ಮೆಕ್ಕೆಜೋಳಕ್ಕೆ 3 ಸಾವಿರ ರು. ದರ ನಿಗದಿ ಹಾಗೂ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಲ್ಲಿಯ ಜಿಲ್ಲಾಡಳಿತ ಭವನದ ಎದುರು ರೈತರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಭಾನುವಾರಕ್ಕೆ ಏಳು ದಿನ ಪೂರೈಸಿತು. ಆದರೂ ಸರ್ಕಾರದಿಂದ ಸ್ಪಂದನೆ ಸಿಗದ್ದರಿಂದ ಆಕ್ರೋಶಗೊಂಡಿರುವ ರೈತರು, ಇನ್ನು ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹಾವೇರಿ: ಮೆಕ್ಕೆಜೋಳಕ್ಕೆ 3 ಸಾವಿರ ರು. ದರ ನಿಗದಿ ಹಾಗೂ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಲ್ಲಿಯ ಜಿಲ್ಲಾಡಳಿತ ಭವನದ ಎದುರು ರೈತರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಭಾನುವಾರಕ್ಕೆ ಏಳು ದಿನ ಪೂರೈಸಿತು. ಆದರೂ ಸರ್ಕಾರದಿಂದ ಸ್ಪಂದನೆ ಸಿಗದ್ದರಿಂದ ಆಕ್ರೋಶಗೊಂಡಿರುವ ರೈತರು, ಇನ್ನು ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸರದಿಯಂತೆ ಹಿರೇಕೆರೂರು ತಾಲೂಕಿನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತರ ಬೇಡಿಕೆ ಈಡೇರಿಸದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕಳೆದ ಆರು ದಿನಗಳಿಂದ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಭಾನುವಾರ ಆಗಿದ್ದರಿಂದ ಯಾವ ಶಾಸಕರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ. ಪ್ರತಿಭಟನೆ ಕೈ ಬಿಡದೇ ಮುಂದುವರೆಸಿದ್ದೇವೆ ಎಂದರು.ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ 7.50 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಮಾಡುವಂತೆ ಸರ್ಕಾರದ್ದು ಎನ್ನಲಾದ ಆದೇಶ ಪ್ರತಿ ಹರಿದಾಡುತ್ತಿದೆ. ಈ ಪ್ರತಿಯಲ್ಲಿ ಪ್ರತಿಯೊಬ್ಬ ರೈತರಿಂದ ತಲಾ 5 ಕ್ವಿಂಟಲ್‌ನಷ್ಟೇ ಖರೀದಿ ಮಾಡಬೇಕೆಂದು ತಿಳಿಸಲಾಗಿದೆ. ಮೆಕ್ಕೆಜೋಳವನ್ನು ಎಲ್ಲಿ, ಯಾವಾಗ ಹೇಗೆ ಮಾರಾಟ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಉಳಿದ ಮೆಕ್ಕೆಜೋಳವನ್ನು ಎಲ್ಲಿ ಮಾರಾಟ ಮಾಡಬೇಕೆಂದು ಪ್ರಶ್ನಿಸಿದರು. ಇದು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಸರಿಯಾದ ಮಾಹಿತಿ ನೀಡಬೇಕು. ಹೆಚ್ಚು ಹೆಚ್ಚು ಖರೀದಿ ಕೇಂದ್ರ ತೆರೆದು, ಕ್ವಿಂಟಲ್‌ಗೆ ಕೇಂದ್ರದ 2400 ರು., ರಾಜ್ಯದ ವಂತಿಕೆ 600 ರು.ಸೇರಿ ಒಟ್ಟು 3,000 ರು.ನಂತೆ ಮೆಕ್ಕೆಜೋಳ ಖರೀದಿಸಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಾಲತೇಶ ಪೂಜಾರ, ಶಿವಯೋಗಿ ಹೊಸಗೌಡ್ರ ಮಾತನಾಡಿದರು. ಪ್ರಭುಗೌಡ ಪ್ಯಾಟಿ, ಶಾಂತನಗೌಡ ಪಾಟೀಲ, ಜಿ.ಎನ್. ಪ್ಯಾಟಿಗೌಡ್ರ, ನವೀನ ಹುಲ್ಲತ್ತಿ, ಮಂಜು ದ್ಯಾಮನಗೌಡ್ರ, ಅಖಿಲಗೌಡ, ನಾಗರಾಜ ನೀರಲಗಿ, ನಾಗರಾಜ ಪ್ಯಾಟಿ, ದಸ್ತಗೀರ ಆಲದಕಟ್ಟಿ, ನಾಗರಾಜ ಮಳವಳ್ಳಿ, ಮಂಜು ಮಾರ್ಯರ, ಗಂಗನಗೌಡ ಮುದಿಗೌಡ್ರ, ಎಚ್.ಎಚ್. ಮುಲ್ಲಾ, ಚನ್ನಪ್ಪ ಮರಡೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.