ಪ್ರವಾಹಕ್ಕೊಳಗಾಗುವ ಗ್ರಾಮಗಳ ಸುರಕ್ಷತೆಗೆ ಆದ್ಯತೆ ನೀಡಿ

KannadaprabhaNewsNetwork |  
Published : Jul 26, 2024, 01:37 AM IST

ಸಾರಾಂಶ

ಡ್ಯಾಮಿನ ನೀರಿನ ಒಳಹರಿವು 26ಸಾವಿರ ಕ್ಯುಸೆಕ್‌ ಇದ್ದು ಶೀಘ್ರವೇ ನವಿಲು ತೀರ್ಥ ಡ್ಯಾಮಿನಿಂದ ನೀರು ಹೊರಬಿಡುವ ಸಾಧ್ಯತೆ

ಗದಗ: ಬೆಣ್ಣೆಹಳ್ಳ ಹಾಗೂ ಮಲಪ್ರಭಾ ನದಿಯ ಪ್ರವಾಹಕ್ಕೊಳಗಾಗುವ ಗ್ರಾಮಗಳ ಸಾರ್ವಜನಿಕರ ಸುರಕ್ಷತೆಗೆ ಸ್ಥಳೀಯ ಅಧಿಕಾರಿಗಳು ಪ್ರಥಮಾದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಭಾಂಗಣದಲ್ಲಿ ಗುರುವಾರ ಬೆಣ್ಣೆಹಳ್ಳ ಹಾಗೂ ಮಲಪ್ರಭಾ ನದಿಯ ಪ್ರವಾಹದಿಂದ ತೊಂದರೆಗೊಳಗಾಗುವ ನರಗುಂದ ಹಾಗೂ ರೋಣ ತಾಲೂಕು ಆಡಳಿತದೊಂದಿಗೆ ಪ್ರವಾಹ ಪರಿಸ್ಥಿತಿ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2009 ಹಾಗೂ 2019 ರಲ್ಲಿ ಅಧಿಕ ಪ್ರಮಾಣದ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ ಅನೇಕ ಅಧಿಕಾರಿಗಳು ಅನುಭವ ಹೊಂದಿದವರಾಗಿದ್ದಾರೆ. ಪ್ರವಾಹ ಪರಿಸ್ಥಿತಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಣೆಗೆ ಎಲ್ಲ ಅಧಿಕಾರಿಗಳು ಸನ್ನದ್ಧರಾಗಬೇಕೆಂದು ಸೂಚಿಸಿದರು.

ನವಿಲುತೀರ್ಥ ಡ್ಯಾಂ 37.731 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 24 ಟಿಎಂಸಿ ನೀರು ಸಂಗ್ರಹವಾಗಿದೆ. ಡ್ಯಾಮಿನ ನೀರಿನ ಒಳಹರಿವು 26ಸಾವಿರ ಕ್ಯುಸೆಕ್‌ ಇದ್ದು ಶೀಘ್ರವೇ ನವಿಲು ತೀರ್ಥ ಡ್ಯಾಮಿನಿಂದ ನೀರು ಹೊರಬಿಡುವ ಸಾಧ್ಯತೆಯಿದೆ. ನವಿಲುತೀರ್ಥ ಡ್ಯಾಮಿನಿಂದ ಅಪಾರ ಪ್ರಮಾಣದ ನೀರು ಬಿಟ್ಟಲ್ಲಿ ಮುಂದಿನ 18 ಗಂಟೆಯೊಳಗಾಗಿ ನೀರು ಜಿಲ್ಲೆಗೆ ಪ್ರವೇಶ ಮಾಡಲಿದ್ದು ಡ್ಯಾಂನಿಂದ ನೀರು ಹೊರಬಿಡುವ ಮಾಹಿತಿ ದೊರೆತ ತಕ್ಷಣ ತಾಲೂಕಾ ಡಳಿತ ಪ್ರವಾಹ ಪೀಡಿತಕ್ಕೊಳಗಾಗುವ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸುವ ಮೂಲಕ ಆಗುವ ಜೀವ ಹಾನಿ ತಪ್ಪಿಸಬೇಕು ಎಂದರು.

ನವಲಗುಂದ ಸೇರಿದಂತೆ 5 ತಾಲೂಕುಗಳ ಮಳೆಯಿಂದ ಅಪಾರ ಪ್ರಮಾಣದ ನೀರು ಬೆಣ್ಣೆಹಳ್ಳ ತಲುಪಿ ಅಲ್ಲಿಂದ ಜಿಲ್ಲೆಗೆ ಒಮ್ಮೆಲೆ ನೀರು ಹರಿದು ಬರಲಿದೆ, ಇದರಿಂದ ನರಗುಂದ ಹಾಗೂ ರೋಣ ತಾಲೂಕಿನ ಹಲವು ಗ್ರಾಮಗಳು ಪ್ರವಾಹಕ್ಕೊಳಗಾಗುವ ಸಂಭವವಿದ್ದು, ಈಗಾಗಲೇ ತಾಲೂಕಾಡಳಿತ ಅಂತಹ ಗ್ರಾಮಗಳನ್ನು ಗುರುತಿಸಿದೆ. ನೀರಿನ ಪ್ರಮಾಣಕ್ಕನುಗುಣವಾಗಿ ಅಧಿಕಾರಿಗಳು ಪ್ರವಾಹ ಪರಿಸ್ಥಿತಿ ಸರಿಯಾಗಿ ನಿಭಾಯಿಸಬೇಕು ಎಂದು ನಿರ್ದೇಶಿಸಿದರು.

