ಗಣೇಶನ ಸ್ವಾಗತಕ್ಕೆ ಸಿದ್ಧವಾಗುತ್ತಿದೆ ಹುಬ್ಬಳ್ಳಿ-ಧಾರವಾಡ

KannadaprabhaNewsNetwork |  
Published : Sep 03, 2024, 01:39 AM IST
ಹುಬ್ಬಳ್ಳಿಯ ಮರಾಠಾಗಲ್ಲಿಯಲ್ಲಿ ಗಣೇಶ ಮೂರ್ತಿ ತಯಾರಿಕೆಯಲ್ಲಿ ನಿರತರಾಗಿರುವುದು. | Kannada Prabha

ಸಾರಾಂಶ

ವಾಣಿಜ್ಯ ನಗರಿ ಎಂದೇ ಪ್ರಖ್ಯಾತಿ ಹೊಂದಿರುವ ಹುಬ್ಬಳ್ಳಿಯಲ್ಲಿ ನೂರಾರು ವರ್ಷಗಳಿಂದ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಮಹಾನಗರದಲ್ಲಿ ಗಣೇಶ ಮೂರ್ತಿಗಳ ತಯಾರಿಕೆ, ಸಿದ್ಧತೆ, ಬಂದೋಬಸ್ತ್‌, ವಿಶೇಷ ಮೂರ್ತಿಗಳ ಪ್ರತಿಷ್ಠಾಪನೆ, ದರ್ಶನಕ್ಕೆ ಬರುವ ಭಕ್ತಸಾಗರದ ಕುರಿತು ಮಾಹಿತಿ ಇಲ್ಲಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಗಣೇಶ ಚತುರ್ಥಿ ಬಂತೆಂದರೆ ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗಾವಿ ಹೊರತುಪಡಿಸಿದರೆ ಮುನ್ನಲೆಗೆ ಬರುವ ಮಹಾನಗರವೇ ಹುಬ್ಬಳ್ಳಿ-ಧಾರವಾಡ. ಇಲ್ಲಿ ನೂರಾರು ವರ್ಷಗಳಿಂದ ವಿಶೇಷ, ವಿಶಿಷ್ಟವಾಗಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ನಗರದ ಹಲವು ಪ್ರದೇಶಗಳಲ್ಲಿ ಮಣ್ಣಿನಿಂದ ಸುಂದರ ಗಣಪತಿ ಮೂರ್ತಿಗಳನ್ನು ತಯಾರಿಸುವ ಕುಟುಂಬಗಳಿವೆ. ಇದೇ ವೃತ್ತಿಯನ್ನು ನೂರಾರು ವರ್ಷಗಳಿಂದ ಮುಂದುವರಿಸಿಕೊಂಡು ಹೋಗುತ್ತಿವೆ. ಅಲ್ಲದೇ ಇಲ್ಲಿ ತಯಾರಿಸಲಾಗುವ ಮೂರ್ತಿಗಳು ಹೊರಜಿಲ್ಲೆಗಳಲ್ಲದೇ ಬೇರೆ ರಾಜ್ಯಗಳಿಗೂ ಹೋಗುವುದುಂಟು. ಇನ್ನು ಕೆಲವು ಕಡೆಗಳಲ್ಲಿ ಕೋಲ್ಕತಾ, ಬಿಹಾರದಿಂದ ಮೂರ್ತಿ ತಯಾರಕರು ಹುಬ್ಬಳ್ಳಿಗೆ ಆಗಮಿಸಿ ಇಲ್ಲಿಯೇ ನೆಲೆಸಿ ಮೂರ್ತಿ ತಯಾರಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ.

