ಸಾರಿಗೆ ಬಸ್‌ಗಳಿಗೆ ‘ಕಾವೇರಿ ನಮ್ಮದು’ ಭಿತ್ತಿ ಪತ್ರ ಅಂಟಿಸಿ ರೈತರ ಪ್ರತಿಭಟನೆ

KannadaprabhaNewsNetwork |  
Published : Feb 20, 2024, 01:46 AM IST
 19ಕೆಎಂಎನ್ ಡಿ 16 | Kannada Prabha

ಸಾರಾಂಶ

ರೈತರಿಗೆ ಬೆಳೆಯೂ ಇಲ್ಲ, ಸರ್ಕಾರದಿಂದ ಪರಿಹಾರವೂ ಇಲ್ಲ. ಬರ ಪರಿಸ್ಥಿತಿಯಲ್ಲಿ ನೆರವು ಇಲ್ಲದೆ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಬೆಳೆದು ನಿಂತಿರುವ ಬೆಳೆ ರಕ್ಷಣೆಗೆ ನಾಲೆಗಳಿಗೆ ನೀರು ಹರಿಸಬೇಕಾಗಿದೆ. ಕುಡಿಯುವ ನೀರು ಉಳಿಸಿಕೊಳ್ಳಬೇಕು. ಇಂತಹ ಸಮಯದಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ತಮಿಳುನಾಡಿಗೆ ನೀರು ಬಿಡಲು ಆದೇಶಿಸಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದ್ದರೂ ನಿರ್ಲಕ್ಷ್ಯ ತೋರಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಹಮ್ಮಿಕೊಂಡಿರುವ ವಾರಕ್ಕೊಮ್ಮೆ ಹೋರಾಟ ಮೂರನೇ ಸೋಮವಾರವೂ ಮುಂದುರೆಯಿತು.

ನಗರದ ಸರ್ ಎಂ.ವಿ.ಪ್ರತಿಮೆ ಎದುರು ಪ್ರತಿ ಸೋಮವಾರದ ಹೋರಾಟದಲ್ಲಿ ವಿವಿಧ ಸಂಘಟೆಗಳ ಮುಖಂಡರು, ರೈತರು ಪಾಲ್ಗೊಂಡು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಆಳುವ ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಕಾವೇರಿ ನಮ್ಮದು ಭಿತ್ತಿ ಪತ್ರವನ್ನು ಸಾರಿಗೆ ಬಸ್‌ಗಳಿಗೆ ಅಂಟಿಸಿದ ಹೋರಾಟಗಾರರು, ಪ್ರತಿ ತಿಂಗಳು ಎರಡೂವರೆ ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶ ಮಾಡಿರುವ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಈ ಬಗ್ಗೆ ರಾಜ್ಯ ಸರ್ಕಾರ ಬಾಯಿ ಬಿಡುತ್ತಿಲ್ಲ. ಕೇಂದ್ರ ಸರ್ಕಾರ ಕಂಡು ಕಾಣದಂತೆ ಮೌನವಹಿಸಿದೆ ಎಂದು ಕಿಡಿಕಾರಿದರು.

ನೆರೆ ರಾಜ್ಯಕ್ಕೆ ನೀರು ಹರಿಸಿದ ಪರಿಣಾಮ ಜಲಾಶಯಗಳೆಲ್ಲ ಬರಿದಾಗಿವೆ. ಬೆಳೆಗಳು ಒಣಗಿ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆ ಉಳಿಸಿಕೊಳ್ಳಲು ನೀರು ಬಿಡುತ್ತಿಲ್ಲ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತರಿಗೆ ಬೆಳೆಯೂ ಇಲ್ಲ, ಸರ್ಕಾರದಿಂದ ಪರಿಹಾರವೂ ಇಲ್ಲ. ಬರ ಪರಿಸ್ಥಿತಿಯಲ್ಲಿ ನೆರವು ಇಲ್ಲದೆ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಬೆಳೆದು ನಿಂತಿರುವ ಬೆಳೆ ರಕ್ಷಣೆಗೆ ನಾಲೆಗಳಿಗೆ ನೀರು ಹರಿಸಬೇಕಾಗಿದೆ. ಕುಡಿಯುವ ನೀರು ಉಳಿಸಿಕೊಳ್ಳಬೇಕು. ಇಂತಹ ಸಮಯದಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ರೈತ ಸಂಘದ ಮುಖಂಡರಾದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ದಸಂಸ ಎಂ.ವಿ.ಕೃಷ್ಣ, ಸುಜಾತ ಕೃಷ್ಣ, ಜಯ ಕರ್ನಾಟಕ ಸಂಘಟನೆ ನಾರಾಯಣ್, ಎ.ಎಲ್.ಬಸವೇಗೌಡ, ಫಯಾಜ್, ನಾರಾಯಣಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