ಕನ್ನಡಪ್ರಭ ವಾರ್ತೆ ಮುಧೋಳಪಶು ಸಂಗೋಪನೆ ಸಾಲ ವಿತರಣೆಯಲ್ಲಿನ ತಾಂತ್ರಿಕ ಗೊಂದಲ ಹಾಗೂ ವಿಳಂಬ ನೀತಿ ಖಂಡಿಸಿ, ಮುಂದಿನ 15 ದಿನಗಳಲ್ಲಿ ರೈತರ ಖಾತೆಗಳಿಗೆ ಸಾಲ ಜಮಾ ಮಾಡುವಂತೆ ಒತ್ತಾಯಿಸಿ ರೈತ ಮುಖಂಡ ಮುತ್ತಪ್ಪ ಕೋಮಾರ ನೇತೃತ್ವದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಬಿಡಿಸಿಸಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಯಿತು.ಈ ವೇಳೆ ಮಾತನಾಡಿದ ಮುತ್ತಪ್ಪ ಕೋಮಾರ, ಈ ಶಾಖೆಯ ವ್ಯಾಪ್ತಿಗೆ ಒಳಪಡುವ ಕುಳಲಿ, ಮಾಲಾಪೂರ, ಮುಗಳಖೋಡ, ಶಿರೋಳ (1 ಮತ್ತು 2), ಸೊರಗಾಂವ ಸೇರಿದಂತೆ ಒಟ್ಟು 6 ಗ್ರಾಮಗಳ ಪಿಕೆಪಿಎಸ್‌ಗಳ ಸುಮಾರು 6,500ಕ್ಕೂ ಅಧಿಕ ಖಾತೆದಾರರಿಗೆ ಪಶುಸಂಗೋಪನೆ ಸಾಲ ವಿತರಣೆಯಲ್ಲಿ ತೀವ್ರ ತೊಂದರೆಯಾಗುತ್ತಿದೆ. ಸ್ಥಳೀಯ ಸೊಸೈಟಿ ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡುತ್ತಿದ್ದರೂ, ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯ ಮಾರ್ಗಸೂಚಿಗಳು ಮತ್ತು ಮೇಲ್ವಿಚಾರಕರ ಹಂತದಲ್ಲಿ ಬ್ಯಾಂಕ್ ಸೆಟ್, ಎನ್‌ಡಿಸಿ ಹಾಗೂ ಜಾನುವಾರುಗಳ ಫೋಟೋ ಸಲ್ಲಿಕೆ ಸೇರಿದಂತೆ 29 ಷರತ್ತುಗಳನ್ನು ಹಾಕಿ ಅನಗತ್ಯ ಗೊಂದಲ ಸೃಷ್ಟಿಸಿ ಸಾಲ ವಿತರಣೆ ತಡೆಯಲಾಗುತ್ತಿದೆ ಎಂದು ಆರೋಪಿಸಿದರು.ಪ್ರಧಾನ ಕಚೇರಿ ಮುತ್ತಿಗೆಯ ಎಚ್ಚರಿಕೆ
ಈ ವೇಳೆ ಸಾಲ ಮಂಜೂರಾತಿ ವಿಳಂಬದ ಬಗ್ಗೆ ಅಳಲು ತೋಡಿಕೊಂಡ ರೈತರಿಗೆ ಸ್ಪಂದಿಸಿದ ಬಿಡಿಸಿಸಿ ಬ್ಯಾಂಕ್ ಕ್ಷೇತ್ರ ಸಹಾಯಕಿ ಸವಿತಾ ಚನ್ನಾಳ ಶೀಘ್ರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ನನ್ನ ವ್ಯಾಪ್ತಿಗೆ ಆರು ಪಿಕೆಪಿಎಸ್‌ಗಳು ಒಳಪಡುತ್ತಿದ್ದು, ಎಂ.ಟಿ ಸಾಲ, ಹೈನುಗಾರಿಕೆ ಬಿಲ್‌ಗಳು ಮತ್ತು ಹೆಚ್ಚುವರಿ ಸಾಲ ಸೇರಿದಂತೆ ₹ 20ರಿಂದ ₹ 25 ಕೋಟಿ ಮೌಲ್ಯದ, ಸುಮಾರು 6,500ಕ್ಕೂ ಹೆಚ್ಚು ರೈತರ ದಾಖಲೆಗಳ ನಿರ್ವಹಣೆಯ ಜವಾಬ್ದಾರಿ ನನ್ನ ಮೇಲಿದೆ. ತೀವ್ರ ಕಾರ್ಯಭಾರದಿಂದ ಕಡತ ವಿಲೇವಾರಿಯಲ್ಲಿ ಕೊಂಚ ವಿಳಂಬವಾಗಿದೆ. ನಾನೂ ರೈತ ಕುಟುಂಬದಿಂದಲೇ ಬಂದಿದ್ದು, ಅನ್ನದಾತರ ಕಷ್ಟಗಳ ಅರಿವು ನನಗಿದೆ. ರಜಾ ದಿನಗಳನ್ನೂ ಲೆಕ್ಕಿಸದೆ ಹೆಚ್ಚುವರಿ ಅವಧಿಯಲ್ಲಿ ಕೆಲಸ ಮಾಡಿ, ಬಾಕಿ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಿ ಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಈರಪ್ಪ ಹಂಚಿನಾಳ, ರುದ್ರಪ್ಪ ಅಡವಿ ಸೇರಿ ಹಲವು ರೈತರು ಉಪಸ್ಥಿತರಿದ್ದರು.