ಭತ್ತದ ಕೂರಿಗೆ ಬಿತ್ತನೆಗೆ ಗಣಿ ಜಿಲ್ಲೆ ರೈತರ ಒಲವು

KannadaprabhaNewsNetwork |  
Published : Sep 09, 2026, 02:15 AM IST
ಬಳ್ಳಾರಿ ತಾಲೂಕಿನ ಬೊಬ್ಬಕುಂಟ ಗ್ರಾಮದ ಹೊರ ವಲಯದಲ್ಲಿ ಭತ್ತದ ಕೂರಿಗೆ ಬಿತ್ತನೆ ಮಾಡಿರುವುದು ಕಂಡು ಬಂತು.  | Kannada Prabha

ಸಾರಾಂಶ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಭತ್ತದ ಕೂರಿಗೆ ಬಿತ್ತನೆ ಪ್ರದೇಶದಲ್ಲಿ ಗಣನೀಯ ಏರಿಕೆಯಾಗಿದೆ

ಮಂಜುನಾಥ ಕೆ.ಎಂ. ಬಳ್ಳಾರಿ

ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯ ಭತ್ತ ಬೆಳೆಗಾರರು ಕೂರಿಗೆ ಬಿತ್ತನೆಗೆ ಮೊರೆ ಹೋಗಿದ್ದಾರೆ.

ಮಳೆಯ ಅಭಾವದಿಂದ ಮುಂಗಾರು ಹಂಗಾಮಿನ ಹಲವು ಬೆಳೆ ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ ಲಭ್ಯವಿರುವ ಅಲ್ಪ ತೇವಾಂಶ ಬಳಸಿಕೊಂಡು ಭತ್ತ ಬೆಳೆಯಲು ರೈತರು ಕೂರಿಗೆ ಬಿತ್ತನೆ ಪದ್ಧತಿಯತ್ತ ಮುಖ ಮಾಡಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಭತ್ತದ ಕೂರಿಗೆ ಬಿತ್ತನೆ ಪ್ರದೇಶದಲ್ಲಿ ಗಣನೀಯ ಏರಿಕೆಯಾಗಿದೆ. 2025ರ ಮುಂಗಾರು ಹಂಗಾಮಿನಲ್ಲಿ 2,458 ಹೆಕ್ಟೇರ್ ಪ್ರದೇಶದಲ್ಲಿ ಕೂರಿಗೆ ಬಿತ್ತನೆ ಮಾಡಲಾಗಿತ್ತು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 4,526 ಹೆಕ್ಟೇರ್ ಪ್ರದೇಶದಲ್ಲಿ ಕೂರಿಗೆ ಬಿತ್ತನೆಯಾಗಿದ್ದು, ಕಳೆದ ವರ್ಷಕ್ಕಿಂತ ಸುಮಾರು 2,068 ಹೆಕ್ಟೇರ್ ಹೆಚ್ಚಳವಾಗಿದೆ. ಅಂದರೆ, ಕೂರಿಗೆ ಬಿತ್ತನೆ ಪ್ರಮಾಣ ಸುಮಾರು ದುಪ್ಪಟ್ಟಾಗಿದೆ. ಹೆಚ್ಚಿನ ನೀರಾವರಿ ಪ್ರದೇಶ ಹೊಂದಿರುವ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ ಹಾಗೂ ಕುರುಗೋಡು ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಕಂಡು ಬಂದಿದೆ.

ಪರ್ಯಾಯ ದಾರಿ:

ಮುಂಗಾರು ಆರಂಭದಲ್ಲಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಬಾರಿ ವರುಣನ ಅವಕೃಪೆ ನಿರಾಸೆ ಮೂಡಿಸಿದೆ. ಹಲವು ಭಾಗಗಳಲ್ಲಿ ವಾಡಿಕೆಯಷ್ಟು ಮಳೆಯಾಗದ ಕಾರಣ ಮಳೆಯಾಶ್ರಿತ ಪ್ರದೇಶಗಳ ಬೆಳೆಗಳು ತೇವಾಂಶದ ಕೊರತೆ ಎದುರಿಸುತ್ತಿವೆ.

