ಸಮಯ ಬದಲಾವಣೆಗೆ ಕುಷ್ಟಗಿಯಲ್ಲಿ ರೈತರ ಪ್ರತಿಭಟನೆ

KannadaprabhaNewsNetwork |  
Published : Oct 29, 2026, 02:30 AM IST
ಕುಷ್ಟಗಿ ಪಟ್ಟಣದ ಜೆಸ್ಕಾಂ ಕಚೇರಿ ಎದುರು ಹತ್ತಾರು ಗ್ರಾಮಗಳ ನೂರಾರು ರೈತರು ಪ್ರತಿಭಟನೆ ನಡೆಸಿ ಎಇಇ ಕೆಂಚಪ್ಪ ಬಾವಿಮನಿ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಬೆಳಗಿನ ಜಾವ 5 ಗಂಟೆಯಿಂದ ವಿದ್ಯುತ್ ಪೂರೈಸಬೇಕು ಹಾಗೂ ಸಾಧ್ಯವಾದಷ್ಟು ಹಗಲಿನ ವೇಳೆಯಲ್ಲಿ ಏಳು ಗಂಟೆಗಳ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ರೈತರು ಕುಷ್ಟಗಿ ಪಟ್ಟಣದ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕುಷ್ಟಗಿ: ರಾತ್ರಿ ಊಟ ಮಾಡಿ ನೆಮ್ಮದಿಯಿಂದ ಮಲಗುವಂತಿಲ್ಲ… ನಸುಕಿನ ಜಾವ ಕಣ್ಣುಜ್ಜಿಕೊಂಡು ಹೊಲದತ್ತ ಹೆಜ್ಜೆ ಹಾಕಬೇಕು… ಕತ್ತಲಿನ ಹಾದಿಯಲ್ಲಿ ಹಾವು - ಚೇಳುಗಳ ಭಯದ ನಡುವೆಯೇ ನೀರು ಹಾಯಿಸಬೇಕು. ಇತ್ತ ವಿದ್ಯುತ್ ವೋಲ್ಟೇಜ್ ಏರಿಳಿತದಿಂದ ಮೋಟಾರ್ ಸುಟ್ಟರೆ ಸಾವಿರಾರು ರುಪಾಯಿ ನಷ್ಟ ಅನುಭವಿಸಬೇಕು!

ಇದು ಕುಷ್ಟಗಿ ತಾಲೂಕಿನ ಹಲವು ಗ್ರಾಮಗಳ ರೈತರ ಇಂದಿನ ಸಂಕಷ್ಟದ ಚಿತ್ರಣ.

ಕೃಷಿಯನ್ನೇ ನಂಬಿ ಬದುಕುತ್ತಿರುವ ಅನ್ನದಾತರಿಗೆ ವಿದ್ಯುತ್ ಪೂರೈಕೆಯ ಸಮಯವೇ ಈಗ ದೊಡ್ಡ ಸಮಸ್ಯೆಯಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಬೆಳಗಿನ ಜಾವ 3 ಗಂಟೆಗೆ ವಿದ್ಯುತ್ ನೀಡುತ್ತಿರುವುದರಿಂದ ಕೃಷಿ ಕಾರ್ಯ ನಡೆಸಲು ತೀವ್ರ ತೊಂದರೆಯಾಗುತ್ತಿದೆ. ಈ ವ್ಯವಸ್ಥೆ ಬದಲಿಸಿ ಬೆಳಗಿನ ಜಾವ 5 ಗಂಟೆಯಿಂದ ವಿದ್ಯುತ್ ಪೂರೈಸಬೇಕು ಹಾಗೂ ಸಾಧ್ಯವಾದಷ್ಟು ಹಗಲಿನ ವೇಳೆಯಲ್ಲಿ ಏಳು ಗಂಟೆಗಳ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ರೈತರು ಕುಷ್ಟಗಿ ಪಟ್ಟಣದ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತ ಮುಖಂಡರು ಮಾತನಾಡಿ, ಹಗಲಿನಲ್ಲಿ ಕೃಷಿ ಕೆಲಸ ಮುಗಿಸಿ, ರಾತ್ರಿ ಊಟ ಮಾಡಿ ನೆಮ್ಮದಿಯಿಂದ ನಿದ್ರಿಸುವ ಅವಕಾಶವೂ ಇಲ್ಲದಂತಾಗಿದೆ. ವಿದ್ಯುತ್ ಯಾವಾಗ ಬರುತ್ತದೆ ಎಂಬುದನ್ನು ಕಾಯುತ್ತಾ ನಿದ್ರೆ ಬಿಟ್ಟು ಹೊಲಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ವಿದ್ಯುತ್ ಪೂರೈಕೆಯಲ್ಲಿನ ವೋಲ್ಟೇಜ್ ಏರಿಳಿತದಿಂದ ಕೃಷಿ ಪಂಪ್‌ಸೆಟ್‌ಗಳ ಮೋಟಾರ್‌ಗಳು ಸುಡುತ್ತಿವೆ. ಮೋಟಾರ್ ದುರಸ್ತಿ ಅಥವಾ ಬದಲಾವಣೆಗೆ ರೈತರು ಸಾವಿರಾರು ರುಪಾಯಿ ಖರ್ಚು ಮಾಡಬೇಕಾಗುತ್ತಿದೆ. ಟ್ರಾನ್ಸ್‌ಫಾರ್ಮರ್‌ (ಟಿಸಿ) ಸುಟ್ಟರೂ ಅದರ ದುರಸ್ತಿ ಹಾಗೂ ಬದಲಾವಣೆಯ ವಿಚಾರದಲ್ಲಿ ರೈತರು ಸ್ವಂತ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ ಎಂದು ರೈತ ಮುಖಂಡ ಕಲ್ಲೇಶ್ ತಾಳದ, ದೇವೇಂದ್ರಪ್ಪ ಬಳೂಟಗಿ ಇತರ ಅನೇಕ ರೈತರು ಸಮಸ್ಯೆಗಳನ್ನು ಮುಂದಿಟ್ಟರು.

