ಹಾವೇರಿಯಲ್ಲಿ ರೈತ ಹುತಾತ್ಮ ದಿನಾಚರಣೆ, ಬೇಡಿಕೆ ಈಡೇರಿಕೆಗಾಗಿ ರೈತರ ಪ್ರತಿಭಟನೆ

KannadaprabhaNewsNetwork |  
Published : Jun 11, 2025, 12:28 PM IST
10ಎಚ್‌ವಿಆರ್1, 1ಎ | Kannada Prabha

ಸಾರಾಂಶ

ಮೆಕ್ಕೆಜೋಳದ ಬಿತ್ತನೆ ಬೀಜದ ದರ ಮತ್ತು ತೂಕದಲ್ಲಿ ವ್ಯತ್ಯಾಸವಾಗಿದೆ. ಒಂದೊಂದು ಕಂಪನಿ ಒಂದೊಂದು ದರ ನಿಗದಿ ಮಾಡಿದ್ದು, ಇದಕ್ಕೆ ಒಂದು ಮಾನದಂಡ ರಚಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

ಹಾವೇರಿ: ಬಿತ್ತನೆ ಬೀಜ, ಗೊಬ್ಬರ ಕೇಳಿದ ರೈತರ ಮೇಲೆ ನಡೆಸಿದ ಗೋಲಿಬಾರ್‌ನಲ್ಲಿ ಹುತಾತ್ಮರಾದ ರೈತರಿಗೆ ಗೌರವನಮನ ಸಲ್ಲಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಸಂಘನೆಗಳ ಸಾಮೂಹಿಕ ನಾಯಕತ್ವದಲ್ಲಿ ನಗರದ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಸೋಮವಾರ ರೈತರು ಬೃಹತ್‌ ಪ್ರತಿಭಟನೆ ನಡೆಸಿದರು.

ಇಲ್ಲಿಯ ಹೊಸಮನಿ ಸಿದ್ದಪ್ಪ ವೃತ್ತದ ಬಳಿಯ ರೈತ ಹುತಾತ್ಮ ಸ್ಮಾರಕಕ್ಕೆ ರೈತ ಮುಖಂಡರು ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿಯೇ ಸಮಾವೇಶಗೊಂಡ ರೈತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಮೆಕ್ಕೆಜೋಳದ ಬಿತ್ತನೆ ಬೀಜದ ದರ ಮತ್ತು ತೂಕದಲ್ಲಿ ವ್ಯತ್ಯಾಸವಾಗಿದೆ. ಒಂದೊಂದು ಕಂಪನಿ ಒಂದೊಂದು ದರ ನಿಗದಿ ಮಾಡಿದ್ದು, ಇದಕ್ಕೆ ಒಂದು ಮಾನದಂಡ ರಚಿಸಬೇಕು. ಸರ್ಕಾರ ಬೆಲೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕಂಪನಿಗಳ ಮೇಲೆ ಹಿಡಿತ ಸಾಧಿಸಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆ ಸತತವಾಗಿ ಬರಗಾಲಕ್ಕೆ ಸಿಲುಕಿ ರೈತರು ಕಂಗಾಲಾಗುತ್ತಿದ್ದಾರೆ. ಅದಕ್ಕಾಗಿ ವರದಾ ನದಿಗೆ ಬೇಡ್ತಿ ನದಿಯನ್ನು ಜೋಡಣೆ ಮಾಡುವುದರಿಂದ ಕುಡಿಯುವ ನೀರಿನ ಮತ್ತು ಶಾಶ್ವತ ಬರಗಾಲ ನಿವಾರಣೆ ಸಾಧ್ಯವಾಗಲಿದೆ. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗಬಹುದು. ಆದ್ದರಿಂದ ನದಿ ಜೋಡಣೆ ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.

