ಸೋಯಾಬಿನ್‌ ಬೀಜಕ್ಕಾಗಿ ರಾತ್ರಿಯಿಡಿ ರೈತರ ಜಾಗರಣೆ!

KannadaprabhaNewsNetwork |  
Published : May 31, 2026, 02:15 AM IST
ಹುಬ್ಬಳ್ಳಿ ತಾಲೂಕಿನ ನೂಲ್ವಿಯಲ್ಲಿರುವ ಮಾರಾಟ ಕೇಂದ್ರದ ಎದುರು ಬಿತ್ತನೆ ಬೀಜ ಖರೀದಿಗಾಗಿ ಸರದಿಯಲ್ಲಿ ನಿಂತ ರೈತರು. | Kannada Prabha

ಸಾರಾಂಶ

ಕಳೆದ ಬಾರಿ ಹೆಚ್ಚಿನ ಇಳುವರಿ ಬಂದಿದ್ದ ಕೆಡಿಎಸ್‌-726 ತಳಿಯ ಸೋಯಾಬಿನ್‌ ಬಿತ್ತನೆ ಬೀಜ ಖರೀದಿಗೆ ಮಾತ್ರ ರೈತರು ಮುಗಿಬಿದ್ದಾರೆ. ಹೀಗಾಗಿ ಮಾರಾಟ ಕೇಂದ್ರದ ಎದುರು ಶುಕ್ರವಾರ ರಾತ್ರಿಯಿಡಿ ಸರತಿಯಲ್ಲಿ ನಿಂತುಕೊಂಡಿದ್ದಾರೆ.

ಹುಬ್ಬಳ್ಳಿ:

ಕೆಡಿಎಸ್‌-726 ತಳಿಯ ಸೋಯಾಬಿನ್‌ ಬಿತ್ತನೆ ಬೀಜಕ್ಕೆ ರಾತ್ರಿಯಿಡಿ ನೂರಾರು ರೈತರು ಸರದಿಯಲ್ಲಿ ನಿಂತು ಶನಿವಾರ ಬಿತ್ತನೆ ಬೀಜ ತೆಗೆದುಕೊಂಡ ಹೋದ ಘಟನೆ ತಾಲೂಕಿನ ನೂಲ್ವಿ ಹಾಗೂ ಛಬ್ಬಿಯ ಬೀಜ ಮಾರಾಟ ಕೇಂದ್ರದಲ್ಲಿ ನಡೆದಿದೆ.

ಕಳೆದ ಬಾರಿ ಹೆಚ್ಚಿನ ಇಳುವರಿ ಬಂದಿದ್ದ ಕೆಡಿಎಸ್‌-726 ತಳಿಯ ಸೋಯಾಬಿನ್‌ ಬಿತ್ತನೆ ಬೀಜ ಖರೀದಿಗೆ ಮಾತ್ರ ರೈತರು ಮುಗಿಬಿದ್ದಾರೆ. ಹೀಗಾಗಿ ಮಾರಾಟ ಕೇಂದ್ರದ ಎದುರು ಶುಕ್ರವಾರ ರಾತ್ರಿಯಿಡಿ ಸರತಿಯಲ್ಲಿ ನಿಂತುಕೊಂಡಿದ್ದಾರೆ.

ನೂಲ್ವಿ ವ್ಯಾಪ್ತಿಯಲ್ಲಿ ಅಂಚಟಗೇರಿ, ಗಿರಿಯಾಲ, ಮಾವನೂರ, ಕಟ್ನೂರ, ಕರಡಿಕೊಪ್ಪ ಸೇರಿದಂತೆ 28 ಹಳ್ಳಿ ಬರುತ್ತವೆ. ಈ ಎಲ್ಲ ಗ್ರಾಮಗಳ ರೈತರು ಬಿತ್ತನೆ ಬೀಜ ಖರೀದಿಗಾಗಿ ನೂಲ್ವಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿರುವ ಬಿತ್ತನೆ ಬೀಜ ಮಾರಾಟ ಕೇಂದ್ರಕ್ಕೆ ಆಗಮಿಸಿದ್ದರು.

ವಾರದಿಂದ ಸಮಸ್ಯೆ:

ಕೆಲ ದಿನಗಳ ಹಿಂದೇ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ರೈತರು ಬಿತ್ತನೆಗೆ ಭೂಮಿಯನ್ನು ಹದಗೊಳಿಸಿ ಬೀಜ, ರಸಗೊಬ್ಬರ ಖರೀದಿಸುತ್ತಿದ್ದಾರೆ. ಆದರೆ, ಬಿತ್ತನೆ ಬೀಜದ ಅಭಾವದಿಂದ ರೈತರು ಆತಂಕಗೊಂಡು ಹೀಗೆ ರಾತ್ರಿಯಿಡಿ ಸರದಿಯಲ್ಲಿ ನಿಂತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನೂಲ್ವಿ ಖರೀದಿ ಕೇಂದ್ರ ಒಂದರಲ್ಲಿಯೇ ಕಳೆದೊಂದು ವಾರದಿಂದ 25 ಕೆಜಿ ತೂಕದ 1000ಕ್ಕೂ ಅಧಿಕ ಸೋಯಾಬಿನ್‌ ಪ್ಯಾಕೆಟ್‌ ಮಾರಾಟ ಮಾಡಲಾಗಿದೆ.