ನಗರದ ಬಮ್ಮಾಪುರ ಓಣಿ, ಹಳೇಹುಬ್ಬಳ್ಳಿಯ ಅರವಿಂದ ನಗರ ಹಾಗೂ ಮರಾಠ ಗಲ್ಲಿ, ಚಿತ್ರಗಾರ ಓಣಿ, ಹೊಸೂರು ಕ್ರಾಸ್‌, ಶಿರಡಿ ನಗರ ಸೇರಿದಂತೆ ಹಲವು ಕಡೆಗಳಲ್ಲಿ 50ಕ್ಕೂ ಅಧಿಕ ಕುಟುಂಬಗಳು ಇಂದಿಗೂ ಮಣ್ಣಿನ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿವೆ. ಕಳೆದ 5-6 ತಿಂಗಳುಗಳಿಂದ ಇಡೀ ಕುಟುಂಬವೇ ಹಗಲು-ರಾತ್ರಿ ಮೂರ್ತಿ ತಯಾರಿಕೆಯಲ್ಲಿ ನಿರತವಾಗಿವೆ.

ಯುಗಾದಿಗೆ ಮಣ್ಣಿನ ಪೂಜೆ: ಗಣೇಶ ಚತುರ್ಥಿಯ 5-6 ತಿಂಗಳುಗಳ ಮೊದಲೇ ಮೂರ್ತಿ ತಯಾರಿಕೆಗೆ ಬೇಕಾದ ಮಣ್ಣಿನ ಸಂಗ್ರಹ ಮಾಡಿಕೊಳ್ಳಲಾಗುತ್ತದೆ. ಅಂಚಟಗೇರಿ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಮೂರ್ತಿ ತಯಾರಿಕೆಗೆ ಬೇಕಾದ ಮಣ್ಣನ್ನು ಸಂಗ್ರಹಿಸಿಕೊಳ್ಳಲಾಗುತ್ತದೆ. ಯುಗಾದಿಯ ದಿನದಂದು ಹದಗೊಳಿಸಲಾಗಿರುವ ಮಣ್ಣಿಗೆ ಮೂರ್ತಿ ತಯಾರಕರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೂರ್ತಿ ತಯಾರಿಕೆ ಆರಂಭಿಸುತ್ತಾರೆ.