ಪ್ರವಾಹ ಪರಿಸ್ಥಿತಿ ತಲೆದೂರಿದಲ್ಲಿ ಅಗ್ನಿ ಶಾಮಕ ಇಲಾಖೆ ತಂಡ ತಕ್ಷಣ ಕಾರ್ಯ ಪ್ರವೃತ್ತವಾಗಬೇಕು. ತಾಲೂಕಾಡಳಿತದೊಂದಿಗೆ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸುವ ಮೂಲಕ ಪ್ರವಾಹ ಪರಿಸ್ಥಿತಿ ನಿರ್ವಹಣೆ ಮಾಡಬೇಕು. ತಗ್ಗು ಪ್ರದೇಶಗಳಲ್ಲಿ ಹಾಗೂ ಶಿಥಿಲಾವಸ್ಥೆಯಲ್ಲಿರುವ ಮಣ್ಣಿನ ಮನೆಗಳಲ್ಲಿ ವಾಸಿಸುವವರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಬೇಕು ಎಂದು ಹೇಳಿದರು.

ಎಸ್ಪಿ ಬಿ.ಎಸ್.ನೇಮಗೌಡ ಮಾತನಾಡಿ, ನರಗುಂದ ಹಾಗೂ ರೋಣ ತಾಲೂಕುಗಳ ಪೊಲೀಸ್‌ ಅಧಿಕಾರಿಗಳು ಬೀಟ್ ಮಾಡುವ ಮೂಲಕ ಪ್ರವಾಹ ಕುರಿತಂತೆ ಮಾಹಿತಿ ಸಂಗ್ರಹ ಮಾಡಿಟ್ಟುಕೊಳ್ಳಬೇಕು. ಅಲ್ಲದೇ ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಜನಸಾಮಾನ್ಯರು ನದಿ ಅಂಚಿನ ಕಡೆಗೆ ತೆರಳದಂತೆ ಬ್ಯಾರಿಕೇಡ್ ಹಾಕುವ ಮೂಲಕ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಯಾವುದೇ ಪ್ರಾಣ ಹಾನಿಗೆ ಅವಕಾಶ ನೀಡಬಾರದು ಎಂದರು.

ಜಿಪಂ ಸಿಇಒ ಭರತ್.ಎಸ್ ಮಾತನಾಡಿ, ಪ್ರವಾಹ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಲು ಎಲ್ಲ ಅಧಿಕಾರಿಗಳು ಸನ್ನದ್ಧರಾಗಬೇಕು. ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ ತೆರೆಯಬೇಕು. ಕಾಳಜಿ ಕೇಂದ್ರ ಈಗಾಗಲೇ ಗುರುತಿಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಅಗತ್ಯಮೂಲಭೂತ ಸೌಲಭ್ಯಗಳು ಇರುವಂತೆ ಪರಿಶೀಲಿಸಬೇಕು. ಸಂದರ್ಭಾನುಸಾರ ಸಾರ್ವಜನಿಕರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿದಲ್ಲಿ ಆರೋಗ್ಯಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿ ಸಮರ್ಪಕವಾಗಿ ನಿಭಾಯಿಸಬೇಕೆಂದು ಸೂಚಿಸಿದರು.

ನರಗುಂದ ಹಾಗೂ ರೋಣ ತಹಸೀಲ್ದಾರ ಶ್ರೀಶೈಲ ತಳವಾರ ಹಾಗೂ ನಾಗರಾಜ ಮಾತನಾಡಿ, ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಈಗಾಗಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಥಳೀಯ ಜೆಸಿಬಿ ಮಾಲೀಕರು, ನುರಿತ ಈಜುಗಾರರು, ತರಕಾರಿ ಹಾಗೂ ಕಿರಾಣಿ ಅಂಗಡಿ ಮಾಲೀಕರು ಹಾಗೂ ವೈದ್ಯರ ಮಾಹಿತಿ ಸಂಗ್ರಹಿಸಲಾಗಿದೆ. ಅಲ್ಲದೇ ಜನಜಾನುವಾರು ಸ್ಥಳಾಂತರಕ್ಕೆ ಸ್ಥಳ ಗುರುತಿಸಿಟ್ಟುಕೊಳ್ಳಲಾಗಿದೆ. ಮೊದಲು ಪ್ರವಾಹಕ್ಕೀಡಾಗುವ ಗ್ರಾಮಗಳ ಪಟ್ಟಿ ಮಾಡಿಟ್ಟುಕೊಂಡಿದ್ದು ಸಂದರ್ಭಕ್ಕನುಸಾರವಾಗಿ ಸಮರ್ಪಕವಾಗಿ ಪ್ರವಾಹ ನಿರ್ವಹಣೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ.ಎಂ, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ.ಎಂ, ಡಿಡಿಎಲ್‌ಆರ್ ರುದ್ರಗೌಡ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.ನೀಲಗುಂದ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಅಗ್ನಿಶಾಮಕ ಇಲಾಖೆ ಅಧಿಕಾರಿ ವಿ.ಎಸ್. ಠಕ್ಕೇಕರ್, ವಿಪತ್ತು ನಿರ್ವಹಣಾ ಪರಿಣಿತ ಶಿವಾನಂದ ರಾಜನಾಳ ಸೇರಿದಂತೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!