ರೈತರ ಬೇಡಿಕೆಗೆ ಅನುಸಾರವಾಗಿ ಕೃಷಿ ಇಲಾಖೆಯು ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ಅಗತ್ಯ ಬೀಜಗಳ ದಾಸ್ತಾನು ಮಾಡಿಕೊಂಡಿದೆ
ಪಾಲಾಕ್ಷ ಬಿ.ತಿಪ್ಪಳ್ಳಿ ಯಲಬುರ್ಗಾ
ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದ್ದು, ರೈತರು ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಕೃಷಿ ಇಲಾಖೆ ೨೦೨೬-೨೭ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಒಟ್ಟು ೧,೨೨,೦೦೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. ಅವಳಿ ತಾಲೂಕುಗಳಲ್ಲಿ ಬಿತ್ತನೆಯಾಗುವ ಪ್ರಮುಖ ಬಿತ್ತನೆ ಬೀಜಗಳಾದ ಮೆಕ್ಕೆಜೋಳ-೪೮೦೦೦ ಹೆಕ್ಟೇರ್, ಸಜ್ಜೆ-೧೯೦೦೦, ತೊಗರಿ-೧೦೦೦೦, ಹೆಸರು-೩೦೦೦೦, ಸೂರ್ಯಕಾಂತಿ-೮೩೦೦, ಹತ್ತಿ-೨೭೦೦ ಹಾಗೂ ಇತರೆ ೪೦೦೦ ಸೇರಿ ಒಟ್ಟು ೧,೨೨,೦೦೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಲಿದೆ.
ರೈತರ ಬೇಡಿಕೆಗೆ ಅನುಸಾರವಾಗಿ ಕೃಷಿ ಇಲಾಖೆಯು ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ಅಗತ್ಯ ಬೀಜಗಳ ದಾಸ್ತಾನು ಮಾಡಿಕೊಂಡಿದೆ. ರೈತರಿಗೆ ಯಾವುದೇ ಬೀಜಗಳ ಕೊರತೆ ಆಗದಂತೆ ಕ್ರಮ ವಹಿಸಿದೆ.
ಅಗತ್ಯ ಬೀಜಗಳ ದಾಸ್ತಾನು: ಯಲಬುರ್ಗಾ, ಕುಕನೂರು, ಮಂಗಳೂರು ಹಾಗೂ ಹಿರೇವಂಕಲಕುಂಟಾ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದೆ.
ಯಲಬುರ್ಗಾ ಹಾಗೂ ಹಿರೇವಂಕಲಕುಂಟಾ ರೈತ ಸಂಪರ್ಕ ಕೇಂದ್ರಗಳಲ್ಲಿ ೮೦ ಕ್ವಿಂಟಲ್ ತೊಗರಿ, ೫೦ ಕ್ವಿಂಟಲ್ ಹೆಸರು, ಕುಕನೂರು-ಮಂಗಳೂರು ಆರ್‌ಎಸ್‌ಕೆಗಳಲ್ಲಿ ೭೦ ಕ್ವಿಂಟಲ್ ತೊಗರಿ, ೬೦ ಕ್ವಿಂಟಲ್ ಹೆಸರು ಬೀಜಗಳ ದಾಸ್ತಾನು ಮಾಡಲಾಗಿದೆ. ಅಲ್ಲದೆ ಸೂರ್ಯಕಾಂತಿ, ಸಜ್ಜೆ, ಮೆಕ್ಕೆಜೋಳ ಬಿತ್ತನೆ ಬೀಜಗಳ ದಾಸ್ತಾನು ಲಭ್ಯವಿದೆ. ಮಳೆಯ ಪ್ರಮಾಣ ಜಾಸ್ತಿ ಆದಂತೆಲ್ಲ ರೈತರ ಬೇಡಿಕೆಗೆ ಅನುಗುಣವಾಗಿ ಅಗತ್ಯ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗುವುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಎಳ್ಳು ಬಿತ್ತನೆಗೆ ಹಿನ್ನಡೆ:ಪ್ರತಿ ವರ್ಷ ತಾಲೂಕಿನ ಮಸಾರಿ ಭಾಗದಲ್ಲಿ ಮುಂಗಾರು ಪೂರ್ವದಲ್ಲಿ ಮಳೆಯಾದಾಗ ರೈತರು ಎಳ್ಳು ಬಿತ್ತನೆಗೆ ಅಣಿಯಾಗುತ್ತಿದ್ದರು. ಈ ಬಾರಿ ಸರಿಯಾದ ವೇಳೆಗೆ ಮುಂಗಾರು ಪೂರ್ವ ಮಳೆ ಹಿನ್ನಡೆಯಾದ ಕಾರಣ ಎಳ್ಳು ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಎಳ್ಳು ಬೆಳೆ ಕಟಾವುಗೊಂಡ ಬಳಿಕ ರೈತರು ಕೂಡಲೇ ಸಜ್ಜೆ ಬಿತ್ತನೆ ಮಾಡುತ್ತಿದ್ದರು.
ರೈತರು ವಿವಿಧ ಬೀಜಗಳ ಬಿತ್ತನೆ ಮಾಡುವಾಗ ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು. ಸುಣ್ಣದ ನೀರಿನಿಂದ ಬೀಜೋಪಚಾರ ಮಾಡುವುದರಿಂದ ಬರನಿರೋಧಕ ತಳಿಗಳ ವರ್ಧನೆ ಕಾಣಬಹುದು. ಬಿತ್ತನೆ ವೇಳೆ ಡಿಎಪಿ ಗೊಬ್ಬರದ ಮೇಲೆ ಹೆಚ್ಚು ಅವಲಂಬಿತರಾಗದೆ ಅತಿ ಹೆಚ್ಚು ಪೋಷಕಾಂಶ ಒಳಗೊಂಡಿರುವ ಇತರೆ ಸಂಯುಕ್ತ ರಸಗೊಬ್ಬರ ಬಳಕೆ ಮಾಡಬಹುದು. ರೈತ ಸಂಪರ್ಕ ಕೇಂದ್ರಗಳಲ್ಲಿ ಎಲ್ಲ ಅಗತ್ಯ ಬೀಜಗಳ ದಾಸ್ತಾನು ಮಾಡಲಾಗಿದ್ದು, ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ವಿತರಿಸಲಾಗುವುದು ಎಂದು ಯಲಬುರ್ಗಾ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ತಿಳಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.