ಮುಖ್ಯಮಂತ್ರಿ, ಸಚಿವರಿಗೆ ಬಾರ್‌ಕೋಲು ತೋರಿಸಿ ರೈತರ ಚಳುವಳಿ

KannadaprabhaNewsNetwork | Published : Oct 10, 2023 1:00 AM

ಸಾರಾಂಶ

ತೋಟದ ಮನೆಗಳಿಗೆ ಸಮರ್ಪಕ ವಿದ್ಯುತ್ ಒದಗಿಸುವಂತೆ ಒತ್ತಾಯಿಸಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ಬಾರ್‌ಕೋಲ್ ಹಿಡಿದು ಕೊಳ್ಳೇಗಾಲದಲ್ಲಿ ಪ್ರತಿಭಟನೆ ನಡೆಸಿದರು
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ ತೋಟದ ಮನೆಗಳಿಗೆ ಸಮರ್ಪಕ ವಿದ್ಯುತ್ ಒದಗಿಸುವಂತೆ ಒತ್ತಾಯಿಸಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ಬಾರ್‌ಕೋಲ್ ಹಿಡಿದು ಇಲ್ಲಿ ಪ್ರತಿಭಟನೆ ನಡೆಸಿದರು. ಎಪಿಎಂಸಿ ಚೆಸ್ಕಾಂ ಕಚೇರಿಯಲ್ಲಿ ನೂರಾರು ರೈತರು ಜಮಾಯಿಸಿ ಧಿಕ್ಕಾರ ಕೂಗುತ್ತಾ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ಚೆಸ್ಕಾಂ ಕಚೇರಿ ಮುಂದೆ ಪ್ರತಿಭಟಿಸಿದರು. ಚೆಸ್ಕಾಂ ಎಂಡಿ ಅವರು ಅ.11ರಂದು ಮಧ್ಯಾಹ್ನ 3 ಗಂಟೆಗೆ ಸಭೆ ನಡೆಸಲಿದ್ದಾರೆ ಎಂಬ ಮಾಹಿತಿ ತಿಳಿದ ಬಳಿಕ ಪ್ರತಿಭಟನೆಯನ್ನು ರೈತರು ಕೈಬಿಟ್ಟು ತೆರಳಿದರು. ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್, ಮಾಲಂಗಿ ಬಸವರಾಜು ಮಾತನಾಡಿ, ತೋಟದ ಮನೆಗಳಿಗೆ ಸಮರ್ಪಕ ರೀತಿಯಲ್ಲಿ ಕರೆಂಟ್ ನೀಡಬೇಕು. ಸರ್ಕಾರ ನಮಗೆ ಚಂದ್ರಲೋಕ ತೋರುವುದು ಬೇಡ, ಸಮರ್ಪಕ ವಿದ್ಯುತ್ ಪೂರೈಸಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 7 ಗಂಟೆ ಕರೆಂಟ್ ನೀಡುತ್ತೇವೆ ಎನ್ನುತ್ತಾರೆ. ಅಧಿಕಾರಿಗಳು ಮಾತ್ರ 2 ಗಂಟೆ ಕರೆಂಟ್ ನೀಡುತ್ತಿಲ್ಲ. ಈ ಸಂಬಂಧ ಅನೇಕ ಗೊಂದಲಗಳಿವೆ. ತಪ್ಪು ಮಾಹಿತಿ ನೀಡುತ್ತಿರುವ ಮತ್ತು ಲೋಪ ಮಾಡುತ್ತಿರುವ ಚೆಸ್ಕಾಂ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗಳೇ ಸುಮೋಟೊ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಕಾವೇರಿ, ಕಬಿನಿ ನೀರು ಪೋಲಾಗುತ್ತಿದ್ದರೂ ಜಿಲ್ಲೆಯ ಸಂಸದರ ಹಾಗೂ ಶಾಸಕರು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಬಾರ್‌ಕೋಲ್‌ ಹಿಡಿದ ರೈತರು ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳು ಮತ್ತು ಚೆಸ್ಕಾಂ ಅಧಿಕಾರಿಗಳಿಗೆ ಬಾರ್‌ಕೋಲ್ ತೋರಿಸುವ ಮೂಲಕ ಪ್ರತಿಭಟಿಸಿದರಲ್ಲದೆ ಚೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಪೊರಕೆ ಚಳುವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸ್ಥಳಕ್ಕೆ ಎಂಡಿ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಚೆಸ್ಕಾಂ ಅಧಿಕಾರಿಗಳಾದ ಸೋಮಶೇಖರ್ ಕಾರ್ಯಪಾಲಕ ಎಂಜಿನಿಯರ್ ತಬಸ್ಸುಮ್ ರೈತರ ಅಹವಾಲಿಗೆ ಉತ್ತರಿಸಲು ಮುಂದಾದರಾದರೂ ರೈತರು ಅದಕ್ಕೊಪ್ಪಲಿಲ್ಲ, ಎಂಡಿ ಕರೆಸಿ ಎಂದು ಪಟ್ಟು ಹಿಡಿದ ಹಿನ್ನೆಲೆ ಚಾ.ನಗರ ಜಿಲ್ಲಾ ಕೇಂದ್ರಕ್ಕೆ 3 ಗಂಟೆಗೆ ಎಂಡಿ ಆಗಮಿಸಿ ರೈತರ ಅಹವಾಲು ಸ್ವೀಕರಿಸುವ ಭರವಸೆ ಹಿನ್ನೆಲೆ ರೈತರು ಧರಣಿ ಕೈಬಿಟ್ಟರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗೌಡಳ್ಳಿ ಸೋಮಣ್ಣ, ಕುಣಗಳ್ಳಿ ಶಂಕರ್, ಕುಣಗಳ್ಳಿ ಶ್ರೀನಿವಾಸ್ ಮೂರ್ತಿ, ಹನೂರು ಅಧ್ಯಕ್ಷ ಚಂಗಡಿ ಕರಿಯಪ್ಪ, ಮಲ್ಲಯ್ಯನಪುರ ಗ್ರಾಮ ಅಧ್ಯಕ್ಷ ಚಿಕ್ಕರಾಜು, ಗೌಡಹಳ್ಳಿ ಸೋಮಣ್ಣ, ಮೈಕಲ್, ರವಿ ಕಾಮಗೆರೆ, ಸುರೇಂದ್ರ, ಜಿನಕಹಳ್ಳಿ ಮಹೇಶ್, ಸುರೇಶ ಇದ್ದರು. ಆಗಸ್ಟ್ 8 ರಿಂದಲೂ ವಿದ್ಯುತ್ ಸಮಸ್ಯೆ ನಿರಂತರವಾಗಿದೆ. ಇಲ್ಲಿನ ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಸರ್ಕಾರ ಮತ್ತು ಚೆಸ್ಕಾಂ ಅಧಿಕಾರಿಗಳು ರೈತರ ವಿಚಾರದಲ್ಲಿ ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ. ಬಾರ್‌ಕೋಲ್ ನ್ನು ಚೆಸ್ಕಾಂ ಎಂಡಿ, ಮುಖ್ಯಮಂತ್ರಿ ಮತ್ತು ಬಾರ್‌ಕೋಲ್ ಚಳವಳಿಗೆ ಬಗ್ಗದಿದ್ದರೆ ಪೊರಕೆ ಚಳುವಳಿ ನಡೆಸಬೇಕಾಗುವುದು. ನಾವು ಸರ್ಕಾರಕ್ಕೆ ಚಂದ್ರಲೋಕಕ್ಕೆ ಕರೆದುಕೊಂಡು ಹೋಗಿ ಎಂದು ಕೇಳುತ್ತಿಲ್ಲ, ತೋಟದ ಮನೆಗಳಿಗೆ ಕರೆಂಟ್ ಸೌಲಭ್ಯ ನೀಡಿ ಎಂದು ಕೇಳುತ್ತಿದ್ದೇವೆ. ಹೊನ್ನೂರು ಪ್ರಕಾಶ್, ರೈತ ಸಂಘದ ಜಿಲ್ಲಾಧ್ಯಕ್ಷ. ಕೊಳ್ಳೇಗಾಲ ಚೆಸ್ಕಾಂ ಕಚೇರಿ ಮುಂಭಾಗ ರೈತರು ಬಾರ್‌ಕೋಲು ಹಿಡಿದು ಚಳವಳಿ ನಡೆಸಿದರು.

Share this article