ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಬೆಳೆವಿಮೆ ಕುರಿತು ಅರಿವು ಮೂಡಿಸಲಾಯಿತು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಳ್ಳಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೃಷಿ ಇಲಾಖೆಯಿಂದ ಕೈಗೊಳ್ಳಲಾಗಿದ್ದು, ತಾಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ಪ್ರಚಾರ ಸಭೆ ನಡೆಸಲಾಯಿತು.
ಈ ವೇಳೆ ಸಹಾಯಕ ಕೃಷಿ ನಿರ್ದೇಶಕ ರಮೇಶ್ ಎಸ್.ಟಿ.ಮಾತನಾಡಿ, ಎಲ್ಲಾ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು. 2026-27ನೇ ಸಾಲಿನಲ್ಲಿ ಪ್ರಧಾನಮಂತ್ರಿ ಪಸಲ್ ಭಿಮಾ ಬೆಳೆ ವಿಮೆ ಯೋಜನೆ ಅನುಷ್ಠಾನ ಮಾಡಲಾಗುತ್ತಿದ್ದು, ಚಳ್ಳಕೆರೆ ತಾಲೂಕಿನಲ್ಲಿ ಶೇಂಗಾ (ಮಳೆಯಾಶ್ರಿತ) ಬೆಳೆಯು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಸೂಚನೆಗೊಂಡಿದ್ದು, ಮುಂದುವರೆದು ತೊಗರಿ ಮತ್ತು ಮುಸುಕಿನ ಜೋಳ ಬೆಳೆಯು ಹೋಬಳಿ ಮಟ್ಟಕ್ಕೆ ಅಧಿಸೂಚನೆಗೊಂಡಿದೆ ಎಂದು ತಿಳಿಸಿದರು.
ಪ್ರಾಕೃತಿಕ ವಿಕೋಪಗಳಾದ ಬರ, ನೆರೆ ಮುಂತಾದ ಸಂದರ್ಭಗಳಲ್ಲಿ ಬೆಳೆ ಹಾನಿಯಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಬೆಳೆವಿಮೆ ಯೋಜನೆ ರೈತರನ್ನು ಕೈಹಿಡಿದು ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ಅನುಕೂಲವಾಗುವಂತೆ ಸಹಕರಿಸುತ್ತದೆ. ತಾಲೂಕಿನಲ್ಲಿ ಬರದ ಛಾಯೆ ಆವರಿಸಿರುವುದರಿಂದ ರೈತರು ಕಡ್ಡಾಯವಾಗಿ ಬೆಳೆ ವಿಮೆ ಯೋಜನೆಗೆ ನೋಂದಾಯಿಸಲು ಮುಂದೆ ಬರಬೇಕು ಎಂದರು.
ಬೆಳೆಯ ಮೇಲೆ ನೊಂದಾಯಿಸಲು ರೈತರು ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ, ಕರ್ನಾಟಕ ಒನ್ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಹತ್ತಿರದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಬೆಳೆ ಸಾಲ ಪಡೆದಿರುವ ರೈತರು ಸಾಲ ಪಡೆದ ಬ್ಯಾಂಕ್ ಶಾಖೆಗಳಲ್ಲಿ ವಿಮೆ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಬೆಳೆ ಸಾಲ ಪಡೆಯದೇ ಇದ್ದಲ್ಲಿ ಯಾವುದೇ ಸಾಲವನ್ನು ಪಡೆದಿಲ್ಲ ಎಂದು ದೃಢೀಕರಣ ನೀಡಿ ಬೆಳೆ ಮಾಡಿಸಬಹುದು. ಒಂದು ವೇಳೆ ಬೆಳೆ ಸಾಲ ಪಡೆದಿರುವ ಬೆಳೆಯ ಬದಲಾಗಿ ಬೇರೆ ಬೆಳೆಗೆ ವಿಮೆ ನೋಂದಾಯಿಸಬೇಕೆಂದುಕೊಂಡಲ್ಲಿ ಸಂಬಂಧಿಸಿದ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಬೆಳೆ ಬದಲಾವಣೆ ಅರ್ಜಿಯನ್ನು ನೀಡಿ ವಿಮೆಗೆ ನೋಂದಾಯಿಸಿಕೊಳ್ಳಬಹುದು.
ಪ್ರಸ್ತುತ ತಾಲೂಕಿನಲ್ಲಿ ಈವರೆಗೂ ಕೇವಲ 661 ರೈತರಷ್ಟೇ ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದು ಎಲ್ಲಾ ರೈತರು ಬೆಳೆ ವಿಮೆ ನೊಂದಾಯಿಸಲು ಮನವಿ ಮಾಡಿದೆ. ಬೆಳೆ ವಿಮೆ ಮಾಡಿಸಲು ಇದೇ ತಿಂಗಳ 31ನೇ ತಾರೀಕು ಕೊನೆಯ ದಿನಾಂಕವಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೆಡಿಪಿ ಮೆಂಬರ್ ರಮೇಶ್, ಗ್ರಾಮ ಆಡಳಿತ ಅಧಿಕಾರಿ ರಘುನಾಥ್ ಸಿಂಗ್, ಗ್ರಾಮಸ್ಥರಾದ ಮುಸ್ತಫಾ, ನವೀನ್, ಗಿರೀಶ್ ಪಾಲನೇತ್ರ, ಚೆನ್ನಮ್ಮ, ಸುವರ್ಣಮ್ಮ, ಶಾರದಮ್ಮ, ಶ್ವೇತ,ವನಜಾಕ್ಷಿ, ವಿನೋದ್ ರಾಜ್, ತಿಪ್ಪೇಸ್ವಾಮಿ, ಕೃಷಿ ಇಲಾಖೆ ಸಿಬ್ಬಂದಿಗಳಾದ ರಾಮಕೃಷ್ಣ, ಧನಂಜಯ, ಮಂಜುನಾಥ್, ಪ್ರಕಾಶ್ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.