ಸದಾಶಿವ ಆಯೋಗ ವರದಿ ಶಿಫಾರಸ್ಸು ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Feb 20, 2024, 01:46 AM IST
ಫೋಟೊ ಶೀರ್ಷಿಕೆ: 19ಆರ್‌ಎನ್‌ಆರ್2 ರಾಣಿಬೆನ್ನೂರಿನ ಕೋರ್ಟ್ ಸರ್ಕಲ್ ಬಳಿ ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದನ್ನು ಖಂಡಿಸಿ ತಾಲೂಕು ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳ ಒಕ್ಕೂಟದ ಸದಸ್ಯರು ಮಾನವ ಸರಪಳಿ ರಚಿಸುವ ಮೂಲಕ ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದನ್ನು ಖಂಡಿಸಿ ತಾಲೂಕು ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳ ಒಕ್ಕೂಟದ ಸದಸ್ಯರು ಸೋಮವಾರ ನಗರದಲ್ಲಿ ಪ್ರತಿಭಟಿಸಿ ತಹಸೀಲ್ದಾರ ಗುರುಬಸವರಾಜ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ವಿಕಾಸ ನಗರದ ಸೇವಾಲಾಲ್ ದೇವಸ್ಥಾನದ ಬಳಿಯಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ಮೆಡ್ಲೇರಿ ರಸ್ತೆ, ಪುನಿತ್ ರಾಜಕುಮಾರ ಸರ್ಕಲ್, ಬಸ್‌ನಿಲ್ದಾಣ ರಸ್ತೆ ಮಾರ್ಗ ಕೋರ್ಟ್ ಸರ್ಕಲ್‌ವರೆಗೆ ಸಾಗಿ ಬಂದು ಮಾನವ ಸರಪಳಿ ರಚಿಸಿ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಸರ್ಕಾರ ಸದಾಶಿವ ವರದಿ ಜಾರಿಗೆ ಶಿಫಾರಸ್ಸು ಮಾಡಿದ್ದರಿಂದ ಬಂಜಾರ ಸೇರಿ ಅನೇಕ ಜಾತಿಯವರಿಗೆ ಅನ್ಯಾಯವಾಗಿದೆ. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳ ಸ್ಥಿತಿಗತಿ, ಸರ್ಕಾರದ ಸೌಲಭ್ಯಗಳ ಹಂಚಿಕೆ ಮತ್ತು ವಿತರಣೆಯಲ್ಲಿ ಆಗುವ ತಾರತಮ್ಯ ಕುರಿತು ಅಧ್ಯಯನ ಮಾಡಲು 2005ರಲ್ಲಿ ರಾಜ್ಯ ಸರ್ಕಾರ ನ್ಯಾ. ಎನ್.ವೈ. ಹನುಮಂತಪ್ಪ ನೇತೃತ್ವದ ಏಕ ಸದಸ್ಯ ಆಯೋಗ ರಚಿಸಿತ್ತು. ನಂತರ ಅದರ ಜವಾಬ್ದಾರಿಯನ್ನು ನ್ಯಾ. ಬಾಲಕೃಷ್ಣ ವಹಿಸಿಕೊಂಡಿದ್ದರು. ಇವರಿಬ್ಬರ ಆಯೋಗದ ಜವಾಬ್ದಾರಿ ವಹಿಸಿಕೊಂಡ ನ್ಯಾ. ಎ.ಜೆ.ಸದಾಶಿವ ಅವರು 2012ರಲ್ಲಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಆ ವರದಿಯಲ್ಲಿ ಕೆಲವು ಅಂಶಗಳು ಸೋರಿಕೆಯಾಗಿದ್ದು ಅದರ ಪ್ರಕಾರ ಪರಿಶಿಷ್ಟ ಪಟ್ಟಿಯ ಕೆಲ ಸಮುದಾಯಗಳನ್ನು ಒಲೈಸುವ ಮತ್ತು ಕೆಲವು ಸಮುದಾಯಗಳನ್ನು ಅಪಮಾನ ಮಾಡಿರುವ ಅಂಶಗಳು ಕಂಡು ಬಂದಿವೆ. ಒಂದು ವೇಳೆ ಸದಾಶಿವ ಆಯೋಗದ ಜಾರಿಯಾದಲ್ಲಿ ಬಂಜಾರ, ಭೋವಿ, ಕೊರಚ, ಕೊರಮ, ಅಲೆಮಾರಿ ಸಮುದಾಯಗಳು ಸಾಂವಿಧಾನಿಕ ಮೀಸಲಾತಿಯಿಂದ ವಂಚಿತರಾಗುವ ಸಂಭವವಿದೆ. ಸದಾಶಿವ ಆಯೋಗದ ವರದಿಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು ಅದರಲ್ಲಿರುವ ಅಂಶಗಳು ಏಕಪಕ್ಷೀಯವಾಗಿದೆ. ಆದ್ದರಿಂದ ಸರ್ಕಾರ ವರದಿ ಜಾರಿಗೆ ಶಿಫಾರಸ್ಸು ಮಾಡಿರುವುದನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಮಾನಪ್ಪ ಲಮಾಣಿ, ಬೀರಪ್ಪ ಲಮಾಣಿ, ರಮೇಶ ನಾಯಕ, ವಸಂತ ಲಮಾಣಿ, ಕುಮಾರ ಲಮಾಣಿ, ಮಾಲತೇಶ ಲಮಾಣಿ, ಪರಮೇಶ ಲಮಾಣಿ, ಮಂಜುನಾಥ ವಡ್ಡರ, ಗಣೇಶ ಬಂಡಿವಡ್ಡರ, ಎಚ್.ಟಿ. ಅರಳಿಕಟ್ಟಿ, ಜಗದೀಶ ಕೆರೂಡಿ, ಹನುಮಂತಪ್ಪ ಭೋವಿ, ಮಂಜಣ್ಣ ವಡ್ಡರ, ಮಂಜಣ್ಣ ಕಮದೋಡ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