ಜಿಂಕೆ ಹಾವಳಿಯಿಂದ ಬೆಳೆ ರಕ್ಷಣೆಗೆ ರೈತರ ಪರದಾಟ!

KannadaprabhaNewsNetwork |  
Published : Jun 26, 2026, 02:45 AM IST
ಹೊಲದಲ್ಲಿ ಅಲ್ಪ ಮಳೆಗೆ ಬಿತ್ತಿದ ಬೆಳೆಗಳನ್ನ ತಿನ್ನಲು ದಾಂಗುಡಿ ಇಟ್ಟ ಜಿಂಕೆ ಹಿಂಡು. | Kannada Prabha

ಸಾರಾಂಶ

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸುರಿದಿದ್ದು, ಸುರಿದ ಅಲ್ಪ ಮಳೆಗೆ ರೈತರು ಧೈರ್ಯ ಮಾಡಿ ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ. ಜೂನ್‌ ತಿಂಗಳು ಮುಗಿಯುತ್ತಾ ಬಂದರೂ ಮಳೆ ಸುರಿಯದೇ ಇರುವುದರಿಂದ ರೈತರು ಅಕ್ಷರಶಃ ಚಿಂತೆಗೀಡಾಗಿದ್ದಾರೆ.

ಮಹೇಶ ಛಬ್ಬಿಗದಗ: ಒಂದೆಡೆ ಮುಂಗಾರು ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಮಳೆ ಇಲ್ಲದೇ ಒಣಗುತ್ತಿವೆ. ಇನ್ನೊಂದೆಡೆ ಜಿಂಕೆ ಹಾವಳಿಯಿಂದಾಗಿ ರೈತರು ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸುರಿದಿದ್ದು, ಸುರಿದ ಅಲ್ಪ ಮಳೆಗೆ ರೈತರು ಧೈರ್ಯ ಮಾಡಿ ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ. ಜೂನ್‌ ತಿಂಗಳು ಮುಗಿಯುತ್ತಾ ಬಂದರೂ ಮಳೆ ಸುರಿಯದೇ ಇರುವುದರಿಂದ ರೈತರು ಅಕ್ಷರಶಃ ಚಿಂತೆಗೀಡಾಗಿದ್ದಾರೆ.

ಅಲ್ಪ ಮಳೆಗೆ ಬಿತ್ತಿದ ಬೆಳೆಗೆ ಸದ್ಯ ಮಳೆ ಅವಶ್ಯವಿದ್ದು, ಜಿಲ್ಲಾದ್ಯಂತ ರೈತರು ದೇವರ ಮೊರೆ ಹೋಗಿದ್ದು, ಗುರ್ಜಿ ಸೇವೆ ಸೇರಿದಂತೆ ನಾನಾ ಪೂಜಾ ಕೈಂಕರ್ಯಗಳನ್ನು ಮಾಡುತ್ತಿದ್ದಾರೆ. ಇದರೊಂದಿಗೆ ಹೊಲದಲ್ಲಿ ಮಳೆಗಾಗಿ ಕಾಯುತ್ತ ನಿಂತಿರುವ ಬೆಳೆಗಳಿಗೆ ಜಿಂಕೆಗಳು ಹಿಂಡುಗಟ್ಟಲೆ ದಾಳಿ ಮಾಡಿ ಬೆಳೆನಾಶ ಮಾಡುತ್ತಿದ್ದು, ಇದು ರೈತರನ್ನು ಕಂಗೆಡಿಸಿದೆ.

ಆಹಾರ ಅರಸಿ ಬರುವ ಜಿಂಕೆಗಳು ರೈತರ ಜಮೀನುಗಳಿಗೆ ದಾಂಗುಡಿ ಇಡುತ್ತಿದ್ದು, ಹೊಲದಲ್ಲಿ ಬಿತ್ತನೆ ಮಾಡಿದ ಶೇಂಗಾ, ಹೆಸರು, ಹತ್ತಿ ಇನ್ನಿತರ ಬೆಳೆಗಳ ಚಿಗುರನ್ನು ತಿಂದು ನಾಶಪಡಿಸುತ್ತಿವೆ. ಜಿಂಕೆ ಹಾವಳಿಯಿಂದ ಬೆಳೆನಾಶವಾಗುವ ಭೀತಿಯಲ್ಲಿ ರೈತರು ಬೆಳೆ ರಕ್ಷಣೆಗೆ ಹರಸಾಹಸ ಪಡುವಂತಾಗಿದೆ.ಬೆಳೆ ರಕ್ಷಣೆಗೆ ಬಿಯರ್‌ ಬಾಟಲ್‌: ಶೇಂಗಾ, ಹೆಸರು, ಹತ್ತಿ, ಗೋವಿನಜೋಳ ಸೇರಿದಂತೆ ಇನ್ನಿತರ ಬೆಳೆಗಳನ್ನು ಈ ಭಾಗದಲ್ಲಿ ಬಿತ್ತನೆ ಮಾಡಲಾಗಿದೆ. ಹೊಲಕ್ಕೆ ಆಹಾರ ಅರಸಿ ಬರುವ ಜಿಂಕೆಗಳ ಹಿಂಡು ಬೆಳೆಗಳನ್ನು ತುಳಿದು, ಚಿಗುರನ್ನು ತಿಂದು ನಾಶಪಡಿಸುತ್ತಿವೆ. ಜಿಂಕೆ ಹಾವಳಿಯನ್ನು ತಪ್ಪಿಸಿ, ಬೆಳೆ ರಕ್ಷಿಸಲು ರೈತರು ಬಿಯರ್‌ ಬಾಟಲ್‌ಗಳ ಮೊರೆ ಹೋಗಿದ್ದು, ರಸ್ತೆ ಅಕ್ಕಪಕ್ಕದಲ್ಲಿ ಬಿದ್ದಿರುವ ಖಾಲಿ ಬಿಯರ್‌ ಬಾಟಲ್‌ಗಳನ್ನು ತಂದು ಹೊಲದಲ್ಲಿರುವ ಗಿಡ, ಮರಗಳಿಗೆ ನೇತು ಹಾಕಿ ಗಾಳಿ ಬೀಸುವ ರಭಸಕ್ಕೆ ಬಿಯರ್ ಬಾಟಲ್‌ಗಳು ಒಂದಕ್ಕೊಂದು ತಾಗಿದಾಗ ಅವುಗಳ ಶಬ್ದಕ್ಕೆ ಜಿಂಕೆಗಳು ಭಯಗೊಂಡು ಓಡುತ್ತವೆ ಎನ್ನುತ್ತಾರೆ ರೈತರು. ಆದರೆ ರೈತರಿಗೆ ಜಿಂಕೆ ಹಾವಳಿ ಕಂಟಕವಾಗಿ ಪರಿಣಮಿಸಿದ್ದು, ಬೆಳೆಗಳನ್ನುನಿತ್ಯ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಕಪ್ಪತ್ತಗುಡ್ಡ ಸೆರಗಿನ ನಾಗಾವಿ, ಬೆಳಧಡಿ, ಸೊರಟೂರು, ಕಣವಿ, ಹೊಸೂರು, ಹರ್ತಿ, ಶಿರುಂಜ, ಯಲಿಶಿರುಂಜ, ಮಹಾಲಿಂಗಪುರ, ಮುಳಗುಂದ, ಮಾಗಡಿ, ಯಳವತ್ತಿ, ಚಿಂಚಲಿ, ಕಲ್ಲೂರು, ನೀಲಗುಂದ, ಕುರ್ತಕೋಟಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಜಿಂಕೆ ಹಾವಳಿ ವ್ಯಾಪಕವಾಗಿದ್ದು, 20- 30 ಜಿಂಕೆಗಳು ಹಿಂಡುಗಟ್ಟಲೆ ತೋಟಗಾರಿಕೆ, ಮಳೆಯಾಶ್ರಿತ ಬೆಳೆಗಳಿಗೆ ದಾಳಿ ಮಾಡಿ ಬೆಳೆ ನಾಶಪಡಿಸುತ್ತಿವೆ. ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ಕೆಲಸವಾಗಿದೆ ಎನ್ನುತ್ತಾರೆ ರೈತರು.ಬರದ ಛಾಯೆ: ಪ್ರಸಕ್ತ ವರ್ಷ ಮುಂಗಾರು ಮಳೆ ಕೊರತೆಯಿಂದ ರೈತರಲ್ಲಿ ಆತಂಕ ಹೆಚ್ಚಾಗಿದ್ದು, ಮುಂಗಾರು ಕೈ ಹಿಡಿಯುವ ಭರವಸೆ ರೈತರಲ್ಲಿ ಕಾಣುತ್ತಿಲ್ಲ. ಬೆಳೆಗಳು ಒಣಗುತ್ತಿರುವುದನ್ನು ಕಂಡು ರೈತರು ಕಣ್ಣೀರಿಡುತ್ತಿದ್ದಾರೆ. ಮುಂದೆ ಮಳೆಯಾದರೆ ಬೆಳೆ ಉಳಿಯಬಹುದು. ಅದರೊಂದಿಗೆ ಬಿತ್ತನೆ ಮಾಡಿದ ಬೆಳೆಗಳು ಜಿಂಕೆ ಹಾವಳಿಯಿಂದ ನಾಶವಾಗುತ್ತಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಜಿಂಕೆ ಹಾವಳಿಗೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎನ್ನುವುದು ರೈತರ ಆಗ್ರಹ.

ಶಾಶ್ವತ ಕ್ರಮ: ಕಳೆದ ವರ್ಷ ಅತಿಯಾಗಿ ಮಳೆ ಸುರಿದು ಬೆಳೆಗಳೆಲ್ಲ ಸಂಪೂರ್ಣ ನಾಶವಾದವು. ಈ ಬಾರಿ ಮುಂಗಾರು ಮಳೆ ಕೊರತೆ ಇದ್ದು, ಅಲ್ಪ ಮಳೆಗೆ ಬಿತ್ತಿದ ಬೆಳೆಗಳನ್ನು ಜಿಂಕೆಗಳು ತಿಂದು, ತುಳಿದು ನಾಶಪಡಿಸುತ್ತಿವೆ. ಬೆಳೆಗಳ ರಕ್ಷಣೆ ಮಾಡುವುದೇ ಒಂದು ಕೆಲಸವಾಗಿದೆ. ಜಿಂಕೆ ಹಾವಳಿ ತಪ್ಪಿಸಲು ಸಂಬಂಧಪಟ್ಟ ಇಲಾಖೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ರೈತರಾದ ಮಹಾಂತೇಶ ಗುಂಜಳ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಎಸ್ಡಿಎಂಸಿ ಕೊಡುಗೆ ಅನನ್ಯ
ಮುಂಗಾರು ಬಿತ್ತನೆ ಮಾಡಿದ ರೈತರಲ್ಲಿ ಆತಂಕ!