ಕನ್ನಡಪ್ರಭ ವಾರ್ತೆ ಮೇಲುಕೋಟೆ
ಡೈರಿ ಕಾರ್ಯದರ್ಶಿ ಕಾಳಮರೀಗೌಡ ಅವ್ಯವಹಾರ ಮಾಡಿದ್ದಾರೆ. ಪ್ರತಿನಿತ್ಯ ಮದ್ಯಪಾನ ಸೇವನೆ ಮಾಡಿ ಕರ್ತವ್ಯ ನಿರ್ವಹಿಸುತ್ತಾರೆ. ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿ ಅವಾಚ್ಯ ಶಬ್ದಗಳ ಬಳಕೆ ಮಾಡುತ್ತಾನೆ. ಕೊಳಚೆ ನೀರಿನಲ್ಲೇ ಹಾಲಿನ ಕ್ಯಾನ್‌ಗಳನ್ನು ಸ್ವಚ್ಛಮಾಡುತ್ತಾನೆ ಎಂದು ಆರೋಪಿಸಿದರು.
ಡೈರಿ ಪ್ರಾರಂಭಗೊಂಡ ಕಳೆದ 37 ವರ್ಷಗಳಿಂದಲೂ ಡೈರಿ ಷೇರುದಾರರಿಗೆ ಯಾವುದೇ ಬೋನಸ್ ನೀಡಿಲ್ಲ. ಪ್ರೋತ್ಸಾಹ ಧನ ಪಾವತಿಸುತ್ತಿಲ್ಲ. ಕಾಲ ಕಾಲಕ್ಕೆ ಬಟವಾಡೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂಘಕ್ಕೆ ಅಧ್ಯಕ್ಷರು, ನಿರ್ದೇಶಕರು ಸೇರಿದಂತೆ ಆಡಳಿತ ಮಂಡಳಿ ಇಲ್ಲದೆ ಅವ್ಯವಸ್ಥೆಯಿಂದ ಕೂಡಿದೆ. ಕೂಡಲೇ ಕಾರ್ಯದರ್ಶಿ ಮರಿಕಾಳೇಗೌಡ ಹಾಗೂ ಮನ್ಮುಲ್ ಮೇಲ್ವಿಚಾರಕ ಪ್ರಜ್ವಲ್‌ರನ್ನು ಸೇವೆಯಿಂದ ವಜಾ ಗೊಳಿಸಬೇಕು ಎಂದು ಒತ್ತಾಯಿಸಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರ ಮನವೊಲಿಸಿದರೂ ಜಗ್ಗದೆ ಪ್ರತಿಭಟನೆ ಮುಂದುವರೆಸಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪ್ರಭಾರ ಉಪನಿಬಂಧಕ ನಾಗಭೂಷಣ್ ಮತ್ತು ಮನ್ಮುಲ್ ಉಪ ವ್ಯವಸ್ಥಾಪಕ ಪ್ರಸಾದ್ ಡೇರಿ ಅವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿ ಕಾರ್ಯದರ್ಶಿ ಮತ್ತು ಮೇಲ್ವಿಚಾರಕನನ್ನು ತರಾಟೆಗೆ ತೆಗೆದುಕೊಂಡರು.
ಪ್ರತಿಭಟನೆಯಲ್ಲಿ ಮುಖಂಡರಾದ ಮಹೇಶ್, ಗೋಪಾಲಕೃಷ್ಣ, ವಿಶ್ವ, ಜಗ, ಬೋರೇಗೌಡ, ಜಯರಾಮೇಗೌಡ, ಎನ್.ಸಿ.ನಂದೀಶ್, ಆಶಾ, ಮೀನಾ, ವೀಣಾ, ಗ್ರಾಪಂ ಮಾಜಿ ಸದಸ್ಯ ಎನ್.ಜೆ.ಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.