ಭತ್ತ, ಸೂರ್ಯಕಾಂತಿ, ಸೋಯಾಬಿನ್, ಮೆಕ್ಕೆಜೋಳ, ಹತ್ತಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದು, ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರ ತೆರೆದು ಖರೀದಿಸಬೇಕು. ತುಂಗಾ ಮೇಲ್ದಂಡೆ ಕಾಲುವೆಗೆ ಜಮೀನು ಕಳೆದುಕೊಂಡು ೨೫ ವರ್ಷ ಗತಿಸಿದರೂ ಪರಿಹಾರ ಮರೀಚಿಕೆಯಾಗಿದೆ. ಇದರಿಂದ ರೈತರಿಗೆ ತೊಂದರೆಯಾಗಿದೆ. ಕೂಡಲೇ ಇತ್ಯರ್ಥ ಮಾಡಿ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಗೊಂದು ಪ್ರತ್ಯೇಕ ಡಿಸಿಸಿ ಬ್ಯಾಂಕ್ ರಚಿಸಿ, ₹೫ ಲಕ್ಷದವರೆಗೆ ಶೂನ್ಯ ಬಡ್ಡಿದರದ ಸಾಲ ಸೌಲಭ್ಯ ನೀಡಬೇಕು. ಬೆಳೆ ವಿಮೆಯಲ್ಲಿ ತಾರತಮ್ಯ ಮಾಡಲಾಗುತ್ತಿದ್ದು, ಅದನ್ನು ನಿವಾರಣೆ ಮಾಡಬೇಕು. ಹೊಸ ವಿದ್ಯುತ್ ಸಂಪರ್ಕಕ್ಕೆ ಹಲವು ಷರತ್ತುಗಳು ಹಾಕಲಾಗುತ್ತಿದ್ದು, ಕೂಡಲೇ ಅವೆಲ್ಲವನ್ನೂ ಕೈಬಿಟ್ಟು ಈ ಮೊದಲಿನಂತೆ ಬೋರ್‌ವೆಲ್ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕಳೆದ ೨ ವರ್ಷದಿಂದ ಶುಂಠಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಪ್ರತಿ ಕ್ವಿಂಟಲ್‌ಗೆ ₹೧೦ ಸಾವಿರ ನಿಗದಿ ಮಾಡಿ ಸರ್ಕಾರ ಖರೀದಿ ಕೇಂದ್ರದ ಮೂಲಕ ಖರೀದಿಸಬೇಕು. ೨೦೨೫- ೨೬ರ ಬೆಳೆವಿಮೆಯಲ್ಲಿ ತಾರತಮ್ಯ ನಡೆದಿದ್ದು, ಅವಕಾಶ ವಂಚಿತರಾದವರ ಅರ್ಜಿ ಮರುಪರಿಶೀಲನೆ ಮಾಡಿ ವಿಮೆ ಪರಿಹಾರ ಕೊಡಬೇಕು. ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಮುಖಾಂತರ ರೈತರು ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದು, ಇಲ್ಲಿಯವರೆಗೂ ಸಹಾಯಧನ ಕೊಟ್ಟಿಲ್ಲ. ಕೂಡಲೇ ಸಹಾಯಧನ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.

ರೈತರು ಬ್ಯಾಂಕಿನಲ್ಲಿ ಪಡೆದ ಬೆಳೆಸಾಲ ಕಟ್‌ಬಾಕಿಯಾದ ಸಾಲಗಳನ್ನು ಸಾಲ ಮರುಪಾವತಿ ಮಾಡಿದರೆ ಸಿಬಿಲ್ ಅನ್ವಯಿಸಬಾರದು. ತುಂಗಭದ್ರಾ ಹಾಗೂ ವರದಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಂಜೂರಾಗಿದ್ದು, ಕಾಮಗಾರಿ ಮಂದಗತಿಯಲ್ಲಿದೆ. ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಬೇಕು. ಜಿಲ್ಲೆಯ ಎಲ್ಲ ನದಿಗಳಿಗೆ ಅಡ್ಡಲಾಗಿ ಹೊಸ ಬ್ಯಾರೇಜ್‌ಗಳ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಮಾಲತೇಶ ಪೂಜಾರ, ಮಹಮದ್‌ಗೌಸ್ ಪಾಟೀಲ, ಅಡಿವೆಪ್ಪ ಆಲದಕಟ್ಟಿ, ಶಿವಬಸಪ್ಪ ಗೋವಿ, ಎಚ್.ಎಚ್. ಮುಲಾ, ದಿಳ್ಳೆಪ್ಪ ಮಣ್ಣೂರ, ಶಿವಯೋಗಿ ಹೊಸಗೌಡ್ರ, ಪ್ರಭುಗೌಡ ಪ್ಯಾಟಿ, ಮರಿಗೌಡ ಪಾಟೀಲ, ಚನ್ನಪ್ಪ ಮರಡೂರ, ಈರಣ್ಣ ಚಕ್ರಸಾಲಿ, ಮಾಲತೇಶ ಪರಪ್ಪನವರ, ರುದ್ರಗೌಡ ಕಾಡಿನಗೌಡ್ರ, ರುದ್ರಪ್ಪ ಅಣ್ಣಿ, ಸೋಮಣ್ಣ ಜಡೆಗೊಂಡರ, ಶ್ರೀಕಾಂತ ದುಂಡಣ್ಣನವರ, ಮಹೇಶ ಈರಪಣ್ಣನವರ, ಮಾಲತೇಶ ಪರಪ್ಪನವರ, ಚೆನ್ನಪ್ಪ ಮರಡೂರ, ರಾಜು ತರ್ಲಘಟ್ಟ, ಜಾನ್ ಪುನೀತ್, ಶಾಂತನಗೌಡ ಪಾಟಿಲ, ಗುಡ್ಡನಗೌಡ ಪ್ಯಾಟಿಗೌಡ್ರ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