ಶಿವಮೊಗ್ಗ ಆಲಿಕಲ್ಲು ಮಳೆಗೆ ಬೆಳೆಗಾರರ ತತ್ತರ

KannadaprabhaNewsNetwork |  
Published : Mar 31, 2026, 01:45 AM IST
ಪೊಟೋ: 30ಎಸ್‌ಎಂಜಿಕೆಪಿ07ಶಿವಮೊಗ್ಗದಲ್ಲಿ ಸುರಿದ ಆಲಿಕಲ್ಲು ಮಳೆಗೆ ಹಾಳಾಗಿರುವ ಬಾಳೆ ತೋಟ. | Kannada Prabha

ಸಾರಾಂಶ

ಮುಂಗಾರು ಪೂರ್ವ ಸುರಿಯುತ್ತಿರುವ ಅಕಾಲಿಕ ಮಳೆಯ ಪರಿಣಾಮ ಜಿಲ್ಲೆಯಲ್ಲಿ ಅಡಕೆ, ಮಾವು, ಕಲ್ಲಂಗಡಿ ಹಾಗೂ ಬಾಳೆ ಬೆಳೆಗಳಿಗೆ ವಿಪರೀತ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮುಂಗಾರು ಪೂರ್ವ ಸುರಿಯುತ್ತಿರುವ ಅಕಾಲಿಕ ಮಳೆಯ ಪರಿಣಾಮ ಜಿಲ್ಲೆಯಲ್ಲಿ ಅಡಕೆ, ಮಾವು, ಕಲ್ಲಂಗಡಿ ಹಾಗೂ ಬಾಳೆ ಬೆಳೆಗಳಿಗೆ ವಿಪರೀತ ಹಾನಿಯಾಗಿದೆ.

ಮಲೆನಾಡಿನಲ್ಲಿ ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಧಾರಕಾರವಾಗಿ ಮಳೆ ಸುರಿಯುತ್ತದೆ. ಆದರೆ ಈ ಬಾರಿ ಮಾರ್ಚ್ ತಿಂಗಳಲ್ಲೆ ಮಳೆಯ ಆರ್ಭಟ ಮುಂದುವರಿದಿದೆ. ಅಲ್ಲದೇ ಹವಾಮಾನ ಇಲಾಖೆ ಕೂಡ ಏಪ್ರಿಲ್ 5ರವರೆಗೆ ಮಳೆ ಸುರಿಯುವ ಮುನ್ಸೂಚನೆ ನೀಡಿದೆ. ಮಾ.18ರಿಂದ ಮಾ.28ರವರೆಗೆ ಶಿವಮೊಗ್ಗದಲ್ಲಿ ಹವಾಮಾನ ಇಲಾಖೆಯ ಮಾಹಿತಿ ಅನ್ವಯ ಒಟ್ಟು 5.6 ಸೆಂ.ಮೀ ವರ್ಷಧಾರೆಯಾಗಿದೆ. ವರುಣಾರ್ಭಟದ ಜೊತೆಗೆ ಆಲಿಕಲ್ಲು ಮಳೆಯು ಬೆಳೆಗಳಿಗೆ ತೀವ್ರ ಹಾನಿಯನ್ನುಂಟು ಮಾಡಿದೆ.

ಈ ಬಾರಿ ಮಾವು ಭರ್ಜರಿ ಫಲ ಬಿಟ್ಟಿದ್ದು, ಬೆಳೆಗಾರರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ, ಆಲಿಕಲ್ಲಿನ ಹೊಡೆತಕ್ಕೆ ಹೀಚು ಕಾಯಿಗಳು ನೆಲಕಚ್ಚಿವೆ. ಜತೆಗೆ ಕಾಯಿಯ ಮೇಲೆ ಕಪ್ಪು ಕಲೆ ಮೂಡುತ್ತಿದೆ. ಕೆಲವು ಕೆಟ್ಟು ಹೋಗಿ ನೆಲಕ್ಕೆ ಬೀಳುತ್ತಿವೆ. ಅಲ್ಲದೇ ಗಾಳಿಯ ರಭಸಕ್ಕೆ ಕೆಲವು ಕಡೆ ಮರಗಳು ಧರೆಗೆ ಉರುಳಿವೆ.

ಪ್ರಾಥಮಿಕ ಮಾಹಿತಿ ಅನ್ವಯ ಜಿಲ್ಲೆಯಲ್ಲಿ ಆಲಿಕಲ್ಲು ಮಳೆಗೆ 21.7 ಹೆಕ್ಟೇರ್‌ನಷ್ಟು ತೋಟಗಾರಿಕೆ ಬೆಳೆ ಹಾನಿಗೀಡಾಗಿದೆ. 57 ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಅದರಲ್ಲಿ ಶಿವಮೊಗ್ಗ ತಾಲೂಕಿನಲ್ಲಿಯೇ ೪೮ ಬೆಳೆಗಾರರಿಗೆ ಸೇರಿದ 20 ಹೆಕ್ಟೇರ್‌ನಷ್ಟು ಅಡಕೆ, ಬಾಳೆ, ಕಲ್ಲಂಗಡಿ ನಾಶವಾಗಿದೆ.

ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಸುತ್ತಮುತ್ತ ಮಾರ್ಚ್ 18 ರಂದು ಸಂಜೆ ಸುರಿದ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ಸಾವಿರಾರು ಅಡಕೆ, ತೆಂಗಿನ ಮರಗಳು ನೆಲಕಚ್ಚಿವೆ. ರೈತ ಜಗದೀಶ್ ಅವರ ತೋಟದಲ್ಲಿ 60 ಕ್ಕೂ ಹೆಚ್ಚು ಅಡಕೆ ಮರಗಳು, 10ಕ್ಕೂ ಹೆಚ್ಚು ತೆಂಗಿನ ಮರಗಳು, ನೀಲಕಂಠ ಅವರ ತೋಟದಲ್ಲಿ 50ಕ್ಕೂ ಹೆಚ್ಚು ಮರಗಳು ಬಿದ್ದಿವೆ.

ಶಿವಮೊಗ್ಗ ತಾಲೂಕಿನ ಅನುಪಿನಕಟ್ಟೆ ಗ್ರಾಮದಲ್ಲಿ ಕಲ್ಲಂಗಡಿ ಬೆಳೆ ಆಲಿಕಲ್ಲು ಮಳೆಗೆ ನಾಶವಾಗಿದೆ. ಅನುಪಿನಕಟ್ಟೆ ಗ್ರಾಮದ ರಾಮಣ್ಣ ಎಂಬುವರು ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಲ್ಲಂಗಡಿ ಸಂಪೂರ್ಣ ನಾಶವಾಗಿದೆ. ಮೂರು ಲಕ್ಷ ರೂ. ಖರ್ಚು ಮಾಡಿ ಬೆಳೆದಿದ್ದರು.ಆಲಿಕಲ್ಲು ಹೊಡೆತಕ್ಕೆ ಕಲ್ಲಂಗಡಿ ಸಂಪೂರ್ಣ ಮಣ್ಣುಪಾಲಾಗಿದೆ.

ಅಲ್ಲದೇ ಹನುಮಂತಾಪುರ ಗ್ರಾಮದ ವನಗದ್ದೆ ರಾಮಪ್ಪ ಎಂಬುವವರು ಮೂರು ಎಕರೆ ಜಾಗದಲ್ಲಿ ಬೆಳೆದಿದ್ದ ಬಾಳೆ ತೋಟ ಗಾಳಿ ರಭಸಕ್ಕೆ ನೆಲೆ ಕಚ್ಚಿದೆ.ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬಾಳೆ ಕೃಷಿ ಮಾಡಿದ್ದರು.-ಸಲಿಗೆ ಬಂದಿದ್ದ ಬಾಳೆ ಗಾಳಿ ಮತ್ತು ಆಲಿಕಲ್ಲು ಮಳೆಗೆ ಸಂಪೂರ್ಣ ನಾಶವಾಗಿದೆ.

ಡಾ.ಹರ್ಷ ಅವರಿಗೆ ಸೇರಿದ ತೋಟದಲ್ಲಿ 400ಕ್ಕೂ ಅಧಿಕ ಮರಗಳು ಸಂಪೂರ್ಣ ನೆಲಕಚ್ಚಿವೆ. ದೇವರಾಜ್ ಅವರ ಫಾರಂನಲ್ಲಿ 10 ಮರಗಳು ಬಿದ್ದಿವೆ. ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮೀಪುರ, ಹೊಸಕೊಪ್ಪ, ತಟ್ಟೆಕೆರೆ, ಇಂದಿರಾನಗರ, ಮುಳ್ಕೆರೆ, ವೀರಾಪುರ ಗ್ರಾಮಗಳಲ್ಲಿ 2000 ಕ್ಕೂ ಹೆಚ್ಚು ಅಡಕೆ ಮರಗಳು ಬಿದ್ದು ಭಾರೀ ಹಾನಿಯಾಗಿದೆ. ಶಿಕಾರಿಪುರ ಹಾಗೂ ಸಾಗರ ತಾಲೂ ಕುಗಳಲ್ಲೂ ಬೆಳೆ ನಷ್ಟ ವರದಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನರಾಯಪಟ್ಟಣದಲ್ಲಿ ಬೇಸಿಗೆ ಶಿಬಿರಕ್ಕೆ ಚಾಲನೆ
ಸಬ್ಬಮ್ಮ ದೇವಿ ದರ್ಶನಕ್ಕೆ ಸದಾನಂದ ಗೌಡರ ಕುಟುಂಬ