ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರ ಫಲವತ್ತಾದ ಸಾವಿರಾರು ಎಕರೆ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿಗಾಗಿ ಪಡೆಯಲು ಅಧಿಸೂಚನೆ ಹೊರಡಿಸಿರುವ ಸರ್ಕಾರದ ನಡೆಯನ್ನು ವಿರೋಧಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.ನಗರದ ಹೊರವಲಯದ ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಶುಕ್ರವಾರದಿಂದ ಪ್ರಾರಂಭವಾಗಿರುವ ಅನಿರ್ಧಿಷ್ಟಾವಧಿ ಧರಣಿಯ ಮೂರನೇ ದಿನವಾದ ಭಾನುವಾರ ಮಾತನಾಡಿ, ಕೆಐಎಡಿಬಿಯಿಂದ ಕೈಗಾರಿಕೆ ಪ್ರದೇಶಕ್ಕೆ ರೈತರಿಂದ ಬಲವಂತವಾಗಿ ಭೂಮಿ ಕಬಳಿಸುವ ಹುನ್ನಾರ ಕೈಬಿಡುವಂತೆ ಹಲವು ಬಾರಿ ಹೋರಾಟ ನಡೆಸಿದರೂ ಮತ್ತೆ ಮತ್ತೆ ಸರ್ಕಾರ ಅಧಿಸೂಚನೆ ಹೊರಡಿಸುತ್ತಿದೆ. ಆ ಭಾಗದಲ್ಲಿ ಕೃಷಿಕರು ರೇಷ್ಮೆ, ತರಕಾರಿ, ಹೂವು ಬೆಳೆಯುತ್ತಾರೆ. ಆದ್ದರಿಂದ ಸರ್ಕಾರ ರೈತರ ಜಮೀನು ಉಳಿಸುವಂತೆ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಬೆಳೆಯುತ್ತಿರುವ ಮೆಕ್ಕೆ ಜೋಳದ ಬೆಲೆ ಕ್ವಿಂಟಲ್ ಗೆ 6 ಸಾವಿರ ಇದ್ದದ್ದು ಈಗ 3 ಸಾವಿರಕ್ಕಿಂತ ಕೆಳಗೆ ಕುಸಿದಿದೆ. ಸರ್ಕಾರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಬೇಕು. ಹಾಗೆಯೇ ಪೆರೇಸಂದ್ರದ ಜೋಳದ ವ್ಯಾಪಾರಿ ರಾಮಕೃಷ್ಣರಿಗೆ ಹೈದರಾಬಾದ್ ವ್ಯಾಪಾರಿಗಳು ಮಾಡಿದ ವಂಚನೆಗೆ ಬೆಂಬಲವಾಗಿ ನಿಂತಿರುವ ವಸತಿ ಸಚಿವ ಜಮೀರ್ ಅಹಮದ್ ವಿರುದ್ಧ ದೂರು ದಾಖಲಿಸಬೇಕು ಹಾಗೂ ಹೋರಾಟಕ್ಕೆ ಹತ್ತು ದಿನ ಮೊದಲೇ ಅನುಮತಿ ಪಡೆಯಬೇಕೆಂಬ ಡೀಸಿ ಆದೇಶ ವಾಪಸ್ಸು ಪಡೆಯುವಂತೆ ಒತ್ತಾಯಿಸಿದರು.ಚಳಿ, ಮಳೆ, ಗಾಳಿ, ಬಿಸಿಲು ಲೆಕ್ಕಿಸದೇ ಕುಟುಂಬ ಸಮೇತರಾಗಿ ಕಳೆದ ಮೂರು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ನಮ್ಮ ಪ್ರತಿಭಟನೆ ಶಿಡ್ಲಘಟ್ಟಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮುಟ್ಟಬೇಕು ಎಂದು ರೈತರಿಗೆ ಮನವಿ ಮಾಡಿದರು.
ಅನಿರ್ಧಿಷ್ಟಾವಧಿ ಧರಣಿಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎಚ್.ವಿ. ರಾಮನಾಥ, ಪದಾಧಿಕಾರಿಗಳಾದ ಗುಡಿಬಂಡೆ ರಾಮನಾಥ್, ಸೀನಪ್ಪ, ವೇಣುಗೋಪಾಲ್, ಜಂಗಮಕೋಟೆ ಭೂಮಿ ಹೋರಾಟ ಸಮಿತಿ ಅಧ್ಯಕ್ಷ ರಾಮಕೃಷ್ಣಪ್ಪ, ರಾಜಣ್ಣ, ನೆಲಮಾಕಲಹಳ್ಳಿ ಗೋಪಾಲ್, ಜೋಳದ ಕಿಟ್ಟಣ್ಣ, ತಾದೂರು ಮಂಜುನಾಥ್, ವೇಣುಗೋಪಾಲ್, ಹಿತ್ತಲಹಳ್ಳಿ ರಮೇಶ್, ಬಸವಾಪಟ್ಟಣ ಭೈರೇಗೌಡ, ನಾಗೇಶ್, ರಾಮಾಂಜಿನಪ್ಪ, ಸೋಮಶೇಖರೆಡ್ಡಿ, ಕುಪ್ಪಹಳ್ಳಿ ಶ್ರೀನಿವಾಸ್, ರಾಮಕೃಷ್ಣ, ಜಂಗಮಕೋಟೆ ಹೋಬಳಿ ಹೋರಾಟ ಸಮಿತಿ ಅಧ್ಯಕ್ಷ ಬಲ್ಲದ ಕೃಷ್ಣಪ್ಪ, ಅಂಬಿಕ, ರುಕ್ಮಣಮ್ಮ, ಲಕ್ಷ್ಮೀ, ಶಿಲ್ಪ, ನೂರಾರು ಮಂದಿ ರೈತರು, ಮಹಿಳೆಯರು ಇದ್ದರು.