ರೈತರ ಆಗ್ರಹ: ಕುಷ್ಟಗಿ ತಾಲೂಕಿನ ನೆರೇಬೆಂಚಿ, ಶಾಖಾಪುರ, ನೀಡಸೇಸಿ, ಮದಲಗಟ್ಟಿ, ಬ್ಯಾಲಿಹಾಳ, ಬೆಂಚಮಟ್ಟಿ, ಕುರುಬನಾಳ, ಯಲಬುರ್ತಿ, ಹಿರೇಬನ್ನಿಗೋಳ ಹಾಗೂ ಕೊರಡಕೇರಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ವಿದ್ಯುತ್ ಪೂರೈಕೆಯ ಸಮಯ ಬದಲಾವಣೆಗೆ ಆಗ್ರಹಿಸಿದರು.

ಜೆಸ್ಕಾಂ ಕಚೇರಿ ಮುತ್ತಿಗೆ ಎಚ್ಚರಿಕೆ: ರೈತರ ಸಮಸ್ಯೆಗಳಿಗೆ ಜೆಸ್ಕಾಂ ಅಧಿಕಾರಿಗಳು ತಕ್ಷಣ ಸ್ಪಂದಿಸಿ ವಿದ್ಯುತ್ ಸರಬರಾಜಿನ ಸಮಯ ಬದಲಾಯಿಸಬೇಕು. ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಕಲ್ಲೇಶ ತಾಳದ, ದೇವೇಂದ್ರಪ್ಪ ಬಳೂಟಗಿ, ಮಾನಪ್ಪ ತಳವಾರ, ಶರಣಪ್ಪ ಹಂಪನಾಳ, ಬಸವರಾಜ ಗಾಣಿಗೇರ, ಕಿರಣಜ್ಯೋತಿ, ಶಿವರಾಜ ಕತ್ತಿ, ಪ್ರಭು ತಾಳದ, ಜಗ್ಗನಗೌಡ ಮಾಲಿಪಾಟೀಲ್‌, ಮಂಜುನಾಥ ನೆರೆಬೆಂಚಿ, ಪರಶುರಾಮ ಚೌಡ್ಕಿ, ಹುಲ್ಲಪ್ಪ ವಣಗೇರಿ, ಹನುಮೇಶ ಗಾಧಾರಿ, ಶ್ರೀನಿವಾಸ ರಾಜೂರು, ಮಲ್ಲಿಕಾರ್ಜುನ ದೋಟಿಹಾಳ ಭಾಗವಹಿಸಿದ್ದರು.

ಟಿಸಿ ಬದಲಿಸಲು ಯಾವುದೆ ಲೈನ್‌ಮ್ಯಾನ್‌ಗೆ ಒಂದು ರುಪಾಯಿ ಕೊಡಬೇಡಿ: ಎಇಇ ಕೆಂಚಪ್ಪ ಬಾವಿಮನಿ

ಪ್ರತಿಭಟನಾ ನಿರತರ ರೈತರ ಮನವಿ ಆಲಿಸಿದ ಜೆಸ್ಕಾಂ ಎಇಇ ಕೆಂಚಪ್ಪ ಬಾವಿಮನಿ ಮಾತನಾಡಿ, ರೈತರಿಗೆ ವಿದ್ಯುತ್ ಸರಬರಾಜಿನಲ್ಲಿ ಉಂಟಾಗುತ್ತಿರುವ ತೊಂದರೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಟ್ರಾನ್ಸ್‌ಫಾರ್ಮರ್‌ (ಟಿಸಿ) ಸುಟ್ಟ ಸಂದರ್ಭದಲ್ಲಿ ರೈತರು ಲೈನ್‌ಮ್ಯಾನ್‌ಗೆ ಒಂದು ರುಪಾಯಿ ಸಹ ನೀಡಬಾರದು.

ಟಿಸಿ ದುರಸ್ತಿ ಅಥವಾ ಬದಲಾವಣೆಗಾಗಿ ಹಣ ಕೇಳುವ ಪ್ರಕರಣಗಳು ಕಂಡುಬಂದಲ್ಲಿ ನಮ್ಮ ಗಮನಕ್ಕೆ ತರಬೇಕು. ಅಂತಹ ಪ್ರಕರಣಗಳ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹೊಲಗಳಲ್ಲಿ ಮನೆಗಳನ್ನು ಹೊಂದಿರುವವರು ಆರ್‌ಆರ್‌ (RR) ಸಂಖ್ಯೆಯನ್ನು ಪಡೆದುಕೊಂಡರೆ, ನಿಯಮಾನುಸಾರ ಸಿಂಗಲ್‌ ಫೇಸ್‌ ವಿದ್ಯುತ್ ಸಂಪರ್ಕ ಕಲ್ಪಿಸಲು ಅವಕಾಶವಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆಧಮ್ಕಿ ಹಾಕಿ ದಾಂಧಲೆ: ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್