ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನಾಲೆ ನೀರು ಕದ್ದರೆ ಜೈಲು ಹಾಗೂ ದಂಡ ಎಂಬ ಕರ್ನಾಟಕ ನೀರಾವರಿ (ತಿದ್ದುಪಡಿ) ವಿಧೇಯಕ ಮಂಡಿಸಿರುವ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ರೈತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ಪಟ್ಟಣ ತಾಲೂಕು ಕಚೇರಿ ಎದುರು ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ರೈತ ಮುಖಂಡ ಕೆ.ಎಸ್. ನಂಜುಂಡೇಗೌಡ ನೇತೃತ್ವದಲ್ಲಿ ಧರಣಿ ಕುಳಿತ ನೂರಾರು ರೈತರು ಜಲಸಂಪನ್ಮೂಲ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಸರ್ಕಾರದ ಘೋಷಣೆ ಕೂಗಿದರು.
ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕರ್ನಾಟಕ ನೀರಾವರಿ (ತಿದ್ದುಪಡಿ) ವಿಧೇಯಕ 2024ನ್ನು ಮಂಡಿಸಿ ನಾಲೆ ನೀರು ಕದ್ದರೆ 2 ವರ್ಷ ಜೈಲು, 2 ಲಕ್ಷ ರು. ದಂಡ ಹಾಗೂ ನಾಲೆ ಸುತ್ತಲಿನ ಕೊಳವೆ ಬಾವಿಗಳ ಜಲಮೂಲಗಳ ನೋಂದಣಿ ಕಡ್ಡಾಯ ಎನ್ನುವ ವಿಧೇಯಕ ಮಂಡಿಸಿಸುವ ಮೂಲಕ ದೇಶಕ್ಕೆ ಅನ್ನ ಕೊಟ್ಟ ಅನ್ನದಾತನಿಗೆ ದಂಡ ಮತ್ತು ಜೈಲು ಶಿಕ್ಷೆ ನೀಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷ ನಿರಂತರವಾಗಿ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ರೈತ ಸಮುದಾಯ 1981ರಲ್ಲಿ ರೈತರಿಗೆ ಗುಂಡಿಟ್ಟ ಕಾಂಗ್ರೆಸ್ ಗುಂಡುರಾಯನಿಗೆ ಓಟಿಲ್ಲ ಎಂದು ತೀರ್ಮಾನಿಸಿ ಕಲಿಸಿರುವ ಪಾಠವನ್ನು ಮರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ರಾಜ್ಯ ಸರ್ಕಾರದ ರೈತ ವಿರೋಧಿ ನಡೆಯಿಂದಾಗಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಲಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸಾಮಾಜಿಕ ವ್ಯವಸ್ಥೆಯಲ್ಲಿ ವಿಶೇಷವಾಗಿ ರೈತನಿಗೆ ಅನುಕೂಲ ಮಾಡಿಕೊಡಬೇಕಾದ ಸರ್ಕಾರಗಳು ಮೇಲ್ಬಾಗ, ಕೆಳಭಾಗದ ರೈತರು ಎಂದು ವಿಂಗಡಿಸಿ ಅನ್ನದಾತನಿಗೆ ದಂಡ, ಜೈಲು ಎನ್ನುವ ನೀತಿಯೇ ರಾಕ್ಷಸ ಪ್ರವೃತ್ತಿಯಂತಿದೆ. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಸಂಪತ್ತನ್ನು ಲೂಟಿ ಮಾಡಿ ಕೇವಲ ತಮ್ಮ ಜಮೀನುಗಳಿಗೆ ನೀರು ಹಾಯಿಸಿಕೊಳ್ಳುವಂತಹ ರೈತರಿಗೆ ದಂಡ ಹಾಗೂ ಶಿಕ್ಷೆ ಎನುವುದು ಎಷ್ಟುರ ಮಟ್ಟಿಗೆ ಸರಿ ಎಂದು ಕಿಡಿಕಾರಿದರು.
ಜನ ವಿರೋಧಿ ನಡೆ ಅನುಸರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಸೂಕ್ತ ತಿಳಿವಳಿಕೆ ಹೇಳಿ ದೇಶಕ್ಕೆ ಅನ್ನಕೊಟ್ಟು, ಕಷ್ಟದ ಜೀವನ ನಡೆಸುತ್ತಿರುವ ಅನ್ನದಾತರ ಪರವಾಗಿ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿ ತಾಲೂಕು ಆಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಭೂಮಿತಾಯಿ ಹೋರಾಟ ಸಮಿತಿ ಅದ್ಯಕ್ಷ ಬಿ.ಸಿ.ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ದರ್ಶನ್, ಖಜಾಂಚಿ ಮಹದೇವು, ಉಪಾಧ್ಯಕ್ಷ ಜಗದೀಶ್, ಮಹಾಲಿಂಗು, ಕಡತನಾಳು ಶ್ರೀಧರ್, ಡಿ. ಮಂಜುನಾಥ್, ಸಿದ್ದೇಗೌಡ, ರಾಮಚಂದ್ರು, ಸುರೇಶ್, ರಾಮಚಂದ್ರು, ಸ್ವಾಮೀಗೌಡ ಸೇರಿದಂತೆ ನೂರಾರು ರೈತರು ಇದ್ದರು.