾಬ್ದಾರಿಗೆ ತರಾಟೆ ತೆಗೆದುಕೊಂಡು ಧರಣಿ ಕುಳಿತಿದ್ದರು. ಜಿಲ್ಲಾಧಿಕಾರಿ ಶಿಲ್ಪಾನಾಗ್, ಉಪವಿಭಾಗಾಧಿಕಾರಿ ಮಹೇಶ್ ಅವರು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿ ಸಮಸ್ಯೆಗಳನ್ನು ಹಂತ ಹಂತವಾಗಿ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆ ಸಮಿತಿ ಸದಸ್ಯರು ಧರಣಿ ಅಂತ್ಯಗೊಳಿಸಿ, ಉಪವಿಭಾಗಾಧಿಕಾರಿ ಮಹೇಶ್, ಕಬಿನಿ ಅಧಿಕಾರಿಗಳ ಸಮೇತ ಸ್ಥಳ ಪರಿಶೀಲನೆಗೆ ತೆರಳಿದರು.

ಇದೇ ವೇಳೆ ಹೂಳು ತುಂಬಿರುವ ಚಾನಲ್ ಹಾಗೂ ಇನ್ನಿತರ ಸ್ಥಳಗಳನ್ನು ಮಹೇಶ್ ವೀಕ್ಷಿಸಿದರು. ಇವರೊಂದಿಗೆ ರೈತ ಮುಖಂಡರಾದ ದಶರಥ್, ಅಣಗಳ್ಳಿ ಬಸವರಾಜು, ಕಾರ್ಯದರ್ಶಿ ರಾಮಕೃಷ್ಣ, ಮಲ್ಲರಾಜು, ವೀರಭದ್ರಸ್ವಾಮಿ, ಬಸವರಾಜು, ಮರಿಸ್ವಾಮಿ, ಅಶ್ವಥ್, ನರಸಿಂಹ, ಮಧುವನಹಳ್ಳಿ ಬಸವರಾಜು, ಜಿನಕನಹಳ್ಳಿ ನಟರಾಜು, ಮರಿಸಿದ್ದಯ್ಯ, ಮಲ್ಲು ಸೇರಿದಂತೆ ಇನ್ನಿತರರಿದ್ದರು.

ಉಪವಿಭಾಗಾಧಿಕಾರಿ ಮಹೇಶ್ ಮಾತನಾಡಿ, ಜಿಲ್ಲಾಧಿಕಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದು, ಆಗಬೇಕಾದ ಕಾಮಗಾರಿ ಹಾಗೂ ರೈತರ ಬೇಡಿಕೆಗಳನ್ನು ಪಟ್ಟಿ ಮಾಡಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಬಳಿಕ ವರದಿ ನೀಡಲು ಸೂಚಿಸಿದ್ದರು. ಈ ಹಿನ್ನೆಲೆ ಪರಿಶೀಲನೆ ನಡೆಸಲಾಗಿದ್ದು, ವರದಿ ಸಲ್ಲಿಸುವೆ ಎಂದು ಹೇಳಿದರು.

Share this article