ಯಾವೆಲ್ಲ ರೂಪದಲ್ಲಿವೆ?: ಹು-ಧಾ ಮಹಾನಗರದಲ್ಲಿ ಸುಮಾರು ಒಂದು ಅಡಿಯಿಂದ ಹಿಡಿದು 25 ಅಡಿಗಳ ವರೆಗೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇದರಲ್ಲಿ ಮನೆಗಳಲ್ಲಿ ಹೆಚ್ಚಾಗಿ ಪ್ರತಿಷ್ಠಾಪಿಸುತ್ತಿರುವ ಗಣಪತಿ ಎಂದರೆ ಮುದ್ದೆ ಗಣಪ. ಇದರೊಂದಿಗೆ ಸಿಂಹಾರೂಢ ಗಣೇಶ, ನವಿಲು ವಾಹನ ಗಣೇಶ, ನಂದಿ ವಾಹನ, ಪುಷ್ಪವಾಹನ, ಎಲೆ ವಾಹನ, ಚಂದ್ರನ ಮೇಲೆ ಆಸೀನನಾದ ವಿಘ್ನೇಶ್ವರ, ಚಂದನ ಲೇಪಿತ, ಸಾಯಿಬಾಬಾ ರೂಪಧಾರಿ ಗಣೇಶ, ಕೃಷ್ಣ, ಶ್ರೀರಾಮನ ರೂಪದಲ್ಲಿರುವ ಗಜಾನನ, ಶಿವ-ಪಾರ್ವತಿಯರೊಂದಿಗಿರುವ ಗಣಪ, ಇಡಗುಂಜಿ ಗಣೇಶ, ಬಾಲಗಣಪ... ಹೀಗೆ ಹಲವು ಬಗೆಗಳಲ್ಲಿ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ದರ ₹ 300ರಿಂದ ಲಕ್ಷದ ವರೆಗೂ ಬೆಲೆ ನಿಗದಿಗೊಳಿಸಲಾಗಿದೆ.ಕೋಲ್ಕತಾ, ಬಿಹಾರದಿಂದ ಬಂದ ಕಲಾವಿದರು: ಮೂರ್ತಿ ತಯಾರಕರಾದ ಅಪ್ಪು ಪಾಲ್‌ ತಂಡವು ಗಣೇಶ ಚತುರ್ಥಿಯ 6 ತಿಂಗಳುಗಳ ಮೊದಲೇ ಇಲ್ಲಿನ ಮರಾಠಾಗಲ್ಲಿಗೆ ಆಗಮಿಸಿ, ಮೂರ್ತಿ ತಯಾರಿಕೆ ಆರಂಭಿಸುತ್ತಾರೆ. ಅವರು ಮಣ್ಣಿನಿಂದ 3 ಅಡಿಗಳಿಂದ ಹಿಡಿದು 25 ಅಡಿಗಳ ವರೆಗೂ ಗಣೇಶ ಮೂರ್ತಿ ತಯಾರಿಸುತ್ತಾರೆ. ಅವರು ತಯಾರಿಸಿದ ಮೂರ್ತಿಗಳಿಗೆ ವಿಶೇಷ ಬೇಡಿಕೆ ಇದೆ. ಗೋವಾ, ಮಹಾರಾಷ್ಟ್ರದಿಂದ ಜನರು ಬರುತ್ತಾರೆ. ನಮ್ಮ ರಾಜ್ಯದ ಗದಗ, ಹಾವೇರಿ, ಬೆಂಗಳೂರು, ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಂದ ಜನ ಬಂದು ಖರೀದಿಸುತ್ತಾರೆ. ಬಿಹಾರದಿಂದ ಆಗಮಿಸಿದ ಮೂರ್ತಿ ತಯಾರಕರು ಮಹಾನಗರದ ಹಲವು ಕಡೆಗಳಲ್ಲಿ ಇದ್ದಾರೆ. ಅವರು ತಿಂಗಳುಗಳ ಕಾಲ ಇಲ್ಲಿಯೇ ಇದ್ದು ಮೂರ್ತಿ ತಯಾರಿಸಿ, ಮಾರಾಟ ಮಾಡುತ್ತಾರೆ.ಕಳೆದ 2-3 ವರ್ಷಗಳಿಂದ ಪಿಒಪಿ ಮೂರ್ತಿಗಳ ಬಳಕೆ ಕಡಿಮೆಯಾದಾಗಿನಿಂದ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಬಾರಿ 500ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ತಯಾರಿಸಿದ್ದೇನೆ. ಇದರಲ್ಲಿ 350 ಮೂರ್ತಿಗಳು ಮುಂಗಡವಾಗಿ ಬುಕ್‌ ಮಾಡಲಾಗಿದೆ ಎಂದು ಶಿರಡಿ ನಗರದಲ್ಲಿರುವ ಗಣೇಶ ಮೂರ್ತಿ ತಯಾರಕ ಮಹೇಶ ಸೋನಾವನೆ ಹೇಳುತ್ತಾರೆ.ಪಿಒಪಿ ಹಾವಳಿಯಿಂದಾಗಿ 2-3 ವರ್ಷಗಳ ಕಾಲ ಮೂರ್ತಿ ತಯಾರಿಸುವುದನ್ನೇ ನಿಲ್ಲಿಸಿದ್ದೆ. ಪಿಒಪಿ ಮೂರ್ತಿಗಳನ್ನು ಬಂದ್‌ ಮಾಡಿರುವುದರಿಂದ ಮತ್ತೆ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಬಂದಿದೆ. ಈ ಬಾರಿ ಮತ್ತೆ ಮೂರ್ತಿ ತಯಾರಿಸುತ್ತಿದ್ದೇನೆ ಎಂದು ಮೂರ್ತಿ ತಯಾರಕ ರಮೇಶ ಕೆ. ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು