ಕನ್ನಡಪ್ರಭ ವಾರ್ತೆ ಹನೂರು ರೈತರು 2 ದಿನಗಳಿಂದ ಲೊಕ್ಕನಹಳ್ಳಿ ನರ್ಸರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಯಾವ ಅಧಿಕಾರಿಯಾಗಲಿ, ಜನಪ್ರತಿನಿಧಿಯಾಗಲಿ ಆಗಮಿಸಿ ನಮ್ಮ ಸಮಸ್ಯೆ ಆಲಿಸಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ಹನೂರಿನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಲೊಕ್ಕನಹಳ್ಳಿ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದೆ. ಕೊಟ್ಟಿಗೆಯಲ್ಲಿ ಸಾಕಿರುವ ದನಕರುಗಳು, ಕುರಿ ಮೇಕೆಗಳನ್ನು ಕೊಂದು ತಿನ್ನುತ್ತಿವೆ. ಈ ಬಗ್ಗೆ ರೈತರು ಪ್ರಶ್ನಿಸಿದರೆ ಬೋನು ಇಟ್ಟಿದ್ದೇವೆ ಪ್ರಾಣಿ ಬೋನಿಗೆ ಬಿದ್ದರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಾರೆ. ಆದರೆ ಯಾವ ಪ್ರಾಣಿಯೂ ಬೋನಿಗೆ ಬೀಳುತ್ತಿಲ್ಲ. ಇದು ರೈತರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ತಿಳಿಸಿದರೆ ಏನು ಪ್ರತಿಕ್ರಿಯಿಸುತ್ತಿಲ್ಲ ಎಂದು ಆರೋಪಿಸಿದರು.ಅಧಿಕಾರಿಗಳು ಇರುವುದು ಸೇವೆ ಮಾಡುವುಕ್ಕಾಗಿ ಆದರೆ ತಾವು ಇರುವುದು ಸೇವೆ ಮಾಡವುದಕ್ಕಾಗಿ ಎಂಬುದನ್ನೇ ಅಧಿಕಾರಿಗಳು ಮರೆತಿದ್ದಾರೆ. ಅಹೋ ರಾತ್ರಿ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದರೂ ಯಾವೊಬ್ಬ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ. ಇದನ್ನು ಖಂಡಿಸಿ ಇಂದು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಸಾಂಕೇತಿಕವಾಗಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಾಗುತ್ತಿದೆ. ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.