ಮಧ್ಯಾಹ್ನವೇ ಖಾಲಿ:

ಶುಕ್ರವಾರ ಸಂಜೆ ಕೆಡಿಎಸ್‌-726 ತಳಿಯ 200 ಪ್ಯಾಕೆಟ್‌ ಸೋಯಾಬಿನ್‌ ಕೇಂದ್ರಕ್ಕೆ ಬಂದಿತ್ತು. ಇದನ್ನು ಗಮನಿಸಿದ ರೈತರು ಶುಕ್ರವಾರ ರಾತ್ರಿಯೇ ಮಾರಾಟ ಕೇಂದ್ರದ ಹೊರಗೆ ಮಲಗಿ ಬೆಳಗ್ಗೆ ಸರದಿ ಹಚ್ಚಿ ಬೀಜ ಖರೀದಿಸಿದರು. ಮಧ್ಯಾಹ್ನ 12 ಗಂಟೆಗೆ ಸೋಯಾಬಿನ್‌ ಪ್ಯಾಕೆಟ್‌ ಖಾಲಿಯಾದವು. ಬಿತ್ತನೆಗೆ ಬೀಜ ದೊರೆಯಲಿದೆ ಎಂಬ ಆಸೆಯಿಂದ ರಾತ್ರಿಯಿಡಿ ಸರದಿಯಲ್ಲಿ ನಿಂತಿದ್ದ ನೂರಾರು ರೈತರು ಬಿತ್ತನೆ ಬೀಜ ಸಿಗದೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದುಡ್ಡು ಕೊಟ್ಟರೂ ಸಿಗುತ್ತಿಲ್ಲ:

ಸರ್ಕಾರ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯಗೊಳಿಸಿದೆ. ಅದರಂತೆ ನಾವು ದುಡ್ಡು ಕೊಟ್ಟು ಖರೀದಿಸಲು ಹೋದರೂ ಬಿತ್ತನೆ ಬೀಜ ಸಿಗುತ್ತಿಲ್ಲ. ಬಿತ್ತನೆಗೆ ಹೊಲವನ್ನು ಸಿದ್ಧಗೊಳಿಸಿದ್ದೇವೆ. ಇದೀಗ ಮಳೆಯಾದರೆ ಬಿತ್ತನೆ ಶುರು ಮಾಡಬೇಕು. ಆದರೆ, ಸಮರ್ಪಕ ಬಿತ್ತನೆ ಬೀಜ ವಿತರಿಸುವಲ್ಲಿ ಸರ್ಕಾರ ಎಡವಿದ್ದು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು. ಅತ್ಯುತ್ತಮ ಇಳುವರಿ ಬಂದಿದ್ದ ಕೆಡಿಎಸ್‌-726

ಕಳೆದ ವರ್ಷ ಅಭಿವೃದ್ಧಿ ಪಡಿಸಿರುವ ಕೆಡಿಎಸ್‌-726 ತಳಿಯ ಸೋಯಾಬಿನ್‌ ಬೀಜ ಕಳೆದ ಬಾರಿ ಅತ್ಯುತ್ತಮ ಇಳುವರಿ ಬಂದಿದೆ. ಹೀಗಾಗಿ ಈ ಬಾರಿ ಈ ಬೀಜ ಖರೀದಿಗೆ ಮುಗಿಬಿದ್ದಿದ್ದಾರೆ. 25 ಕೆಜಿ ತೂಕದ ಒಂದು ಪ್ಯಾಕೆಟ್‌ಗೆ ₹1675 ನಿಗದಿಪಡಿಸಲಾಗಿದೆ. ಇನ್ನುಳಿದಂತೆ 30 ಕೆಜಿ ಪ್ಯಾಕೆಟ್‌ನ ಗೌರಿಶಂಕರ ಸೇರಿದಂತೆ ಇನ್ನಿತರೆ ತಳಿಯ ಸೋಯಾಬಿನ್‌ ಬೀಜ ಮಾರಾಟ ಕೇಂದ್ರದಲ್ಲಿ ಲಭ್ಯವಿದ್ದರೂ ರೈತರು ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಕೇವಲ ಕೆಡಿಎಸ್‌-726 ತಳಿಯ ಪ್ಯಾಕೆಟ್‌ ಮಾತ್ರ ಕೇಳುತ್ತಿರುವುದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಹೆಚ್ಚಿನ ಪ್ರಮಾಣದ ಬೇಡಿಕೆ ಹಿನ್ನೆಲೆ ಪೂರೈಕೆಯಲ್ಲಿ ಅಲ್ಪ ಪ್ರಮಾಣದ ವಿಳಂಬವಾಗುತ್ತಿದೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಮಾತು.

ಉತ್ತಮ ಮಳೆಯಾಗಿದ್ದು ಹೊಲ ಹದಗೊಳಿಸಿ ಬಿತ್ತನೆಗೆ ಸಿದ್ಧಗೊಳಿಸಲಾಗಿದೆ. ಒಂದು ವಾರದಿಂದ ಮಾರಾಟ ಕೇಂದ್ರಕ್ಕೆ ಸೋಯಾಬಿನ್‌ ಬಿತ್ತನೆ ಬೀಜ ಖರೀದಿಗೆ ಆಗಮಿಸುತ್ತಿದ್ದೇನೆ. ಬೀಜ ಸಿಗುತ್ತಿಲ್ಲ.

ಮಾರ್ತಾಂಡಪ್ಪ ಹಲಗೂರ, ನೂಲ್ವಿ ಬೀಜ ಮಾರಾಟ ಕೇಂದ್ರಕ್ಕೆ ಆಗಮಿಸಿದ್ದ ರೈತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಳ್ಳತನ ಕೇಸು ಬೇಧಿಸಿದ ಜಿಲ್ಲಾ ಪೊಲೀಸರು; ₹2.62 ಕೋಟಿ ಮೌಲ್ಯದ ಸ್ವತ್ತು ಮಾಲೀಕರಿಗೆ ಹಸ್ತಾಂತರ
ಗೋವುಗಳ ಹತ್ಯೆ; ಹಿಂದೂ, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