ವಿಜಯಪುರ: ಶಿವಾಜಿ ಮಾಹಾರಾಜರು ಅಪ್ರತಿಮ ದೇಶಭಕ್ತರು, ಹಿಂದು ಸಾಮ್ರಾಜ್ಯದ ಉಳಿವಿಗಾಗಿ ನಿರಂತರ ಹೋರಾಟ ಮಾಡಿದ್ದು, ಮೊಘಲರಿಗೆ ಸಿಂಹಸ್ವಪ್ನರಾಗಿ ಕಾಡುವ ಮೂಲಕ ದೇಶದ ಸಂಸ್ಕೃತಿಯನ್ನು ಉಳಿಸಿದ್ದಾರೆ. ಅಂತಹ ವೀರ ಸಾಮ್ರಾಟನಿಗೆ ಗೌರವ ಅರ್ಪಿಸುತ್ತಿದ್ದೇವೆ. ಇದು ನಮ್ಮ ಆದ್ಯ ಕರ್ತವ್ಯ ಎಂದು ಮಾಜಿ ಸಚಿವ ಅಪ್ಪಾಸಹೇಬ ಪಟ್ಟಣಶೆಟ್ಟಿ ಹೇಳಿದರು. ನಗರದ ಶಿವಾಜಿ ವೃತ್ತದಲ್ಲಿ ಮರಾಠ ಸಮುದಾಯದಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 394 ನೇ ಜಯಂತಿ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರತಿಮ ದೇಶ ಭಕ್ತ ಶಿವಾಜಿಯ ಆದರ್ಶಗಳನ್ನು ನಮ್ಮ ಮಕ್ಕಳಿಗೆ ತಿಳಿಸಬೇಕು. ಅವರಲ್ಲಿದ್ದ ಶೌರ್ಯ, ಸಾಹಸದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿಂದು ಸಾಮ್ರಾಜ್ಯದ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಭರತ ಭೂಮಿಯನ್ನು ರಕ್ಷಣೆ ಮಾಡಿದ್ದಾರೆ. ಅಂತಹ ವೀರ ಸಾಮ್ರಾಟನ ದೇಶ ಭಕ್ತಿಯನ್ನು ನಾವೆಲ್ಲ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.