ಕುಷ್ಟಗಿ: ನಿರಂತರ ವಿದ್ಯುತ್ ಕಡಿತ, ಕಡಿಮೆ ವೋಲ್ಟೇಜ್ ಹಾಗೂ ಅಘೋಷಿತ ಲೋಡ್‌ಶೆಡ್ಡಿಂಗ್‌ನಿಂದ ಕೃಷಿ ಚಟುವಟಿಕೆ ಅಸ್ತವ್ಯಸ್ತಗೊಂಡಿರುವುದನ್ನು ಖಂಡಿಸಿ ತಾಲೂಕಿನ ಮೆಣೇಧಾಳ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಹಾಗೂ ತಾವರಗೇರಾ ಪಟ್ಟಣದ ರೈತರು ಸೋಮವಾರ ತಾವರಗೇರಾ ಜೆಸ್ಕಾಂ ವಿದ್ಯುತ್ ವಿತರಣೆ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಬಾಷಾಸಾಬ ಮೆಣೇಧಾಳ ಮಾತನಾಡಿ, ಈಗಾಗಲೇ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅಲ್ಪಸ್ವಲ್ಪ ಉಳಿದಿರುವ ಬೆಳೆಗಳನ್ನು ಪಂಪ್‌ಸೆಟ್ ಮೂಲಕ ಉಳಿಸಿಕೊಳ್ಳುವ ಪರಿಸ್ಥಿತಿಯೂ ಇಲ್ಲದಂತಾಗಿದೆ. ವಿದ್ಯುತ್ ವ್ಯತ್ಯಯದಿಂದ ಹೊಲಗಳಲ್ಲಿ ನಾಟಿ ಮಾಡಿರುವ ಬೆಳೆಗಳು ಒಣಗುತ್ತಿದ್ದು, ರೈತರು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುವಂತಾಗಿದೆ. ತಾವರಗೇರಾ 110 ಕೆವಿ ವಿದ್ಯುತ್ ಉಪಕೇಂದ್ರದ ಫೀಡರ್ ಸಮಸ್ಯೆಯನ್ನು ತಕ್ಷಣ ಸರಿಪಡಿಸಬೇಕು. ಮೆಣೇಧಾಳ ಗ್ರಾಮಕ್ಕೆ ಮಂಜೂರಾಗಿರುವ ವಿದ್ಯುತ್ ವಿತರಣೆ ಕೇಂದ್ರದ ಕಾಮಗಾರಿಯನ್ನು ವಿಳಂಬ ಮಾಡದೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಹಲವು ಬಾರಿ ಜೆಸ್ಕಾಂ ಅಧಿಕಾರಿಗಳು ಹಾಗೂ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ರೈತರು ಎಚ್ಚರಿಕೆ ನೀಡಿದರು.ಸ್ಥಳಕ್ಕೆ ಶಾಸಕ ಭೇಟಿ: ಪ್ರತಿಭಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ ದೊಡ್ಡನಗೌಡ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲುಗಳನ್ನು ಆಲಿಸಿದರು. ಬಳಿಕ ಜೆಸ್ಕಾಂ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಸಭೆ ನಡೆಸಿ ಸಮಸ್ಯೆಯ ಕುರಿತು ಸಮಗ್ರ ಮಾಹಿತಿ ಪಡೆದರು. ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಗಿರುವ ದೋಷಗಳನ್ನು ಕೂಡಲೇ ಸರಿಪಡಿಸಿ ಎರಡು ದಿನಗಳೊಳಗೆ ಪರಿಸ್ಥಿತಿ ಸುಧಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎಇಇ ಭರವಸೆ: ಕುಷ್ಟಗಿ ಜೆಸ್ಕಾಂ ಎಇಇ ಕೆಂಚಪ್ಪ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು. ವಿದ್ಯುತ್ ಪೂರೈಕೆಯಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರ ಸರಿಪಡಿಸಿ ರೈತರು ಹಾಗೂ ಸಾರ್ವಜನಿಕರಿಗೆ ಸಮರ್ಪಕ ವಿದ್ಯುತ್ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡರು, ಮೆಣೇಧಾಳ ಗ್ರಾಪಂ ವ್ಯಾಪ್ತಿಯ ಒಂಬತ್ತು ಗ್ರಾಮಗಳ ರೈತರು, ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.