ಬಿತ್ತನೆ ಮಾಡಿದ ಬಳಿಕ ಸಮರ್ಪಕ ಮಳೆ ಬಾರದಿರುವುದು ಬೆಳೆಗಳ ಬೆಳವಣಿಗೆ ಮೇಲೂ ಪರಿಣಾಮ ಬೀರಿದೆ. ಇಂತಹ ಸಂದರ್ಭದಲ್ಲಿ ಕೈಯಲ್ಲಿರುವ ಅಲ್ಪ ಪ್ರಮಾಣದ ನೀರು ಮತ್ತು ಮಣ್ಣಿನಲ್ಲಿರುವ ತೇವಾಂಶ ಸಮರ್ಪಕವಾಗಿ ಬಳಸಿಕೊಳ್ಳುವುದು ರೈತರ ಮುಂದಿರುವ ಅನಿವಾರ್ಯತೆಯಾಗಿದೆ. ಹೀಗಾಗಿ ಮಳೆಯಾಶ್ರಿತ ಜಮೀನುಗಳ ಜತೆಗೆ ಬೋರ್‌ವೆಲ್ ಸೌಲಭ್ಯ ಹೊಂದಿರುವ ರೈತರೂ ಭತ್ತದ ಕೂರಿಗೆ ಬಿತ್ತನೆಯ ಪದ್ಧತಿಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ.

ತೇವಾಂಶದಲ್ಲೇ ಬಿತ್ತನೆ:

ಸಹಜವಾಗಿ ಭತ್ತ ಬೆಳೆಗಾರರು ಭತ್ತದ ಸಸಿಗಳನ್ನು ಬೆಳೆಸಿ ಬಳಿಕ ಸಸಿಗಳನ್ನು ನೆಡುತ್ತಿದ್ದರು. ಆದರೆ, ಈ ಬಾರಿ ಮಳೆಯ ಅಭಾವದಿಂದ ಎಲ್ಲೂ ಭತ್ತದ ಸಸಿಗಳಿಗಾಗುವಷ್ಟು ನೀರಿನ ಲಭ್ಯತೆ ಇರದ ಕಾರಣ ಕೂರಿಗೆ ಬಿತ್ತನೆಗೆ ಮುಂದಾಗಿದ್ದಾರೆ. ಕೂರಿಗೆ ಬಿತ್ತನೆ ಪದ್ಧತಿಯಲ್ಲಿ ಮಣ್ಣಿನಲ್ಲಿರುವ ತೇವಾಂಶ ಬಳಸಿಕೊಂಡು ಬಿತ್ತನೆ ಮಾಡಬಹುದಾಗಿದ್ದು ಬೆಳೆಗಳು ಸಹ ಸಮೃದ್ಧವಾಗಿ ಬೆಳೆಯುತ್ತಿದ್ದು ರೈತರಲ್ಲಿ ನೆಮ್ಮದಿ ಮೂಡಿಸಿದೆ. ಕೃಷಿ ಇಲಾಖೆಯ ಪ್ರಕಾರ ಕೂರಿಗೆ ಬಿತ್ತನೆ ಮೂಲಕ ಸಾಂಪ್ರದಾಯಿಕ ಬಿತ್ತನೆಗೆ ಹೋಲಿಸಿದರೆ ಸುಮಾರು ಶೇ. 65ರಷ್ಟು ನೀರನ್ನು ಉಳಿಸಬಹುದಾಗಿದೆ. ನೀರಿನ ಲಭ್ಯತೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಈ ಉಳಿತಾಯ ರೈತರ ಪಾಲಿಗೆ ಮಹತ್ವದ್ದಾಗಿದೆ.

ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಬೋರ್‌ವೆಲ್‌ಗಳ ಮೇಲಿನ ಅವಲಂಬನೆಯೂ ಹೆಚ್ಚಾಗಿದೆ. ಆದರೆ ನಿರಂತರವಾಗಿ ನೀರು ಬಳಕೆ ಮಾಡಿದರೆ ಬೋರ್‌ವೆಲ್‌ಗಳಲ್ಲಿನ ನೀರಿನ ಪ್ರಮಾಣವೂ ಕಡಿಮೆಯಾಗುವ ಆತಂಕ ರೈತರಲ್ಲಿದೆ. ಹೀಗಾಗಿ ಕಡಿಮೆ ನೀರಿನಲ್ಲಿ ಬಿತ್ತನೆ ಹಾಗೂ ಬೆಳೆ ನಿರ್ವಹಣೆ ಸಾಧ್ಯವಾಗುವ ಪದ್ಧತಿಗಳತ್ತ ರೈತರು ಗಮನ ಹರಿಸುತ್ತಿದ್ದಾರೆ. ಕೂರಿಗೆ ಬಿತ್ತನೆ ನೀರಿನ ಬಳಕೆ ಕಡಿಮೆ ಮಾಡುವುದರ ಜತೆಗೆ ಲಭ್ಯವಿರುವ ತೇವಾಂಶ ಸಮರ್ಪಕವಾಗಿ ಬಳಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ರೈತರು ಹೇಳುತ್ತಾರೆ. ಮಳೆ ಆಧಾರಿತ ಕೃಷಿ ಅವಲಂಬಿಸಿರುವ ರೈತರಿಗೆ ಮುಂಗಾರು ಮಳೆ ನಿರ್ಣಾಯಕ. ಆದರೆ ಮಳೆ ಪ್ರಮಾಣದಲ್ಲಿ ವ್ಯತ್ಯಯ ಉಂಟಾದಾಗ ಬಿತ್ತನೆ ಮಾಡಿದ ಬೆಳೆ ಉಳಿಸಿಕೊಳ್ಳುವುದೇ ಸವಾಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಡಿಮೆ ನೀರಿನ ಬಳಕೆಯ ಕೃಷಿ ಪದ್ಧತಿಗಳು ರೈತರ ಆಸರೆಯಾಗುತ್ತಿವೆ. ಜಿಲ್ಲೆಯಲ್ಲಿ ಕಳೆದ ವರ್ಷ 2,458 ಹೆಕ್ಟೇರ್‌ನಷ್ಟಿದ್ದ ಕೂರಿಗೆ ಬಿತ್ತನೆ ಪ್ರಸಕ್ತ ವರ್ಷ 4,526 ಹೆಕ್ಟೇರ್‌ಗೆ ವಿಸ್ತರಿಸಿರುವುದು, ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ರೈತರು ಹೊಸ ಪದ್ಧತಿ ಅಳವಡಿಸಿಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಮಳೆಯ ಅಭಾವದಿಂದ ಈ ಬಾರಿ ಭತ್ತ ಬೆಳೆಯುವ ರೈತರು ಅನಿವಾರ್ಯವಾಗಿ ಕೂರಿಗೆ ಬಿತ್ತನೆಗೆ ಮುಂದಾಗಿದ್ದಾರೆ. ಸಂಡೂರು ಹೊರತುಪಡಿಸಿದರೆ ಜಿಲ್ಲೆಯ ಎಲ್ಲ ಭಾಗಗಳಲ್ಲಿ ಭತ್ತದ ಕೂರಿಗೆ ಬಿತ್ತನೆ ಕಂಡು ಬಂದಿದೆ ಎಂದು ಬಳ್ಳಾರಿ ತುಂಗಭದ್ರಾ ರೈತ ಸಂಘ ಅಧ್ಯಕ್ಷ ಪುರುಷೋತ್ತಮಗೌಡ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಸತಿ ಶಾಲೆಯಲ್ಲಿ ಆರೋಗ್ಯ ಇಲಾಖೆ ತಂಡದಿಂದ ವಿದ್ಯಾರ್ಥಿಗಳ ತಪಾಸಣೆ
ಹಲವು ಸವಾಲುಗಳನ್ನೆದುರಿಸಿ ಶಿಕ್ಷಕರು ವೃತ್ತಿ ಗೌರವ ಕಾಪಾಡಿಕೊಳ್ಳಬೇಕಾಗಿದೆ